Advertisement

Neravu: ಸ್ತ್ರೀಯರೇ…ನಿಮ್ಮ ಸುರಕ್ಷತೆಗೆ ಇದೆ ನೆರವು

08:40 AM Dec 20, 2023 | Team Udayavani |

ಬೆಂಗಳೂರು: ಮಹಿಳೆಯರಿಗೆ ಭದ್ರತೆ ನೀಡುವ ಉದ್ದೇಶದಿಂದ “ಸುರಕ್ಷಿತ ನಗರ’ ಯೋಜನೆಯಡಿ ಸ್ಥಾಪಿಸಿರುವ ಪೊಲೀಸ್‌ ಸಹಾಯ ಕೇಂದ್ರ “ನೆರವು’ ಬಹುಪಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಕುರಿತು ಮಹಿಳೆಯರಲ್ಲಿ ಇನ್ನೂ ಜಾಗೃತಿ ಮೂಡಬೇಕಿದೆ.

Advertisement

ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಸೇರಿದಂತೆ ಯಾವುದೇ ರೀತಿ ತೊಂದರೆಯಾದ ಸಂದರ್ಭದಲ್ಲಿ ತುರ್ತು ಸ್ಪಂದನೆ ನೀಡುವ ಉದ್ದೇಶದಿಂದಾಗಿ ಕಾಲೇಜು, ಕಂಪನಿಗಳು ಇರುವ ಸ್ಥಳ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಓಡಾಡುವ ಪ್ರದೇಶಗಳಲ್ಲಿ ಹಾಗೂ ಅಗತ್ಯ ಸೌಲಭ್ಯಗಳಿಂದ ದೂರವಿರುವ ಪ್ರದೇಶಗಳಲ್ಲಿ ಕ್ಯಾಬಿನ್‌ ರೂಪದಲ್ಲಿ ನಿರ್ಮಿಸಿರುವ “ನೆರವು’ ಪೊಲೀಸ್‌ ಔಟ್‌ ಪೋಸ್ಟ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ.

60 ಕೇಂದ್ರ ಸ್ಥಾಪನೆ: ಈಗಾಗಲೇ ಮೆಜೆಸ್ಟಿಕ್‌, ಕಾರ್ಪೋರೆಷನ್‌, ಫ್ರೀಡಂ ಪಾರ್ಕ್‌, ಮೌರ್ಯ ವೃತ್ತ, ರೇಸ್‌ಕೋರ್ಸ್‌ ರಸ್ತೆ, ಮಲ್ಲೇಶ್ವರ, ಟೌನ್‌ಹಾಲ್‌, ಮೈಸೂರು ರಸ್ತೆ ಸೇರಿದಂತೆ ನಗರಾದ್ಯಂತ 60 ಕೇಂದ್ರಗಳನ್ನು ನಿರ್ಮಿಸಲಾಗಿದೆ. 20 ಅಡಿ ಉದ್ದ ಹಾಗೂ 10 ಅಡಿ ಅಗಲ ವಿಸ್ತೀರ್ಣ ಹೊಂದಿರುವ ಈ ಕೇಂದ್ರಗಳು ತಲಾ 5 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಇದರಲ್ಲಿ ಓರ್ವ ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನೂ ನೇಮಿಸಿದ್ದು, ಶೇ. 99ರಷ್ಟು ಕಾರ್ಯನಿರ್ವಹಿಸುತ್ತಿವೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ರಮಣ ಗುಪ್ತ ಮಾಹಿತಿ ನೀಡಿದರು.

ಯಾರೆಲ್ಲಾ “ನೆರವುಪಡೆಯಬಹುದು?: “ನೆರವು’ ಹೆಸರೇ ಹೇಳುವಂತೆ ಸಮಸ್ಯೆಗೆ ಒಳಗಾದವರಿಗೆ ನೆರವು ನೀಡಲು ಇದನ್ನು ಸ್ಥಾಪಿಸಲಾಗಿದೆ. ಮುಖ್ಯವಾಗಿ ಮಹಿಳೆಯರು ಅಥವಾ ಕಾಲೇಜು ವಿದ್ಯಾರ್ಥಿನಿಯರು ರಸ್ತೆಯಲ್ಲಿ ಅಥವಾ ಇನ್ನಿತರ ಸ್ಥಳಗಳಲ್ಲಿ ಏನಾದರೂ ಸಮಸ್ಯೆಗೆ ಒಳಗಾದರೆ, ಹತ್ತಿರದ ನೆರವು ಕೇಂದ್ರವನ್ನು ಸಂಪರ್ಕಿಸಬಹುದು. “ನೆರವು’ ಪಡೆಯುವವರು ತಮ್ಮ ಹೆಸರನ್ನು ನೋಂದಾಯಿಸಿ, ಇದರ ಸದುಪಯೋಗ ಪಡೆಯಬಹುದು.

  1. ಮಹಿಳೆ/ಯುವತಿಯರು ಮನೆಯಿಂದ ಹೊರಬಂದಂತಹ ಸಂದರ್ಭದಲ್ಲಿ ಮುಟ್ಟಾದರೆ (ಪೀರಿಯಡ್ಸ್‌) ನೆರವು ಕೇಂದ್ರಕ್ಕೆ ಹೋಗಿ ಶೌಚಾಲಯ ಬಳಸಬಹುದು. ಜತೆಗೆ ಹೊಟ್ಟೆ ನೋವಿನಿಂದ ಬಳಲಿದರೆ, ಒಂದೆರಡು ಗಂಟೆ ಬೆಡ್‌ ರೆಸ್ಟ್‌ ಮಾಡಲು ಅವಕಾಶ ಇದೆ.
  2. ನಗರದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ಬಂದಂತಹ ಸಂದರ್ಭದಲ್ಲಿ ಮಹಿಳೆಯರು ನೆರವು ಕೇಂದ್ರದಲ್ಲಿ ಆಶ್ರಯ ಪಡೆಯಬಹುದು.
  3. ಬೇರೆ ಪ್ರದೇಶಗಳಿಂದ ಯಾರಾದರೂ ಮಹಿಳೆ ತಡರಾತ್ರಿ ಬೆಂಗಳೂರಿಗೆ ಬಂದಂತಹ ಸಂದರ್ಭದಲ್ಲಿ ಇಲ್ಲಿ ಬೆಳಗ್ಗೆಯವರೆಗೆ ಆಶ್ರಯ ಪಡೆಯಬಹುದು.
  4. ಕಾಲೇಜು ವಿದ್ಯಾರ್ಥಿನಿಯರಿಗೆ ಪುರುಷರಿಂದ ಏನಾದರೂ ತೊಂದರೆ ಆದಂತಹ ಸಂದರ್ಭದಲ್ಲಿ ಈ ಕೇಂದ್ರದಲ್ಲಿರುವ ಮಹಿಳಾ ಸಿಬ್ಬಂದಿ ಸಂಪರ್ಕಿಸಬಹುದು.
  5. ರಸ್ತೆಯಲ್ಲಿ ಸಾರ್ವಜನಿಕರಿಗೆ ಯಾವುದಾದರೂ ತೊಂದರೆಗೆ ಸಿಲುಕಿದಾಗ ಪೊಲೀಸ್‌ ಠಾಣೆ ಹುಡುಕುವ ಬದಲು, ನೆರವಿನಲ್ಲಿ ಇರುವ ಪೊಲೀಸ್‌ ಸಂಪರ್ಕಿಸಬಹುದು.
  6. ಮಹಿಳಾ ಪೊಲೀಸ್‌ ಸಿಬ್ಬಂದಿಯೂ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ತೊಂದರೆಗೆ ಒಳಗಾದರೆ ಅಥವಾ ಅನಾರೋಗ್ಯಕ್ಕೆ ತುತ್ತಾದರೆ ಇದರ ನೆರವು ಪಡೆಯಬಹುದು.

ಏನೆಲ್ಲಾ ಸೌಲಭ್ಯಗಳಿವೆ?

Advertisement

 ನಾಲ್ಕು ಬಂಕ್‌ ಹಾಸಿಗೆಯ ಕಾಟ್‌ಗಳು

 ಒಂದು ಸ್ನಾನ ಮತ್ತು ಶೌಚಾಲಯ ಕೊಠಡಿ

 ಎಲ್‌ಇಡಿ ದೀಪ

 ಎರಡು ಸೀಲಿಂಗ್‌ ಫ್ಯಾನ್‌

 ವಿದ್ಯುತ್‌ ಸಾಕೆಟ್‌ಗಳು

 300-ಲೀಟರ್‌ವುಳ್ಳ ನೀರಿನ ಟ್ಯಾಂಕ್‌

 ತುರ್ತು ಚಿಕಿತ್ಸೆ ಪೆಟ್ಟಿಗೆ

ಮಹಿಳೆಯರಿಗೆ ಸುರಕ್ಷತೆ ನೀಡುವ ನಿಟ್ಟಿನಲ್ಲಿ “ನೆರವು’ ಸ್ಥಾಪನೆಗೊಂಡಿದೆ. 2ತಿಂಗಳ ಹಿಂದೆ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಮಹಿಳೆಯರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪ್ರಸ್ತುತ 60 ನೆರವು ಕ್ಯಾಬಿನ್‌ಗಳನ್ನು ನಿರ್ಮಿಸಲಾಗಿದ್ದು, ಬೇರೆಡೆಗೂ ಹೆಚ್ಚಿನ ಬೇಡಿಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಅವಶ್ಯಕ ಸ್ಥಳಗಳನ್ನು ಗುರುತಿಸಿ ಸ್ಥಾಪಿಸಲಾಗುವುದು. ● ರಮಣ ಗುಪ್ತ, ಹೆಚ್ಚುವರಿ ಪೊಲೀಸ್‌ ಆಯುಕ್ತರು, ಪೂರ್ವ ವಿಭಾಗ.

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next