Advertisement
ತಲಪಾಡಿ ಗ್ರಾಮ ಪಂಚಾಯತ್‌ನ ನಗರ ಪ್ರದೇಶದ ಜನರಿಗೆ ಮಾರ್ಚ್ ತಿಂಗಳು ಬಂತೆಂದರೆ ಸಮಸ್ಯೆಗಳ ದಿನಗಳು ಆರಂಭವಾದವು ಎಂದೇ ಅರ್ಥ. ಒಂದೆಡೆ ಬಿರು ಬಿಸಿಲು ಇನ್ನೊಂದೆಡೆ ನೀರಿಗಾಗಿ ಪರದಾಟ. ಇಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ನೇತ್ರಾವತಿ ನದಿ ನೀರೊಂದೇ ಪರಿಹಾರ ಎನ್ನುತ್ತಾರೆ ಸ್ಥಳೀಯರು.
ಪಂಚಾಯತ್‌ನ 1, 2, 3ನೇ ವಾರ್ಡ್‌ನಲ್ಲಿ ನೀರಿನ ಮೂಲ ಇಲ್ಲದೆ ಬಾವಿ, ಬೋರ್‌ವೆಲ್ ನಿರ್ಮಾಣವೇ ಅಸಾಧ್ಯವಾಗಿದೆ. ಕೆಲವೆಡೆ ಸುಮಾರು 600 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ದೇವಿನಗರ, ಪಂಜಾಳ, ದೇವಿಪುರ, ತಚ್ಛಾಣಿ, ರಾಮನಗರಗಳಲ್ಲಿ ಎಪ್ರಿಲ್ ಬಳಿಕ ನೀರಿನ ಸಮಸ್ಯೆ ಹೆಚ್ಚಾಗಿರುತ್ತದೆ. ಮಾರ್ಚ್ ತಿಂಗಳಲ್ಲೇ ದಿನವೊಂದಕ್ಕೆ 10 ಟ್ಯಾಂಕರ್ ನೀರುಗಳನ್ನು ಪೂರೈಸಲಾಗುತ್ತಿದ್ದು, ಎಪ್ರಿಲ್ ತಿಂಗಳಲ್ಲಿ ಅದರ ಮೂರು ಪಟ್ಟು ಹೆಚ್ಚು ನೀರು ಪೂರೈಸಲಾಗುತ್ತದೆ ಎನ್ನುತ್ತಾರೆ ನೀರು ಸರಬರಾಜು ಮಾಡುವವರು. ಕಳೆದ ಬಾರಿ ಗ್ರಾಮ ಪಂಚಾಯತ್ ಟ್ಯಾಂಕರ್ ನೀರಿಗಾಗಿ ಎರಡು ಲಕ್ಷ ರೂ. ಖರ್ಚು ಮಾಡಿತ್ತು. ಈ ಬಾರಿ ನೀರಿನ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
Related Articles
ಕಳೆದ ಹತ್ತು ವರ್ಷದ ಹಿಂದೆ ತಲಪಾಡಿ ಗ್ರಾಮ ಪಂಚಾಯತ್ ಬಳಿ ಲಕ್ಷಾಂತರ ರೂ. ವೆಚ್ಚ ಮಾಡಿ ಓವರ್‌ಹೆಡ್ ಟ್ಯಾಂಕ್ ರಚಿಸಿದ್ದು, ನೀರು ಸರಬರಾಜು ಆಗದೆ ನಾದುರಸ್ಥಿಯಲ್ಲಿದ್ದು ಕುಸಿಯುವ ಹಂತದಲ್ಲಿದೆ. ಇನ್ನೊಂದು ಟ್ಯಾಂಕ್ ಅಲಂಕಾರಗುಡ್ಡೆಯಲ್ಲಿದ್ದು, ಈವರೆಗೂ ಆ ಟ್ಯಾಂಕ್ ಉಪಯೋಗಕ್ಕೆ ಸಿಕ್ಕಿಲ್ಲ. ಕಳೆದ ಜಿಲ್ಲಾ ಪಂಚಾಯತ್ ವತಿಯಿಂದ ಉಪಾಧ್ಯಕ್ಷರಾಗಿದ್ದ ಸತೀಶ್ ಕುಂಪಲ ಅವಧಿಯಲ್ಲಿ ಬೋರ್‌ವೆಲ್ ರಚನೆ ಸಹಿತ ಕುಡಿಯುವ ನೀರಿಗೆ ಅನುದಾನ ಸಿಕ್ಕಿತ್ತು ಎನ್ನುತ್ತಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ.
Advertisement
ಅಣೆಕಟ್ಟು ಬೇಡಿಕೆ ಈಡೇರಿಲ್ಲತಲಪಾಡಿ ಗ್ರಾಮದಲ್ಲಿ 13,000 ಜನಸಂಖ್ಯೆ ಹೊಂದಿದ್ದು, ಸುಮಾರು 2,600 ಮನೆಗಳಿವೆ. ಶೇ. 50 ಪ್ರದೇಶಕ್ಕೆ ಗ್ರಾಮ ಪಂಚಾಯತ್‌ನ ನೀರಿನ ವ್ಯವಸ್ಥೆಯಿದ್ದು, 14 ಬೋರ್‌ವೆಲ್, 10 ಬಾವಿಯಿಂದ ನೀರನ್ನು ಪೂರೈಸಲಾಗುತ್ತದೆ. ತಲಪಾಡಿ ಬಳಿ ಹೊಳೆಗೆ ಅಣೆಕಟ್ಟು ಕಟ್ಟುವಂತೆ ಹಲವು ವರ್ಷಗಳಿಂದ ಬೇಡಿಕೆ ಇದ್ದರೂ ಈವರೆಗೂ ಬೇಡಿಕೆ ಈಡೇರಿಲ್ಲ. ಸುಮಾರು 20 ಲಕ್ಷ ರೂ. ಅಣೆಕಟ್ಟಿಗೆ ಅಗತ್ಯವಿದ್ದು, ಅಣೆಕಟ್ಟಿನಲ್ಲಿ ನೀರು ನಿಲ್ಲಿಸಿದರೆ ಸ್ಥಳೀಯವಾಗಿ ಶೇ. 25 ಭೂಮಿಯಲ್ಲಿ ನೀರು ಇಂಗಿ ಬಾವಿಗಳಲ್ಲಿ ನೀರಿನ ಮೂಲ ಉಳಿಯಬಹುದು ಎನ್ನುತ್ತಾರೆ ಸುರೇಶ್ ಆಳ್ವ. ಶಾಶ್ವತ ಪರಿಹಾರ ಬೇಕಿದೆ
ಹಲವು ವರ್ಷಗಳ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಬಡ ಕುಟುಂಬಗಳೇ ಹೆಚ್ಚಾಗಿರುವುದರಿಂದ ನೀರಿಗಾಗಿ ಟ್ಯಾಂಕರ್‌ಗಳನ್ನೇ ಅವಲಂಬಿಸುವ ಸ್ಥಿತಿ. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸದೆ ಇಲ್ಲಿ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕಿದೆ.
– ಇಸ್ಮಾಯಿಲ್ ಪೂಮಣ್ಣು,
ಸಾಮಾಜಿಕ ಕಾರ್ಯಕರ್ತರು ಟ್ಯಾಂಕರ್ ನೀರು ಸರಬರಾಜು
ತಲಪಾಡಿಯಲ್ಲಿ ನೀರಿನ ಮೂಲದ ಕೊರತೆ ನೀರಿನ ಸಮಸ್ಯೆ ಹೆಚ್ಚಲು ಕಾರಣ. ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ತಲಪಾಡಿ ಗ್ರಾಮ ಪಂಚಾಯತ್ ಸೇರಿಸುವಂತೆ ಒತ್ತಡ ಹಾಕಿದ್ದು, ಸೇರಿಸುವ ಭರವಸೆ ಸಿಕ್ಕಿದೆ. ಈ ಗ್ರಾಮದ ಸಮಸ್ಯೆಗೆ ನೇತ್ರಾವತಿ ನದಿ ನೀರೆ ಪರಿಹಾರ. ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಟ್ಯಾಂಕರ್ ನೀರು ಸರಬರಾಜು ಕಾರ್ಯ ಆರಂಭಿಸಲಾಗಿದೆ.
-ಸುರೇಶ್ ಆಳ್ವ ಸಾಂತ್ಯಗುತು,
ಅಧ್ಯಕ್ಷ, ಗ್ರಾ.ಪಂ., ತಲಪಾಡಿ ವಸಂತ್ ಎನ್. ಕೊಣಾಜೆ