ಹುಬ್ಬಳ್ಳಿ: ಅಂಚೆ ಕಚೇರಿಯಲ್ಲಿ ಉಳಿತಾಯ ಬ್ಯಾಂಕ್ (ಪಿಒಎಸ್‌ಬಿ) ಖಾತೆ ಹೊಂದಿದವರು ಇನ್ಮುಂದೆ ಇಂಟರ್ ನೆಟ್ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದು. ಆ ಮೂಲಕ ಗ್ರಾಹಕರು ತಾವು ಹೊಂದಿದ ಒಂದು ಅಂಚೆ ಕಚೇರಿಯ ಎಸ್‌ಬಿ ಖಾತೆಯಿಂದ ಮತ್ತೊಂದು ಅಂಚೆ ಕಚೇರಿಯ ಎಸ್‌ಬಿ ಖಾತೆ ಸೇರಿದಂತೆ ಇನ್ನಿತರೆ ನಿಗದಿತ ಖಾತೆಗೆ ತಾವಿದ್ದ ಸ್ಥಳದಿಂದಲೇ ಹಣ ವರ್ಗಾಯಿಸಬಹುದಾಗಿದೆ.
ಅಂಚೆ ಕಚೇರಿಯಲ್ಲಿ ಎಸ್‌ಬಿ ಖಾತೆ ಹೊಂದಿದ ಗ್ರಾಹಕರು ಸಹಿತ ರಾಷ್ಟ್ರೀಕೃತ ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳಲ್ಲಿ ಪಡೆಯುತ್ತಿರುವ ಆನ್‌ಲೈನ್ ಮೊಬೈಲ್ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್- ಐಪಿಪಿಬಿ) ಆಪ್ಕೆ ಬ್ಯಾಂಕ್ ಆಪ್ಕೆ ದ್ವಾರಾ ಆ್ಯಪ್ ಮುಖಾಂತರ ಪಡೆಯಬಹುದು.
ಐಪಿಪಿಬಿ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ನಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಓಡಿಯಾ, ಬೆಂಗಾಲಿ, ಅಸ್ಸಾಮಿ, ಪಂಜಾಬಿ, ಗುಜರಾತಿ, ಮರಾಠಿ, ಉರ್ದು ಭಾಷೆಗಳು ಲಭ್ಯವಿವೆ. ಐಪಿಪಿಬಿಯ ಮೊಬೈಲ್ ಬ್ಯಾಂಕಿಂಗ್ ಮೂಲಕ ಖಾತೆದಾರರು ಎಸ್‌ಬಿ ಖಾತೆಯಿಂದ ಪುನರಾವರ್ತಿತ ಠೇವಣಿ (ಆರ್‌ಡಿ) ಖಾತೆ, ಸಾರ್ವಜನಿಕ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (ಎನ್ ಎಸ್‌ಸಿ), ಸ್ಥಿರ ಠೇವಣಿ (ಎಫ್‌ಡಿ) ಖಾತೆಗೆ ಆನ್‌ಲೈನ್‌ನಲ್ಲಿ ಹಣ ಪಾವತಿಸಬಹುದು.
ಭಾರತ ಪೋಸ್ಟ್‌ನ ಅಧಿಕೃತ ವೆಬ್ ಸೈಟ್ indiapost.gov.in ಪ್ರಕಾರ ಗ್ರಾಹಕರು ಸಕ್ರಿಯ ವ್ಯಕ್ತಿಗತ ಇಲ್ಲವೆ ಜಂಟಿ ಉಳಿತಾಯ ಖಾತೆ, ಅಗತ್ಯವಾದ ಕೆವೈಸಿ ದಾಖಲೆಗಳು, ಮಾನ್ಯವಾದ ಅನನ್ಯ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಇಂಡಿಯಾ ಪೋಸ್ಟ್‌ನ ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯ (ಶಾಶ್ವತ ಖಾತೆ ಸಂಖ್ಯೆ) ವನ್ನು ಪಿಒಎಸ್‌ಬಿ ಗ್ರಾಹಕರು ebanking.indiapost.gov.in ನಲ್ಲಿ ಪಡೆಯಬಹುದು.
ಪಿಒಎಸ್‌ಬಿ ಖಾತೆದಾರರು ಇಂಡಿಯಾ ಪೋಸ್ಟ್ ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯಕ್ಕಾಗಿ ತಮ್ಮ ಹೆಸರು ನೋಂದಾಯಿಸಲು ತಾವು ಖಾತೆ ಹೊಂದಿದ ಅಂಚೆ ಕಚೇರಿಯಲ್ಲಿಯೇ ಅರ್ಜಿ ಫಾರ್ಮ್ ಭರ್ತಿ ಮಾಡಬೇಕು. ಜೊತೆಗೆ ಅಗತ್ಯವಾದ ಕೆವೈಸಿ ದಾಖಲೆಗಳು, ಶಾಶ್ವತವಾದ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ಪ್ರಕ್ರಿಯೆಗೊಳಿಸಿದ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಬರುತ್ತದೆ. ಅದರಲ್ಲಿ ನಮೂದಾದ ಯುಆರ್‌ಎಲ್ ಬಳಸಿಕೊಂಡು ಇಂಡಿಯಾ ಪೋಸ್ಟ್ ಇಂಟರ್‌ನೆಟ್ ಬ್ಯಾಂಕಿಂಗ್ ಪುಟ ತೆರೆದು ಮತ್ತು ಹೈಪರ್‌ಲಿಂಕ್ ಹೊಸ ಬಳಕೆದಾರರು ಸಕ್ರಿಯಗೊಳಿಸಿ, ನಿಮ್ಮ ಎಸ್‌ಬಿ ಖಾತೆಯ ಸಂಖ್ಯೆ, ಗ್ರಾಹಕರ ಐಡಿ ಇಲ್ಲವೆ ಸಿಐಎಫ್ ಐಡಿ, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ನಮೂದಿಸಬೇಕು ಮತ್ತು ಖಾತೆಯ ಐಡಿಯನ್ನು ಸಂರಚಿಸಬೇಕು (ಕಾನ್ಫಿಗರ್). ನಂತರ ಅಗತ್ಯವಾದ ವಿವರಗಳನ್ನು ತುಂಬಿ ಇಂಟರ್‌ನೆಟ… ಬ್ಯಾಂಕಿಂಗ್ ಸೌಲಭ್ಯವನ್ನು ಕಾನ್ಫಿಗರ್ ಮಾಡಬೇಕಾಗುತ್ತದೆ. ಆನಂತರ ಹಣ ಪಾವತಿ ಆರಂಭಿಸಬಹುದು.
ಐಪಿಪಿಬಿ ಆ್ಯಪ್ ಮುಖಾಂತರ ವಿವಿಧ ಕಂಪನಿಗಳ ಮೊಬೈಲ್ ರಿಚಾರ್ಜ್, ವಿದ್ಯುತ್ ಸರಬರಾಜು ಕಂಪನಿ, ಡಿಟಿಎಚ್, ಸ್ಥಿರ ದೂರವಾಣಿ, ಬ್ರಾಡ್‌ಬ್ಯಾಂಡ್, ಗ್ಯಾಸ್, ಜಲಮಂಡಳಿ, ವಿಮೆ ಸೇರಿದಂತೆ ಇನ್ನಿತರೆಯ ಬಿಲ್ ಪಾವತಿ ಹಾಗೂ ಬ್ಯಾಂಕ್ ವರ್ಗಾವಣೆ ಒಳಗೊಂಡಂತೆ ಇನ್ನಿತರೆ ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಗ್ರಾಹಕರು ಯಾವ ಅಂಚೆ ಕಚೇರಿಯಲ್ಲಿ ತಮ್ಮ ಉಳಿತಾಯ ಬ್ಯಾಂಕ್ (ಎಸ್‌ಬಿ) ಖಾತೆ ಹೊಂದಿರುತ್ತಾರೋ ಅಲ್ಲಿಗೆ ಹೋಗಿ ಇಂಟರ್‌ನೆಟ್ ಬ್ಯಾಂಕಿಂಗ್‌ಗೆ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಆಗ ಅವರ ಕೈವೈಸಿ ದಾಖಲಾತಿಗಳನ್ನು ಪರಿಶೀಲಿಸಲಾಗುವುದು. ನಂತರ ಆನ್‌ಲೈನ್‌ನಲ್ಲಿ ಅವರ ಖಾತೆಗೆ ಇಂಟರ್‌ನೆಟ್ ಬ್ಯಾಂಕಿಂಗ್ ಆಪ್ಶನ್ ನೀಡಲಾಗುತ್ತದೆ. 24 ತಾಸಿನೊಳಗೆ ಅವರ ಮೊಬೈಲ್ ಸಂಖ್ಯೆಗೆ ಕನ್ಫರ್ಮೇಶನ್ ಎಸ್‌ಎಂಎಸ್ ಬರುತ್ತದೆ. ಅದರಲ್ಲಿನ ಲಿಂಕ್‌ನ್ನು ಆ್ಯಕ್ಟಿವೇಟ್ ಮಾಡಬೇಕು. ಐಪಿಪಿಬಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಗ ಎನ್‌ಎಸ್‌ಸಿ, ಆರ್‌ಡಿ, ಪಿಪಿಎಸ್ ಇನ್ನಿತರೆ ಖಾತೆಗಳಿಗೆ ಹಣ ಪಾವತಿಸಬಹುದು.
.
ಸೆಲ್ವಿಸಿ., ಹಿರಿಯ ಪ್ರಧಾನ ಅಂಚೆ ಪಾಲಕರು, ಹುಬ್ಬಳ್ಳಿ
ಶಿವಶಂಕರ ಕಂಠಿ