Advertisement

ಚೀನಾ ಕುಮ್ಮಕ್ಕು: ಬಿಹಾರ ಗಡಿಯಲ್ಲಿ ನೇಪಾಳ ಸೇನೆಯಿಂದ ಗುಂಡಿನ ದಾಳಿ, ಓರ್ವ ರೈತ ಸಾವು

03:55 PM Jun 12, 2020 | Nagendra Trasi |

ನವದೆಹಲಿ:ಭಾರತ ಮತ್ತು ನೇಪಾಳದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೇಪಾಳಿ ಸೇನೆ ಬಿಹಾರದ ಗಡಿಭಾಗದಲ್ಲಿ ರೈತರನ್ನು ಗುರಿಯಾಗಿರಿಸಿ ನಡೆಸಿದ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಈ ಘಟನೆ ಬಿಹಾರದ ಸೋನಾವಾರ್ಸಾದಲ್ಲಿನ ಭಾರತ-ನೇಪಾಳ ಗಡಿಭಾಗವಾದ ಲಾಲ್ ಬಂಡಿ ಸಮೀಪ ನಡೆದಿದ್ದು, ಮೂವರು ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ. ಅಷ್ಟೇ ಅಲ್ಲ ಗಾಯಗೊಂಡ ವ್ಯಕ್ತಿಯೊಬ್ಬನನ್ನು ನೇಪಾಳ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.

ಬಿಹಾರ ಗಡಿಯಲ್ಲಿ ನಡೆದಿರುವ ಈ ಬೆಳವಣಿಗೆ ಬಗ್ಗೆ ಸಶಸ್ತ್ರ ಸೀಮಾ ಬಲ್ ಬಿಹಾರ್ ಸೆಕ್ಟರ್ ನ ಐಜಿ ಖಚಿತಪಡಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಲಾಲ್ ಬಂಡಿ ಪ್ರದೇಶದಲ್ಲಿ ಕೆಲವು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ನೇಪಾಳಿ ಸೈನಿಕರು ಗುಂಡಿನ ದಾಳಿ ನಡೆಸಿದ್ದರು. ಆದರೆ ಕೆಲವು ಭಾರತೀಯರು ಗಡಿ ನುಸುಳಲು ಯತ್ನಿಸಿದ್ದರಿಂದ ಗುಂಡು ಹಾರಿಸಿರುವುದಾಗಿ ನೇಪಾಳಿ ಸೈನಿಕರು ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

ಇತ್ತೀಚೆಗಷ್ಟೇ ನೇಪಾಳ ಭಾರತದ ಪ್ರದೇಶಗಳಾದ ಲಿಪುಲೇಖ್ ಮತ್ತು ಕಾಲಾಪಾನಿ ಪ್ರದೇಶ ತನ್ನ ವ್ಯಾಪ್ತಿಗೆ ಸೇರಿದ್ದು ಎಂದು ಬಿಂಬಿಸಿ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಇದು ಭಾರತ ಮತ್ತು ನೇಪಾಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು.

Advertisement

ನಾರಾಯಣ್ ಪುರದ ನೇಪಾಳಿ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ಪ್ರಕಾರ, ಭಾರತೀಯ ಪ್ರಜೆಗಳ ಗುಂಪೊಂದು ಬಲವಂತವಾಗಿ ಗಡಿಭಾಗದಿಂದ ನೇಪಾಳವನ್ನು ಪ್ರವೇಶಿಸಲು ಯತ್ನಿಸಿತ್ತು. ಈ ವೇಳೆ ಜನರನ್ನು ಚದುರಿಸಲು ನೇಪಾಳದ ಸೇನೆ ಗಾಳಿಯಲ್ಲಿ ಗುಂಡುಹಾರಿಸಿರುವುದಾಗಿ ನೇಪಾಳದ ಮಾಧ್ಯಮ ವರದಿ ಮಾಡಿದೆ.

ನೇಪಾಳಕ್ಕೆ ಚೀನಾ ಕುಮ್ಮಕ್ಕು:
ಇತ್ತೀಚೆಗೆ ಉತ್ತರ ಸಿಕ್ಕಿಂ, ಲಡಾಖ್ ನಲ್ಲಿ ನಡೆದ ಸಂಘರ್ಷಕ್ಕೂ ನೇಪಾಳ ಸೇನೆ ದಾಳಿ ನಡೆಸಿರುವ ಘಟನೆಯ ಹಿಂದೆ ಚೀನಾದ ಕುಮ್ಮಕ್ಕು ಇದ್ದಿರುವುದಾಗಿ ವರದಿಯೊಂದು ಆರೋಪಿಸಿದೆ. ಲಡಾಖ್ ವಿಚಾರದ ನಡುವೆಯೇ ಲಿಫುಲೇಖ್ ಪಾಸ್ ಪ್ರದೇಶದ ಬಗ್ಗೆ ನೇಪಾಳ ಮತ್ತು ಭಾರತದ ನಡುವೆ ಸಂಘರ್ಷ ಏರ್ಪಡಲು ಚೀನಾ ಚಿತಾವಣೆ ನಡೆಸಿರುವುದಾಗಿ ವರದಿ ವಿವರಿಸಿದೆ.

ಮೇ ತಿಂಗಳ ಆರಂಭದಲ್ಲಿ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಲಿಪುಲೇಖ್ ರಸ್ತೆಯನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ನೇಪಾಳ ಕಿರಿಕ್ ಮಾಡಿದ್ದು, ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶ ತನಗೆ ಸೇರಿದ್ದು ಎಂದು ವಾದಿಸಿತ್ತು. ಅಷ್ಟೇ ಅಲ್ಲ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿ ಭಾರತದ ಪ್ರದೇಶವನ್ನು ತನ್ನದು ಎಂದು ವಾದಿಸಿತ್ತು. ಈ ಎಲ್ಲಾ ಚಿತಾವಣೆಯನ್ನು ಚೀನಾದ ಅಣತಿಯಂತೆ ಮಾಡಲಾಗುತ್ತಿದೆ ಎಂದು ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಪರೋಕ್ಷವಾಗಿ ಸೂಚನೆ ನೀಡಿರುವುದಾಗಿ ಭಾರತೀಯ ಸೇನೆಯ ವರಿಷ್ಠ ಎಂಎಂ ನರಾವಣೆ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next