ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಹೇಳಿ ಮಾಡಿಸಿದಂತಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತವಾಗಿಲ್ಲ. ಇದು ಶಿಕ್ಷಣಕ್ಕಿಂತ ಸಮಸ್ಯೆಗಳಿಗೆ ಹೆಚ್ಚು ದಾರಿ ಮಾಡಿಕೊಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಬೆಂಗಳೂರು ವಿವಿಯ 59ನೇ ಘಟಿಕೋತ್ಸವದಲ್ಲಿ ವಿ.ವಿ.ಗಳ ಧನಸಹಾಯ ಆಯೋಗದ ಉಪಾಧ್ಯಕ್ಷ ಪ್ರೊ| ದೀಪಕ್ ಕುಮಾರ್ ಶ್ರೀವಾಸ್ತವ ಸಮ್ಮುಖದಲ್ಲಿ ಎನ್‌ಇಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರೊ| ದೀಪಕ್ ಕುಮಾರ್ ತಮ್ಮ ಭಾಷಣದಲ್ಲಿ ಎನ್‌ಇಪಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ಡಾ| ಸುಧಾಕರ್ ತಮ್ಮ ಭಾಷಣದ ವೇಳೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಪುನರ್ ವಿಮರ್ಶಿಸಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಬಹುಶಿಸ್ತೀಯ, ಬಹು ಆಯ್ಕೆಯ, ಮುಕ್ತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಈ ಶಿಕ್ಷಣ ನೀತಿ ಒಂದೇ ಸೂರಿನಡಿ ಎಲ್ಲ ವಿಭಾಗಗಳನ್ನು ಹೊಂದಿರುವ ಖಾಸಗಿ ವಿಶ್ವವಿದ್ಯಾನಿಲಯ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾಗಿರಬಹುದು.
ಆದರೆ ಕೃಷಿ, ಕಾನೂನು, ಎಂಜಿನಿಯರಿಂಗ್, ವೈದ್ಯಕೀಯ ಎಂದೆಲ್ಲ ಹಂಚಿಹೋಗಿರುವ ಸರಕಾರಿ ವಿ.ವಿ.ಯಲ್ಲಿ ಅಸಾಧ್ಯವಾಗಿದೆ. ಈ ಯೋಜನೆ ಜಾರಿಗೆ ಬೇಕಾದಷ್ಟು ಶಿಕ್ಷಕರೇ ಇಲ್ಲದಿರುವಾಗ ಕಲಿಕೆ ಹೇಗೆ ಸಾಧ್ಯ ಎಂದರು.