ನವದೆಹಲಿ:ಜೆಡಿಯು ಶಾಸಕರೊಬ್ಬರು ತೇಜಸ್ ಎಕ್ಸ್ ಪ್ರೆಸ್ ಐಶಾರಾಮಿ ರೈಲಿನೊಳಗೆ ಕೇವಲ ಬನಿಯನ್ ಮತ್ತು ಅಂಡರ್ ವೇರ್ ಧರಿಸಿ ಓಡಾಡುತ್ತಿದ್ದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ : ಪ್ರಹ್ಲಾದ ಜೋಶಿ
ಒಳಚಡ್ಡಿಯಲ್ಲೇ ತಿರುಗಾಡುತ್ತಿದ್ದ ಶಾಸಕ ಗೋಪಾಲ್ ಮಂಡಲ್ ಅವರನ್ನು ಪ್ರಯಾಣಿಕರು ತಡೆದು ನಿಲ್ಲಿಸಿ ಪ್ರಶ್ನಿಸಿದಾಗ, ವಿಚಿತ್ರವಾದ ಪ್ರತಿಕ್ರಿಯೆಯೊಂದಿಗೆ ತಮ್ಮನ್ನು ಸಮರ್ಥಿಸಿಕೊಂಡಿರುವುದಾಗಿ ವರದಿ ಹೇಳಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನನಗೆ ಅಜೀರ್ಣವಾಗಿತ್ತು, ಇದಕ್ಕಾಗಿ ನಾನು ಅಂಡರ್ ವೇರ್ ಮಾತ್ರ ಧರಿಸಿದ್ದೆ ಎಂದು ಎಎನ್ ಐಗೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಅಂಡರ್ ವೇರ್ ಹಾಕಿ ರೈಲಿನ ಬೋಗಿಯೊಳಗೆ ತಿರುಗಾಡುತ್ತಿದ್ದ ಶಾಸಕನ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು ದೂರನ್ನು ನೀಡಿದ್ದರು. ಶಾಸಕ ಗೋಪಾಲ್ ಮಂಡಲ್ ಪಾಟ್ನಾದಿಂದ ನವದೆಹಲಿಗೆ ತೇಜಸ್ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.
ನಾನು ರೈಲು ಹತ್ತಿದ ಕೂಡಲೇ ನನಗೆ ತಕ್ಷಣವೇ ಶೌಚಾಲಯಕ್ಕೆ ಹೋಗಬೇಕಾಗಿತ್ತು. ಅದಕ್ಕಾಗಿ ನಾನು ಕುರ್ತಾ ಫೈಜಾಮಾ ತೆಗೆದು, ಟವೆಲ್ ಅನ್ನು ಹೆಗಲ ಮೇಲೆ ಹಾಕಿಕೊಂಡಿದ್ದೆ ಎಂದು ಮಂಡಲ್ ಸಮಜಾಯಿಷಿ ನೀಡಿದ್ದಾರೆ.
ರೈಲಿನ ಬೋಗಿಯೊಳಗೆ ಅಂಡರ್ ವೇರ್ ಧರಿಸಿ ತಿರುಗಾಡುತ್ತಿದ್ದ ವೇಳೆ ಯಾವುದೇ ಮಹಿಳಾ ಪ್ರಯಾಣಿಕರು ಇರಲಿಲ್ಲ. ಪೊಲೀಸರು ಬಂದು ಪ್ರಶ್ನಿಸಿದಾಗ ನಾನು ನನ್ನ ಬಟ್ಟೆಯನ್ನು ತೋರಿಸಿದ್ದೆ. ನನಗೆ 60 ವರ್ಷವಾಗಿದೆ. ಆದರೂ ಪ್ರಯಾಣಿಕನೊಬ್ಬ ನನ್ನ ಕೈಯನ್ನು ಹಿಡಿದು ದೂಡಿದ್ದ ಎಂದು ಶಾಸಕ ಮಂಡಲ್ ಆರೋಪಿಸಿದ್ದಾರೆ. ಬಳಿಕ ತಾನು ಕ್ಷಮೆ ಕೇಳಿರುವುದಾಗಿ ಮಂಡಲ್ ತಿಳಿಸಿದ್ದಾರೆ.