Advertisement

ತಲಪಾಡಿ ಪ್ರದೇಶದಲ್ಲಿ  ನೇತ್ರಾವತಿಗೆ ತ್ಯಾಜ್ಯ, ಕೊಳಚೆ ನೀರು

11:17 AM May 20, 2018 | Team Udayavani |

ಬಂಟ್ವಾಳ : ಪುರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ತಲಪಾಡಿ ಮೇಲ್ಸೇತುವೆ ಕೆಳಭಾಗದಲ್ಲಿ ಭಾರೀ ವಿಷಕಾರಿ ತ್ಯಾಜ್ಯಗಳು ಹಾಗೂ ಶೌಚಾಲಯಗಳ ಕೊಳಚೆ ನೀರು ನೇತ್ರಾವತಿಯ ಒಡಲು ಸೇರುತ್ತಿದೆ. ಇದರಿಂದ ನೇತ್ರಾವತಿ ನದಿ ಪ್ರದೇಶ ಸಂಕಷ್ಟಕ್ಕೆ ಸಿಲುಕಿದ್ದು, ಜನರಿಗೆ ರೋಗ ಭೀತಿ ಎದುರಾಗಿದೆ. ಇದರಿಂದ ಕುಡಿಯುವ ನೀರು ಕಲುಷಿತಗೊಂಡಿದೆ.

Advertisement

ಸೂಚನೆ ಪಾಲನೆ ಇಲ್ಲ
ಬಂಟ್ವಾಳ, ತಲಪಾಡಿ, ಪಾಣೆಮಂಗಳೂರು, ಬಡ್ಡಕಟ್ಟೆ, ಗೂಡಿನಬಳಿ ಸಹಿತ ನೇತ್ರಾವತಿ ನದಿಯ ಆಯಕಟ್ಟಿನ ಜಾಗದಲ್ಲಿ ತ್ಯಾಜ್ಯಗಳನ್ನು ನದಿಗೆ ಎಸೆಯಲಾಗುತ್ತಿದೆ. ಇದರ ಬಗ್ಗೆ ಬಂಟ್ವಾಳ ಪುರಸಭೆ ಕಟ್ಟುನಿಟ್ಟಿನ ಸೂಚನೆ ನೀಡಿದರೂ ಕಟ್ಟುನಿಟ್ಟಿನ ಕಾನೂನು ಕ್ರಮಗಳು ಇಲ್ಲದ ಕಾರಣ ಜನರು ಸೂಚನೆಗಳನ್ನು ಪಾಲಿಸುವ ಗೋಜಿಗೆ ಹೋಗಿಲ್ಲ.

ಇಲ್ಲಿನ ಸುತ್ತಮುತ್ತಲ ಪರಿಸರದ ಚರಂಡಿ, ಶೌಚಾಲಯದ ನೀರು, ಹಳ್ಳದ ನೀರು ನೇತ್ರಾವತಿ ನದಿಗೆ ಸೇರುವುದರಿಂದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಆ ದಾರಿಯಲ್ಲಿ ನಡೆದಾಡುವುದು, ವಾಹನದಲ್ಲಿ ಸಂಚರಿಸುವುದು ಸಾಧ್ಯವಾಗದಷ್ಟು ದುರ್ನಾತ ಸೃಷ್ಟಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ತೆರವು ಮಾಡಿದರೂ ಮತ್ತೆ ರಾಶಿ
ಈ ಪರಿಸರದ ಜನರು ಕಸವನ್ನು ಕಸದ ತೊಟ್ಟಿಗೆ ಬಿಸಾಡುತ್ತಾರೆ. ಬೇರೆ ಬೇರೆ ಕಡೆಗಳಿಂದ ತ್ಯಾಜ್ಯದ ಕಟ್ಟುಗಳನ್ನು ವಾಹನದಲ್ಲಿ ತಂದು ಇಲ್ಲಿನ ನದಿಗೆ ಎಸೆದು ಹೋಗುತ್ತಾರೆ. ಕೆಲವು ತಿಂಗಳ ಹಿಂದೆ ಪುರಸಭೆಯ ಸಹಾಯದೊಂದಿಗೆ ಕಸವನ್ನು ತೆರವುಗೊಳಿಸಲಾಗಿತ್ತು. ಆದರೆ ಮತ್ತದೇ ಸಮಸ್ಯೆ ಕಾಡುತ್ತಿದೆ. ಕಸ-ಕಡ್ಡಿಗಳು, ಮದ್ಯ ಬಾಟಲಿಗಳು, ವಾಹನದ ಟಯರ್‌ಗಳು, ವಿವಿಧ ತ್ಯಾಜ್ಯಗಳು, ಪ್ಲಾಸ್ಟಿಕ್‌ಗಳು ಹಾಗೂ ಮನೆಯ ತ್ಯಾಜ್ಯಗಳು ಸಂಗ್ರಹವಾಗಿವೆ.

ವಿಷಕಾರಿ ತ್ಯಾಜ್ಯಗಳು, ಚರಂಡಿ ಹಾಗೂ ಶೌಚಾಲಯಗಳ ನೀರು ನೇತ್ರಾವತಿ ನದಿಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸುವ ಭೀತಿ ಎದುರಾಗಿದ್ದು, ಈ ಮಾಲಿನ್ಯಕ್ಕೆ ಕಾರಣವನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜೀವ ನದಿಯನ್ನು ರಕ್ಷಿಸಬೇಕೆಂಬುವುದೇ ಸ್ಥಳೀಯರ ಒತ್ತಾಯವಾಗಿದೆ.

Advertisement

ಉಸಿರುಗಟ್ಟುವ ದುರ್ನಾತ; ಸೂಚನ ಫಲಕವೂ ನಾಪತ್ತೆ !
ಈ ದಾರಿಯಲ್ಲಿ ಹೋಗುವವರು ಮೂಗು ಮುಚ್ಚಿಕೊಂಡೇ ಸಾಗಬೇಕು. ಉಸಿರುಗಟ್ಟುವ ದುರ್ನಾತದಿಂದ ದಾರಿಯುದ್ದಕ್ಕೂ ವಾಕರಿಕೆ ಬರಿಸುತ್ತದೆ. ಇಲ್ಲಿ ಕಸ ಹಾಕಬೇಡಿ ಎಂದು ಸೂಚನಾ ಫಲಕ ಹಾಕಿದರೂ ಕ್ಯಾರೆ ಇಲ್ಲ. ಅಲ್ಲದೆ, ಹಾಕಿದ್ದ ಸೂಚನಾ ಫಲಕವೂ ಇತ್ತೀಚೆಗೆ ನಾಪತ್ತೆಯಾಗಿದೆ.

ಇದೀಗ ನದಿಯ ಬದಿ ಹಾಕಿದ್ದ ಭಾರೀ ತ್ಯಾಜ್ಯಗಳು ಮಳೆ ನೀರಿಗೆ ಕೊಚ್ಚಿಹೋಗಿ ನದಿ ಸೇರಿದ್ದು, ಇನ್ನು ಕೆಲವು ನದಿದಡದಲ್ಲಿ ಉಳಿದಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಸೂಕ್ತ ವ್ಯವಸ್ಥೆ ಬೇಕು
ಬಂಟ್ವಾಳದ ಮುಖ್ಯ ನಗರಗಳಲ್ಲಿ ಸರಿಯಾದ ತ್ಯಾಜ್ಯ ಸಂಗ್ರಹ ವ್ಯವಸ್ಥೆಯಿಲ್ಲ. ಇದರಿಂದ ಜನರು ಕಸ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಬೇಕೆಂದಲ್ಲಿ ಎಸೆದು ಹೋಗುತ್ತಾರೆ. ತ್ಯಾಜ್ಯ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಯಿಲ್ಲದ ಕಾರಣ ತ್ಯಾಜ್ಯಗಳನ್ನು ರಸ್ತೆ ಬದಿ ಎಸೆಯುವ ಪ್ರವೃತ್ತಿ ಇನ್ನೂ ನಿಂತಿಲ್ಲ. ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿ, ಪೈರೋಲಿಸಿಸ್‌ ಯಂತ್ರದ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಪುರಸಭೆಯಲ್ಲಿ ಗಂಭೀರ ಚರ್ಚೆ ನಡೆದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

 ಪ್ರಯತ್ನಗಳು ಆಗಿವೆ
ಜನಸಾಮಾನ್ಯರು ಕಸವನ್ನು ವಿಂಗಡಿಸಿ ಪುರಸಭೆಯ ವಾಹನದಲ್ಲಿ ನೀಡುವಂತೆ ಬಹಳಷ್ಟು ಸಲ ಮುನ್ಸೂಚನೆ, ಎಚ್ಚರಿಕೆ ಕ್ರಮಗಳನ್ನು ಮಾಡಲಾಗಿದೆ. ರಾತ್ರಿ ಹೊತ್ತಿನಲ್ಲಿ ಕೆಲವರು ಕಸವನ್ನು ರಸ್ತೆ ಬದಿ, ನದಿಯ ಪಾತ್ರದಲ್ಲಿ ಎಸೆದು ಹೋಗುತ್ತಾರೆ. ನಿರ್ದಿಷ್ಟ ಸ್ಥಳಗಳಲ್ಲಿ ಇದನ್ನು ನಿಯಂತ್ರಿಸುವ ಎಚ್ಚರಿಕೆ ಸೂಚನೆಗಳನ್ನು ಹಾಕಲಾಗಿತ್ತು. ಆದರೆ ಪ್ರಯೋಜನಕ್ಕೆ ಬಂದಿಲ್ಲ. ಸಿಸಿ ಕೆಮರಾ ಹಾಕುವ ಬಗ್ಗೆಯೂ ಚರ್ಚಿಸಲಾಗಿತ್ತು. ಅನುಷ್ಠಾನಕ್ಕೆ ತರುವಲ್ಲಿ ಪ್ರಯತ್ನಗಳು ಆಗಿವೆ. ಕಂಚಿನಡ್ಕಪದವು ತ್ಯಾಜ್ಯ ವಿಲೇವಾರಿ ಘಟಕವನ್ನು ಪುನರುಜ್ಜೀವನ ಮಾಡುವಲ್ಲಿ ಕ್ರಮ ಆಗಬೇಕಾಗಿದೆ.
-ಪಿ. ರಾಮಕೃಷ್ಣ ಆಳ್ವ ಅಧ್ಯಕ್ಷರು, ಬಂಟ್ವಾಳ ಪುರಸಭೆ 

Advertisement

Udayavani is now on Telegram. Click here to join our channel and stay updated with the latest news.

Next