Advertisement

ಅಪಾಯ ಮಟ್ಟ ಮೀರಿದ ನೇತ್ರಾವತಿ ನದಿ

10:48 AM Aug 15, 2018 | |

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಹೆಚ್ಚುತ್ತಿರುವ ನೆರೆ ನೀರು, ಸತತ ಮಳೆ, ನಗರ ಗ್ರಾಮಾಂತರ ಪ್ರದೇಶಗಳ ತಗ್ಗು ಪ್ರದೇಶಗಳು ನೆರೆ ನೀರಿನಿಂದ ಆವೃತ್ತವಾಗಿದ್ದು ನದಿ ನೀರಿನ ಮಟ್ಟ ಮಧ್ಯಾಹ್ನ 2ಗಂಟೆ ಸುಮಾರಿಗೆ ಅಪಾಯ ಮಟ್ಟ 9 ಮೀಟರ್‌ ದಾಟುತ್ತಿದ್ದಂತೆ ಜಿಲ್ಲಾಡಳಿತ ಜನ, ಜಾನುವಾರು, ಸೊತ್ತುಗಳ ರಕ್ಷಣೆಗೆ ಹೈ ಅಲರ್ಟ್‌ ಘೋಷಿಸಿದೆ. 

Advertisement

ಸ್ವತಃ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಪಾಣೆಮಂಗಳೂರು ಆಲಡ್ಕ, ಜಕ್ರಿಬೆಟ್ಟು, ಬಸ್ತಿಪಡ್ಪು  ತಗ್ಗು ಪ್ರದೇಶದಲ್ಲಿ ಮುಳುಗಡೆ ಆಗಿರುವ ಮನೆ ನಿವೇಶನಗಳ ಬಳಿಗೆ ತೆರಳಿದರಲ್ಲದೆ, ನಿರ್ವಸಿತರಿಗೆ ಗಂಜಿ ಕೇಂದ್ರವನ್ನು ಆರಂಭಿಸುವಂತೆ ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರಿಗೆ ಸೂಚಿಸಿದರು. ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮುಳುಗಡೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಂದಾಯ ಇಲಾಖೆ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿದ್ದು, ಮುಂಜಾಗೃತ ಕ್ರಮಗಳ ಬಗ್ಗೆ ಸಮಾಲೋಚಿಸಿದರು.

ಜೀವಹಾನಿ ಆಗುವಂತಹ ಯಾವುದೇ ಅಪಾಯಕ್ಕೆ ಜನರು ಈಡಾಗದಂತೆ ಕ್ರಮ ಕೈಗೊಳ್ಳಲು ಶಾಸಕರು ಸೂಚಿಸಿದರು. ಸಾರ್ವಜನಿಕರು ನೀರಿಗೆ ಇಳಿಯದಂತೆ, ನೀರಿನಲ್ಲಿ ಹರಿದು ಬರುವ ಸೊತ್ತು, ಮರದ, ಕಟ್ಟಿಗೆ ಸಾಮಗ್ರಿಗಳನ್ನು, ತೆಂಗಿನಕಾಯಿ ಇತ್ಯಾದಿ ವಸ್ತುಗಳನ್ನು ಹೆಕ್ಕಿಕೊಳ್ಳುವ ಸಾಹಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಿದ್ದಾರೆ.

ಸೈರನ್‌ ಮೊಳಗಿಸಿ
ಶಂಭೂರು ಎಎಂಆರ್‌ ಡ್ಯಾಂನಿಂದ ಹೆಚ್ಚುವರಿ ನೀರನ್ನು ಹೊರಗೆ ಹರಿಯಬಿಡುತ್ತಿದ್ದು, ಮಂಗಳವಾರ 11ಕ್ಕೆ ಸೈರನ್‌ ಮೊಳಗಿಸುವ ಮೂಲಕ ಜನರನ್ನು ಎಚ್ಚರಿಸಲಾಗಿದೆ. ಜಿಲ್ಲಾಡಳಿತ, ತಹಶೀಲ್ದಾರ್‌ಗೆ ಹೆಚ್ಚುವರಿ ನೀರು ಹರಿದು ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ನೆರೆ ಇನ್ನಷ್ಟು ಹೆಚ್ಚುವ ಸಂಭವದ ಬಗ್ಗೆ ಅಭಿಪ್ರಾಯ ನೀಡಿದ್ದಾರೆ. ತುಂಬೆ ಡ್ಯಾಂನಲ್ಲಿ ಎಲ್ಲ ಕ್ರಸ್ಟ್‌ ಗೇಟ್‌ ಗಳನ್ನು ಸಂಪೂರ್ಣ ಮೇಲಕ್ಕೆ ಎತ್ತಲಾಗಿದ್ದು ನೀರನ್ನು ಹರಿಯ ಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next