Advertisement

ಜರಿಗುಡ್ಡೆಯ ಅನಾಥಾ ಶ್ರಮದ ಕಟ್ಟಡದೊಳಗೆ ನೆರೆ ನೀರು: ನೆರವಿಗಾಗಿ ಮೊರೆ

04:22 PM Jun 28, 2023 | Team Udayavani |

ಕಾರ್ಕಳ: ದಿಕ್ಕು ದೆಸೆಯಿಲ್ಲದ ಹತ್ತಾರು ಹಿರಿಯ ಜೀವಗಳಿಗೆ ಇಲ್ಲಿ ಬೆಚ್ಚಗಿನ ವಾಸಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಮಳೆಗಾಲದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷಿಸಿದ್ದರ ಪರಿಣಾಮ ಮಳೆ ಬಂದಾಗ ಕೃತಕ ನೆರೆ ಸೃಷ್ಟಿಯಾಗಿ ಕಟ್ಟಡದೊಳಗೆ ನೀರುನುಗ್ಗಿ ಸಮಸ್ಯೆ ಸೃಷ್ಟಿಸುತ್ತಿದೆ. ಅನಾಥಾಶ್ರಮದ ಜೀವಗಳ ಕಣ್ಣೀರಿಗೂ ಇದು ಕಾರಣವಾಗಿದೆ.

Advertisement

ಕಾರ್ಕಳದ ಜರಿಗುಡ್ಡೆಯಲ್ಲಿ ಆಯಿಷಾ ಅವರು ಸುರಕ್ಷಾ ಹೆಸರಿನ ವೃದ್ಧಾಶ್ರಮ ನಡೆಸುತ್ತಿದ್ದಾರೆ. ಇಲ್ಲಿ ಸೀಮಿತ ಕೊಠಡಿಗಳಿವೆ ಇದರಲ್ಲಿ ಈಗ ಸುಮಾರು 50 ಮಂದಿ ತುಂಬಿದ್ದಾರೆ. ವೃದ್ಧರು, ವೃದ್ಧೆಯರು, ಮಹಿಳೆಯರು ಹೀಗೆ ಇವರೆಲ್ಲ ಆಶ್ರಯ ಪಡೆದಿದ್ದು ಇದೀಗ ಮಳೆಬಂದಾಗ ರಸ್ತೆಯ ನೀರು ನೀರು ಕಟ್ಟಡದ ಒಳಗೆ ಹರಿಯುತ್ತಿದೆ.

ರಸ್ತೆಯ ನೀರೆಲ್ಲ ಸೂಕ್ತ ಚರಂಡಿಯಿಲ್ಲದೆ ಆಶ್ರಮದ ಕಟ್ಟಡದೊಳಗೆ ನುಗ್ಗುತ್ತಿದೆ. ಇದರಿಂದ ಆಶ್ರಮ ನಿವಾಸಿಗಳು ತೊಂದರೆ ಒಳಗಾಗುತ್ತಾರೆ. ಅಸಹಾಯಕ ಜೀವಗಳು ಬಟ್ಟೆ, ಮೈಯೆಲ್ಲ ಒದ್ದೆ ಮಾಡಿಕೊಂಡು ಮಳೆ, ಚಳಿಗೆ ನಡುಗುತ್ತ ಕುಳಿತುಕೊಳ್ಳಬೇಕಾದ ಸ್ಥಿತಿಯಿದೆ. ಕೃತಕ ನೆರೆ ನೀರು ಕಟ್ಟಡದೊಳಗೆಲ್ಲ ಹೊಕ್ಕು ಕುಳಿತುಕೊಳ್ಳಲು, ಮಲಗಲು ಸಾಧ್ಯವಾಗದೆ ಫ‌ಜೀತಿಗೆ ಒಳಗಾಗಿದ್ದಾರೆ. ಇದರಿಂದ ಹಿರಿಯ ಜೀವಗಳು ಕಣ್ಣಿರು ಹಾಕುವ ಸ್ಥಿತಿಯಿದೆ. ಅನ್ನ ಬೇಯಿಸುವ ಕೊಠಡಿ ತನಕವೂ ನೀರು ನುಗ್ಗಿ ತೊಂದರೆಗಳಾಗುತ್ತಿವೆ.

ಕಟ್ಟಡದೊಳಗೆ ನೀರು ಸಂಗ್ರಹ ವಾಗುತ್ತಿದೆ. ನೀರನ್ನು ಹೊರ ಹಾಕಿ ಮಳೆ ನಿಂತ ಮೇಲೆಯ ಅನ್ನ ಬೇಯಿಸುವಂತಹ ಅಸಹಾಯಕ ಸ್ಥಿತಿಯಿದೆ. ಕೃತಕ ಮಳೆ ನೀರಿನ ಜತೆಗೆ ಕಟ್ಟಡದ ಕೆಲವು ಭಾಗಗಳು ಸೋರುತ್ತಿವೆ. ಮಳೆ ಬರುವ ಹೊತ್ತಿಗೆ ನೀರು ಬೀಳುವ ಸ್ಥಳಗಳಿಂದ ಅತ್ತಿತ್ತ ಸ್ಥಳಾಂತರಿಸುತ್ತಲೇ ಇರುತ್ತಾರೆ. ಇಲ್ಲಿ ವಾಸವಿರುವವರಿಗೆ ವೃದ್ಧಾಪ್ಯ ವೇತನವಿಲ್ಲ. ಸುಸಜ್ಜಿತ ಆಶ್ರಮ ಕಟ್ಟಲು ಸರಕಾರದಿಂದ ಸೂಕ್ತ ನಿವೇಶನಕ್ಕೆ ಆರ್ಥಿಕ ನೆರವು ಕೂಡ ಸಿಗುತ್ತಿಲ್ಲ.

ಆಶ್ರಮಕ್ಕೆ ಅಶ‌ಕ್ತರನ್ನು ತಂದು ಬಿಡುವವರೇ ಹೆಚ್ಚು, ಸಮಾಜ ಸೇವಕರು, ಪೊಲೀಸರು ಬೀದಿಗಳಲ್ಲಿ ಶೋಚನೀಯ ಸ್ಥಿತಿಯಲ್ಲಿ ಕಂಡುಬರುವ ಅನೇಕ ಮಂದಿ ಅನಾಥರು, ವೃದ್ಧರು, ಮಹಿಳೆಯರು, ಮಾನಸಿಕ ಅಸಸ್ಥರು, ಮಕ್ಕಳನ್ನು ತಂದು ಇಲ್ಲಿಗೆ ಬಿಡುತ್ತಾರೆ. ಸ್ಥಳದ ಅವಕಾಶ ಇಲ್ಲದಿದ್ದರೂ ಬೀದಿಯಲ್ಲಿ ಉಳಿಯಬಾರದು ಎನ್ನುವ ಕಾರಣಕ್ಕೆ ಆಶ್ರಮದ ಆಯಿಶಾರವರು ಸೇರಿಸಿಕೊಳ್ಳುತ್ತಿದ್ದಾರೆ. ಆದರೇ ಕಟ್ಟಡದ ವ್ಯವಸ್ಥೆಯಿಲ್ಲದೆ ಸಮಸ್ಯೆ ಎದುರಿಸುತ್ತಾರೆ.

Advertisement

ಜಾಗದ ಕೊಠಡಿ ಕೊರತೆ ಹಿನ್ನೆಲೆಯಲ್ಲಿ ಪಕ್ಕದಲ್ಲಿ ಕಟ್ಟಡವೊಂದು ನಿರ್ಮಾಣದಂತ ದಲ್ಲಿದೆ. ಹಾಲ್‌ ಸೇರಿ 15 ಮತ್ತು 10 ಮಂದಿಗೆ ವಾಸ ಮಾಡುವಂತಹ ಎರಡು ಕೊಠಡಿಗಳು ಅದರಲ್ಲಿವೆ. ದಾನಿಗಳು ನೀಡಿದ ಅಲ್ಪಸ್ವಲ್ಪ ಧನಸಹಾಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪೂರ್ಣಗೊಳಿಸುವಲ್ಲಿ ಅವರಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಇನ್ನಷ್ಟೂ ನೆರವಿನ ಆವಶ್ಯಕತೆಯಿದೆ. ಹೀಗಾಗಿ ದಾನಿಗಳ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಆಯಿಷಾ ಅವರಿದ್ದಾರೆ.

ಆಶ್ರಮಕ್ಕೆ ಸಾರ್ವಜನಿಕರ ಸ್ಪಂದನೆಯೂ ಇದೆ. ಆಹಾರ ಸಾಮಗ್ರಿ, ಬಟ್ಟೆ, ಹಣ್ಣು ಹಂಪಲು, ತರಕಾರಿ, ಅಕ್ಕಿ ಇತ್ಯಾದಿ ಸಾಮಗ್ರಿಗಳನ್ನು ನೀಡುತ್ತಿದ್ದಾರೆ.

ಇದರಿಂದ ಆಶ್ರಮ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ. ಆದರೆ ಈಗ ಇಲ್ಲಿ ಅನಾಥರ ಸಂಖ್ಯೆ ಹೆಚ್ಚಿದ್ದು ಅದಕ್ಕೆ ತಕ್ಕಂತೆ ವಾಸ್ತವ್ಯಕ್ಕೆ ಕೊಠಡಿಯ ಕೊರತೆಯಿದೆ. ನಿರ್ವಹಣೆ ಮಾಡುವುದೇ ಒಂದು ಸವಾಲಾಗಿದೆ. ಆಶ್ರಮದ ನೊಂದ ಜೀವಗಳ ನೆರವಿಗೆ ದಾನಿಗಳು ಬರಬೇಕಿದೆ.

ಪುರಸಭೆ ಗಮನಕ್ಕೆ ತರುತ್ತೇನೆ
ಮಳೆ ಬಂದಾಗ ನೆರೆ ನೀರು ಹರಿದು ಸಮಸ್ಯೆಯಾಗುತ್ತಿದೆ. ಚರಂಡಿಯನ್ನು ನಾವೇ ಸ್ವಲ್ಪ ಸರಿಪಡಿಸಿಕೊಂಡಿದ್ದೇವೆ. ಪುರಸಭೆ ವಾರ್ಡ್‌ ಸದಸ್ಯರ ಗಮನಕ್ಕೆ ತಂದಿದ್ದರಿಂದ ಅವರು ಸ್ಪಂದಿಸಿ ಸರಿಪಡಿಸಬಹುದೆಂದು ನಂಬಿದ್ದೆವು. ಹೀಗಾಗಿ ಪುರಸಭೆ ಗಮನಕ್ಕೆ ತಂದಿರಲಿಲ್ಲ. ಆದರಿನ್ನು ತರುತ್ತೇನೆ.
-ಅಯಷಾ,
ವೃದ್ಧರ ಅನಾಥಾಶ್ರಮ ಜರಿಗುಡ್ಡೆ

Advertisement

Udayavani is now on Telegram. Click here to join our channel and stay updated with the latest news.

Next