ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಕೈಗೊಂಡ ಮಹತ್ತರ ನಿರ್ಧಾರಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಭಾಶ್ಚಂದ್ರ ಬೋಸ್ ಅವರ ಹುಟ್ಟುಹಬ್ಬವನ್ನು “ಪರಾಕ್ರಮ ದಿನ”ವನ್ನಾಗಿ ಪ್ರತಿ ವರ್ಷ ಆಚರಿಸಲು ನಿರ್ಧರಿಸಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ನೀಡಿದ ಕೊಡುಗೆ ಅಪಾರ. ಅವರ ಸವಿನೆನಪಿಗಾಗಿ ದೇಶದಲ್ಲಿ ಅವರ ಹುಟ್ಟು ಹಬ್ಬವನ್ನು ಪರಾಕ್ರಮ ದಿನವೆಂದು ಆಚರಸಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಘೋಷಣೆ ಮಾಡಿದೆ.
ದೇಶದ ಪ್ರಜೆಗಳು, ನೇತಾಜಿ ದೇಶಕ್ಕೆ ಕೊಟ್ಟ ನಿಸ್ವಾರ್ಥ ಸೇವೆಯನ್ನು ನೆನಪಿಸಿಕೊಳ್ಳುವಂತೆ ಅವರ 125ನೇ ಹುಟ್ಟುಹಬ್ಬದ ದಿನಾಚರಣೆಯಿಂದ ಪ್ರತಿವರ್ಷ ಜನವರಿ 23ರಂದು ಪರಾಕ್ರಮ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನೇತಾಜಿ ಅವರ ಅದಮ್ಯ ಹೋರಾಟ ಮತ್ತು ನಿಸ್ವಾರ್ಥ ಸೇವೆ ದೇಶದ ಯುವ ಜನರಿಗೆ ಸ್ಫೂರ್ತಿ. ಯುವಕರು ನೇತಾಜಿಯವರ ಕಾರ್ಯ ಸಾಧನೆಯಿಂದ ಪ್ರಭಾವದಿಂದ ದೇಶಪ್ರೇಮ ಬೆಳೆಸಿಕೊಳ್ಳುವಂತೆ ಮಾಡುವುದೇ ಪರಾಕ್ರಮ ದಿನ ಆಚರಣೆಯ ಮುಖ್ಯ ಉದ್ದೇಶ ಎಂದು ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.
ಈಗಾಗಲೇ ಕೇಂದ್ರ ನೇತಾಜಿಯವರ ತ್ಯಾಗ ಹಾಗೂ ಅಪ್ರತಿಮ ಹೋರಾಟದ ನೆನಪಿಗಾಗಿ ಹಲವು ನಿರ್ಧಾರ ತೆಗೆದುಕೊಂಡಿದೆ. ನವದೆಹಲಿಯ ಕೆಂಪು ಕೋಟೆಯಲ್ಲಿ ನೇತಾಜಿಯವರ ಜೀವ ಮಾನ ಸಾಧನೆಯನ್ನು ಪ್ರತಿಬಿಂಬಿಸುವ ಮ್ಯೂಸಿಯಂನ್ನು ಕೂಡ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ಕೋಲ್ಕತ್ತಾದ ಐತಿಹಾಸಿಕ ವಿಕ್ಟೋರಿಯಾ ಮೆಮೋರಿಯಲ್ ಕಟ್ಟಡದಲ್ಲಿ ನೇತಾಜಿಯವರ ಕುರಿತು ಶಾಶ್ವತವಾದ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಆಗಬೇಕು ಎನ್ನುವುದರ ಬಗ್ಗೆ ಯೋಜನೆಗಳು ಈಗಾಗಲೇ ಆಗಿದೆ.
ಗುರುವಾರ(ಜನವರಿ 21, 2021) ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಕಟ್ಟಡದಲ್ಲಿ ನಡೆಯುವ ನೇತಾಜಿಯವರ 125ನೇ ಹುಟ್ಟು ಹಬ್ಬದ ಆಚರಣೆಗೆ ಪ್ರಧಾನಿ ಕೂಡ ಭಾಗವಹಿಸುವ ಸಾಧ್ಯತೆ ಇದೆ ಇರುವ ಹಿನ್ನೆಲೆಯಲ್ಲಿ ಸಚಿವಾಲಯ ಈ ಘೋಷಣೆಯನ್ನು ಮಾಡಿದೆ.
ನೇತಾಜಿಯವರ ಹುಟ್ಟು ಹಬ್ಬದ ಸಂದರ್ಭದಲ್ಲೇ ಪಶ್ಚಿಮ ಬಂಗಾಳದ ಮುಖ್ತಮಂತ್ರಿ ಮಮತಾ ಬ್ಯಾನರ್ಜಿ ಪಾದಯಾತ್ರೆ ನಡೆಸುವುದಾಗಿ ಘೋಷಿಸಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.