ನವದೆಹಲಿ: ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆಯನ್ನು ಇಂಡಿಯಾ ಗೇಟ್ ನಲ್ಲಿ ದೇಶದ ಹೆಮ್ಮೆಯ ಪ್ರತೀಕವಾಗಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ಜನವರಿ 21) ಘೋಷಿಸಿದ್ದಾರೆ.
ಇದನ್ನೂ ಓದಿ:ರಾಜ್ಯದ ಶೇ. 66ರಷ್ಟು ಮಕ್ಕಳಿಗೆ ಮೊದಲ ಡೋಸ್ ಲಸಿಕೆ: ಸಚಿವ ಕೆ.ಸುಧಾಕರ್
ದೇಶದ ಸ್ವಾತಂತ್ರ್ಯ ಚಳವಳಿಗೆ ಬೋಸ್ ಅವರು ನೀಡಿದ್ದ ಕೊಡುಗೆಯ ಗೌರವಾರ್ಥವಾಗಿ ಈ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ಸುಭಾಶ್ಚಂದ್ರ ಬೋಸ್ ಅವರ ಪ್ರತಿಮೆಯನ್ನು ಗ್ರಾನೈಟ್ ನಲ್ಲಿ ತಯಾರಿಸಲಾಗಿದೆ. ಅದೇ ಸ್ಥಳದಲ್ಲಿ ಹೋಲೋಗ್ರಾಮ್ ಪ್ರತಿಮೆ ಕೂಡಾ ಇರಲಿದೆ ಎಂದು ವರದಿ ತಿಳಿಸಿದೆ.
ಜನವರಿ 23ರಂದು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯಂದು ಹೋಲೊಗ್ರಾಮ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ವರದಿ ಹೇಳಿದೆ.
ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯಂದು ಬೋಸ್ ಅವರ ಬೃಹತ್ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಸ್ಥಾಪನೆಯಾಗಲಿದೆ ಎಂಬುದು ದೇಶಕ್ಕೆ ಸಂತಸ ತರುವ ವಿಚಾರವಾಗಿದೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.