Advertisement
ಕರ್ಕುಂಜೆ ಗ್ರಾಮದ ನೇರಳಕಟ್ಟೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಸುಸಜ್ಜಿತ ಸರ್ಕಲ್ ನಿರ್ಮಾಣ ಮಾಡದೇ ಮೀನಾಮೇಷ ಎಣಿಸುತ್ತಿದ್ದು, ಇದರಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸು ವಂತಾಗಿದೆ. ಅಂಪಾರು, ಶಂಕರ ನಾರಾಯಣದಲ್ಲಿ ಮಾಡಿದಂತಹ ಸರ್ಕಲ್ ಇಲ್ಲಿಯೂ ಮಾಡಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆಯಾಗಿದೆ.
Related Articles
Advertisement
ನೇರಳಕಟ್ಟೆ ಜಂಕ್ಷನ್ ಪ್ರಮುಖ ಜಂಕ್ಷನ್ ಆಗಿದ್ದು, ಪ್ರಸಿದ್ಧ ಯಾತ್ರ ಸ್ಥಳಗಳಾದ ಕೊಲ್ಲೂರು, ಶೃಂಗೇರಿ, ಕಮಲಶಿಲೆ ದೇಗುಲಗಳನ್ನು ಸಂಪರ್ಕಿಸಲು ಇದೇ ಮಾರ್ಗವಾಗಿ ಸಂಚರಿಸಬೇಕು. ಇದಲ್ಲದೆ ಕುಂದಾಪುರ, ಆಜ್ರಿ, ಅಂಪಾರು, ಸಿದ್ದಾಪುರ ಮತ್ತಿತರ ಊರುಗಳಿಗೆ ಸಂಚರಿಸಬೇಕಾದರೂ ಇದೇ ಜಂಕ್ಷನ್ ಮೂಲಕವಾಗಿ ಹಾದುಹೋಗಬೇಕು. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಮಾರ್ಗ ಇದಾಗಿದೆ.
ವರ್ತಕರು ಅತಂತ್ರ
ಇಲ್ಲಿ ರಸ್ತೆ ವಿಸ್ತರಣೆ ಹಾಗೂ ಸುಸಜ್ಜಿತ ಸರ್ಕಲ್ ನಿರ್ಮಾಣ ಕಾಮಗಾರಿ ಸಲುವಾಗಿ ಇಲ್ಲಿನ ಸುಮಾರು 15 ಅಂಗಡಿಗಳನ್ನು ತೆರವು ಮಾಡಲಾಯಿತು. ಸರ್ಕಲ್ ನಿರ್ಮಾಣವೂ ಆಗಿಲ್ಲ. ತೆರವು ಮಾಡಿದ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಯನ್ನು ಸಹ ಕಲ್ಪಿಸಿಕೊಟ್ಟಿಲ್ಲ. ಶಾಸಕರು ವರ್ತಕರಿಗೆ ಸೂಕ್ತ ಕಲ್ಪಿಸಿಕೊಡಲು ಹೇಳಿದ್ದಾರೆ. ಗ್ರಾ.ಪಂ. ಸಹ ಇದಕ್ಕೆ ಮುಂದಾದರೂ ಸದಸ್ಯರ ನಡುವೆ ಒಮ್ಮತದ ತೀರ್ಮಾನ ಮಾತ್ರ ಇನ್ನೂ ಮೂಡಿದಂತಿಲ್ಲ. ಒಟ್ಟಿನಲ್ಲಿ ಅಂಗಡಿಯನ್ನು ಕಳೆದುಕೊಂಡ ವ್ಯಾಪಾರಸ್ಥರು ಮಾತ್ರ ಅತಂತ್ರವಾಗಿದ್ದಾರೆ.
ಬೇಗ ಮುಗಿಸಲಿ
ರಸ್ತೆ ವಿಸ್ತರಣೆಯಾಗಿದೆ. ಆದರೆ ಸರ್ಕಲ್ ನಿರ್ಮಾಣ ಮಾಡದೇ ಇರುವುದರಿಂದ,ವೇಗ ತಡೆ ನಿಯಂತ್ರಕವೂ ಇಲ್ಲದ ಕಾರಣ ಇದು ಅಪಘಾತ ವಲಯವಾಗುವ ಭೀತಿ ಇದೆ. ಆದಷ್ಟು ಬೇಗ ಲೋಕೋಪಯೋಗಿ ಇಲಾಖೆಯು ಸರ್ಕಲ್ ನಿರ್ಮಾಣಕ್ಕೆ ಮುಂದಾಗಲಿ. ಇನ್ನು ಹೈಮಾಸ್ಟ್ ದೀಪವನ್ನು ಅಳವಡಿಸಿಲ್ಲ. ರಾತ್ರಿ ವೇಳೆ ಸಂಚಾರ ಅಪಾಯಕಾರಿಯಾಗಿದೆ. – ಸಂತೋಷ್ ಪೂಜಾರಿ, ಉಪಾಧ್ಯಕ್ಷರು, ಕರ್ಕುಂಜೆ ಗ್ರಾ.ಪಂ.