ಮಂಗಳೂರು: ಸಮಗ್ರ ವಿಕಸನಕ್ಕೆ ಅಗತ್ಯವಾದ “ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020’ರಿಂದ ವಿದ್ಯಾರ್ಥಿಗಳನ್ನು ವಂಚಿಸಲು ರಾಜ್ಯ ಸರಕಾರ ಹುನ್ನಾರ ನಡೆಸುತ್ತಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಎನ್‌ಇಪಿ ರದ್ದುಗೊಳಿಸುತ್ತಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ ಬುಧವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ನಗರದಲ್ಲಿ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.
ಕೇಂದ್ರ ಸರಕಾರ ರೂಪಿಸಿರುವ ಉತ್ತಮವಾದ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಸಿದ್ಧವಿಲ್ಲ. ರಾಜ್ಯ ಸರಕಾರ ಕೀಳರಿಮೆಯಿಂದ ಈ ರೀತಿ ಮಾಡುತ್ತಿದೆ. ಉತ್ತಮ ಶಿಕ್ಷಣದಿಂದ ವಿದ್ಯಾರ್ಥಿಗಳನ್ನು ವಂಚಿಸುವ ಹುನ್ನಾರವನ್ನು ಬಯಲಿಗೆಳೆಯಬೇಕು. ಎನ್‌ಇಪಿ ಮಾತೃಶಿಕ್ಷಣ ಮಾತೃ ಮೂಲಿಕಾ ವ್ಯವಸ್ಥೆಗೂ ಪೂರಕವಾಗಿದೆ. ಸಮಗ್ರ ವಿಕಸನದ ಜತೆಗೆ ಸಂಸ್ಕಾರ, ಸಂಸ್ಕೃತಿ ಕೂಡ ಬೆಳೆಯಲು ಸಹಕಾರಿಯಾಗಿದೆ. ಸಂಸ್ಕಾರವಿಲ್ಲದ ಶಿಕ್ಷಣದಿಂದ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಸರಕಾರದ ಮೇಲಿದೆ. ರಾಜ್ಯದಲ್ಲಿಯೂ ಎನ್‌ಇಪಿ ಜಾರಿಗೊಳಿಸುವವರೆಗೂ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆ ಗಳು ಒಂದಾಗಿ ಹೋರಾಟ ನಡೆಸಬೇಕಿದೆ ಎಂದು ಸ್ವಾಮೀಜಿ ಹೇಳಿದರು.
ಜಾಗತಿಕ ಸ್ಪರ್ಧೆಗೆ ಅವಶ್ಯ
ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಹ ಪ್ರಚಾರಕ್ ನಂದೀಶ್ ಮಾತನಾಡಿ, ಗ್ರಾಮ ಮಟ್ಟದಿಂದ ಉನ್ನತ ಮಟ್ಟದವರೆಗೆ ಶಿಕ್ಷಣ ತಜ್ಞರೂ ಸೇರಿದಂತೆ 2 ಲಕ್ಷಕ್ಕೂ ಅಧಿಕ ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಿ ಹಲವು ಹಂತಗಳಲ್ಲಿ ಚರ್ಚೆ ನಡೆಸಿ ಮಕ್ಕಳ ಸಮಗ್ರ ವಿಕಾಸಕ್ಕಾಗಿ ಎನ್‌ಇಪಿ ರೂಪಿಸಲಾಗಿದೆ. ಜಾಗತಿಕ ಮಟ್ಟದ ಸ್ಪರ್ಧೆಗೆ ಎನ್‌ಇಪಿ ಅಗತ್ಯವಾಗಿದೆ. ಅಲ್ಲದೆ ಇದು ವಿದ್ಯಾರ್ಥಿಗಳ ಆಯ್ಕೆಯ ಓದಿಗೂ ಅವಕಾಶ ಕಲ್ಪಿಸುತ್ತದೆ. ಹಾಗಾಗಿ ರಾಜ್ಯದಲ್ಲಿಯೂ ಎನ್‌ಇಪಿ ಅನುಷ್ಠಾನವಾಗಬೇಕು ಎಂದರು.
ಸಿಂಡಿಕೇಟ್ ಮಾಜಿ ಸದಸ್ಯ ರಮೇಶ್ ಕೆ., ಸುಜಿತ್ ಪ್ರತಾಪ್, ಮುರಲೀಧರ ನಾಯಕ್, ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ, ಎಬಿವಿಪಿ ಜಿಲ್ಲಾ ಪ್ರಮುಖ್ ಭಾರತಿ ಪ್ರಭು, ಎಬಿವಿಪಿ ಮಂಗಳೂರು ತಾಲೂಕು ಸಂಚಾಲಕ ಆದಿತ್ಯ ಮೊದಲಾದವರು ಪಾಲ್ಗೊಂಡಿದ್ದರು.