ಕಲಬುರಗಿ: ಶತಮಾನದ ಅತಿ ಹೆಚ್ಚಿನ ಮಳೆಯಿಂದ ಅಳಿದುಳಿದ ತೊಗರಿ ಬೆಳೆ ನೆಟೆರೋಗಕ್ಕೆ ತುತ್ತಾಗುತ್ತಿದೆ. ಇನ್ನೇನು ಕೈಗೆ ಸೇರುತ್ತಿದೆ ಎನ್ನುವ ಹೊತ್ತಿಗೆ ತೇವಾಂಶ ಹೆಚ್ಚಾಗಿ ಬೇರುಗಳೆಲ್ಲ ಕೊಳೆತು ಹೋಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯಾದ್ಯಂತ 4.41ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದರಲ್ಲಿ ಮೂರು ಲಕ್ಷ ಹೆಕ್ಟೇರ್ ತೊಗರಿ ಬೆಳೆ ಸೇರಿದೆ. ಈಗ ನೆಟೆರೋಗದಿಂದ ಜಿಲ್ಲೆಯಾದ್ಯಂತ ಒಂದು ಲಕ್ಷ ಎಕರೆಗೂ ಅಧಿಕ ಬೆಳೆ ಒಣಗಿ ಹೋಗಿದೆ. ಮುಖ್ಯವಾಗಿ ಅತಿವೃಷ್ಟಿ ನಂತರ ಸಮೃದ್ಧವಾಗಿದ್ದ ಬೆಳೆಗೆ ಎರಡ್ಮೂರು ಸಲ ಕೀಟನಾಶಕ ಸಿಂಪಡಿಸಿದ ನಂತರ ಒಣಗುತ್ತಿದೆ.
15ದಿನಗಳು ಕಳೆದಿದ್ದರೆ ತೊಗರಿ ಕೈ ಸೇರುತ್ತಿತ್ತು. ಅತಿವೃಷ್ಟಿ ಸಂದರ್ಭದಲ್ಲೇ ಬೆಳೆ ಹಾನಿಯಾಗಿದ್ದರೆ ಕೀಟಬಾಧೆ ತಪ್ಪಿಸುವ ನಿಟ್ಟಿನಲ್ಲಿ ಕೀಟನಾಶಕಗಳ ಸಿಂಪರಣೆಗೆ ಸಾವಿರಾರು ರೂ. ಖರ್ಚು ಮಾಡುವುದು ತಪ್ಪಿರುತ್ತಿತ್ತು. ಆದರೆ ಎರಡ್ಮೂರು ಸಲ ಕೀಟನಾಶಕ ಸಿಂಪರಿಸಿದ ನಂತರ ತೊಗರಿ ನೆಟೆರೋಗಕ್ಕೆ ಒಳಗಾಗಿದ್ದಲ್ಲದೇ ಸಾಲ ತೆಗೆದುಕೊಳ್ಳುವುದು ತಪ್ಪಲಿಲ್ಲ ಎನ್ನುವಂತಾಗಿದೆ.
ಕಲಬುರಗಿ ತೊಗರಿ ಕಣಜ. ಪ್ರತಿವರ್ಷ ಅಂದಾಜು 40 ಲಕ್ಷ ಕ್ವಿಂಟಲ್ ಇಳುವರಿ ಬರುತ್ತದೆ. ಅಂದಾಜು ಎರಡೂವರೆಯಿಂದ ಮೂರು ಸಾವಿರ ಕೋಟಿ ರೂ. ಆರ್ಥಿಕವ್ಯವಹಾರ ನಡೆಯುತ್ತದೆ. ತೊಗರಿಯೊಂದೇ ಇಲ್ಲಿನ ಪ್ರಮುಖ ಬೆಳೆ ಹಾಗೂ ಮಾರುಕಟ್ಟೆ. ಅತಿವೃಷ್ಟಿಯಿಂದ ಅಂದಾಜು ಶೇ. 60 ಅಂದರೆ ಅಂದಾಜು 1800 ಕೋಟಿ ರೂ. ಮೊತ್ತದ ತೊಗರಿ ಬೆಳೆ ಹಾನಿಯಾಗಿದೆ. ಮತ್ತೂಂದೆಡೆ ಈಗ ನೆಟೆರೋಗಕ್ಕೆ ಒಳಗಾಗಿದೆ. ನೆಟೆರೋಗದಿಂದ ಅಂದಾಜು 500 ಕೋಟಿ ರೂ.ಗೂ ಅಧಿಕ ತೊಗರಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಬಾರದ ಪರಿಹಾರ: ಅತಿವೃಷ್ಟಿ ಹಾನಿಗೆ ಪರಿಹಾರ ಬರುತ್ತದೆ ಎಂದು ರೈತ ಕಾಯುತ್ತಿದ್ದಾನೆ. ಮೂಗಿಗೆ ತುಪ್ಪ ಸವರಿದಂತೆ ಕೇವಲ 27ಸಾವಿರ ರೂ. ಮಾತ್ರ ಬೆಳೆ ಹಾನಿ ಪರಿಹಾರ ವಿತರಿಸಲಾಗಿದೆ. ಸರ್ಕಾರ ವಾರಕ್ಕೊಮ್ಮೆ ರೈತರ ಖಾತೆಗಳಿಗೆ ಪರಿಹಾರ ಜಮೆ ಮಾಡುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ 2.65 ಲಕ್ಷ ರೈತರ ಬೆಳೆ ಹಾನಿಯಾಗಿದೆ ಎಂಬುದಾಗಿ ಎನ್ ಡಿಆರ್‌ಎಫ್ ನಿಯಮದಡಿ 300 ಕೋಟಿ ರೂ. ಪರಿಹಾರ ಕೇಳಲಾಗಿದೆ. ಈಗಿನ ನೆಟೆರೋಗದಿಂದ ಹಾಳಾಗುತ್ತಿರುವ ತೊಗರಿಗೆ ಪರಿಹಾರವೇ ಇಲ್ಲ ಎನ್ನುವಂತಿದೆ.
ಅತಿವೃಷ್ಟಿ ಸಂದರ್ಭದಲ್ಲೇ ತೊಗರಿ ನೆಟೆರೋಗಕ್ಕೆ ಒಳಗಾಗಿದ್ದರೆ ಕೀಟನಾಶಕಕ್ಕಾಗಿ ಹಣ ಖರ್ಚು ಮಾಡುವುದು ತಪ್ಪುತ್ತಿತ್ತು. ಜತೆಗೆ ಆವಾಗಲೇ ಹೊಲ ಸ್ವತ್ಛ ಮಾಡಿಹಿಂಗಾರಿ ಹಂಗಾಮಿನ ಬಿಳಿಜೋಳ ಇಲ್ಲವೇ ಕಡಲೆ ಬಿತ್ತನೆ ಮಾಡಿ ಕೈಗೆ ಸ್ವಲ್ಪ ನಿಟ್ಟಿನಲ್ಲಾದರೂ ಬೆಳೆ ಪಡೆಯಬಹುದಿತ್ತು. ಈಗ ನೆಟೆರೋಗ ಎಲ್ಲವನ್ನೂ ಹಾಳು ಮಾಡಿದೆ.
–ಲಕ್ಷ್ಮೀಪುತ್ರ ಜವಳಿ, ರೈತ.
ಸತತ ಮಳೆಯಿಂದ ಹಲವು ದಿನಗಳ ಕಾಲ ತೊಗರಿ ನೀರಲ್ಲೇನಿಂತಿರುವುದರಿಂದ ನೆಟೆರೋಗಕ್ಕೆ ಒಳಗಾಗುವುದು ಸಹಜ. ಅತಿವೃಷ್ಟಿ ಹಾನಿ ವರದಿ ರೂಪಿಸುವಾಗಲೇ ತೊಗರಿ ನೆಟೆರೋಗಕ್ಕೆ ಒಳಗಾಗುವುದನ್ನು ಅಂದಾಜಿಸಿ ವರದಿಯಲ್ಲಿ ಸೇರಿಸಲಾಗಿದೆ. ನೆಟೆರೋಗ ತಳಿ ಇದ್ದರೂ ಈ ವರ್ಷದ ಮಳೆ ಹಾಗೂ ಅಪಾಯದಿಂದ ತಪ್ಪಿಸಿಕೊಳ್ಳದಂತಾಗಿದೆ
. –ರತೀಂದ್ರನಾಥ ಸುಗೂರ, ಜಂಟಿ ಕೃಷಿ ನಿರ್ದೇಶಕ
–ಹಣಮಂತರಾವ ಭೈರಾಮಡಗಿ