ಮುಂಬೈ: ಜನಪ್ರಿಯ ಸ್ಟ್ರೀಮಿಂಗ್ ಆ್ಯಪ್ ನೆಟ್ ಫ್ಲಿಕ್ಸ್ ಭಾರತೀಯ ಬಳಕೆದಾರರಿಗೆ ಖುಷಿಯ ಸುದ್ದಿಯೊಂದನ್ನು ನೀಡಿದೆ. ಡಿಸೆಂಬರ್ 5 ಮತ್ತು 6 (2020) ರಂದು ಒಟ್ಟು 2 ದಿನಗಳ ಕಾಲ ನಡೆಯಲಿರುವ ನೆಟ್ ಫ್ಲಿಕ್ಸ್ ಸ್ಟ್ರೀಮ್ ಫೆಸ್ಟ್ ನಲ್ಲಿ ನೆಟ್ ಫ್ಲಿಕ್ಸ್ ಸೇವೆ ಉಚಿತವಾಗಿರಲಿದ್ದು, ಬಳಕೆದಾರರು ಯಾವುದೇ ಕಾರ್ಯಕ್ರಮವನ್ನು ಸಬ್ ಸ್ಕ್ರಿಪ್ಷನ್ ಮಾಡದೆಯೇ ವೀಕ್ಷಿಸಬಹುದಾಗಿದೆ.
ಕಳೆದ ಅಕ್ಟೋಬರ್ ನಲ್ಲಿ ನೆಟ್ ಫ್ಲಿಕ್ಸ್ ಸಂಸ್ಥೆ ಡಿಸೆಂಬರ್ 5 ಮತ್ತು 6 (2020) ರಂದು ಸ್ಟ್ರೀಮ್ ಫೆಸ್ಟ್ (Stream Fest) ನಡೆಸುವುದಾಗಿ ಘೋಷಣೆ ಹೊರಡಿಸಿತ್ತು. ಇದೀಗ ನಾಳೆಯಿಂದ ಈ ಫೆಸ್ಟ್ ಆರಂಭಿಸಲು ಸಂಸ್ಥೆ ಮುಂದಾಗಿದೆ. ಈ ಮೂಲಕ ಯಾವುದೇ ದರಗಳಿಲ್ಲದೆ ಉಚಿತವಾಗಿ ಯಾರು ಬೇಕಾದರೂ ನೆಟ್ ಫ್ಲಿಕ್ಸ್ ನೋಡಬಹುದಾಗಿದೆ.
ಬಳಕೆದಾರರು ತಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಪಾಸ್ ವರ್ಡ್ ನಮೂದಿಸಿ ಸುಲಭವಾಗಿ ನೆಟ್ ಫ್ಲಿಕ್ಸ್ ಗೆ ಪ್ರವೇಶ ಪಡೆಯಬಹುದು. ಮಾತ್ರವಲ್ಲದೆ ಸಿನಿಮಾ, ವೆಬ್ ಸೀರಿಸ್, ಸಾಕ್ಷ್ಯ ಚಿತ್ರ ಸೇರಿದಂತೆ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ಎಲ್ಲಾ ಮಾದರಿಯ ಕಾರ್ಯಕ್ರಮಗಳನ್ನು ನೋಡಬಹುದು.
ಭಾರತೀಯ ಬಳಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ನೆಟ್ ಫ್ಲಿಕ್ಸ್ ಪ್ರಯತ್ನ ನಡೆಸುತ್ತಿದ್ದು , ಈಗಾಗಲೇ ಹಲವಾರು ಆಫರ್ ಗಳನ್ನು ನೀಡುತ್ತಾ ಬಂದಿದೆ. ಇವುಗಳಲ್ಲಿ ಒಂದಾದ ಮಾಸಿಕ 199 ರೂ.ಗಳ ಸಬ್ ಸ್ಕ್ರಿಪ್ಷನ್ ಸೌಲಭ್ಯ ದಿಂದ ಬಳಕೆದಾರರು ತಾವು ಇಷ್ಟ ಪಡುವ ಯಾವುದೇ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ವಿಶಿಷ್ಟ ಪೊಲೀಸ್ ಸ್ಟೋರಿಯಲ್ಲಿ ವಸಿಷ್ಠ
ಈ ಕುರಿತು ಪ್ರತಿಕ್ರಿಯೆ ನೀಡಿದ ನೆಟ್ ಫ್ಲಿಕ್ಸ್ ಸಿಒಒ ಗ್ರೇಗ್ ಪೀಟರ್ಸ್, ಬಳಕೆದಾರರನ್ನು ಸೆಳೆಯಲು ಇದೊಂದು ಉತ್ತಮ ಯೋಜನೆಯಾಗಿದ್ದು, ವಾರಾಂತ್ಯದಲ್ಲಿ ಉಚಿತ ಸೇವೆ ನೀಡುತ್ತಿರುವುದು ಹಲವು ಬದಲಾವಣೆಗಳಿಗೆ ಕಾರಣವಾಗಲಿದೆ ಎಂದಿದ್ದಾರೆ.ಇದೀಗ ಬಳಕೆದಾರರು ಸ್ಮಾರ್ಟ್ ಟಿವಿ, ಐಓಎಸ್, ಆ್ಯಂಡ್ರಾಯ್ಡ್ ಗಳ ಮೂಲಕ ನೆಟ್ ಫ್ಲಿಕ್ಸ್ ಸೇವೆ ಪಡೆಯಬಹುದಾಗಿದೆ.