Advertisement

ಸಾರ್ವಜನಿಕರಿಗೆ ತೊಂದರೆಯಾದರೆ ಪ್ರತಿಭಟಿಸಲು ಹಿಂಜರಿಯಲ್ಲ

09:14 AM Jan 15, 2019 | Team Udayavani |

ನೆಲ್ಯಾಡಿ : ಅಧಿಕಾರ ಇರಲಿ, ಇಲ್ಲದಿರಲಿ ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಕಾಂಗ್ರೆಸ್‌ ಕಾಲ್ನಡಿಗೆ ಜಾಥಾದ ನೇತೃತ್ವ ವಹಿಸಿಕೊಂಡಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.

Advertisement

ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ- ಬಿ.ಸಿ. ರೋಡ್‌ ಚತುಷ್ಪಥ ಕಾಮಗಾರಿ ಪುನರಾರಂಭಿಸುವಂತೆ ಒತ್ತಾಯಿಸಿ ‘ಹೆದ್ದಾರಿ ನಿರ್ಮಿಸಿ-ಜನರ ಪ್ರಾಣ ಉಳಿಸಿ’ಎನ್ನುವ ಘೋಷ ವಾಕ್ಯದೊಂದಿಗೆ ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ನೆಲ್ಯಾಡಿ ಯಿಂದ ಬಿ.ಸಿ. ರೋಡ್‌ ತನಕ 3 ದಿನಗಳ ಕಾಲ ನಡೆಯಲಿರುವ ಕಾಲ್ನಡಿಗೆ ಜಾಥಾದಲ್ಲಿ ಜ. 14ರ ಬೆಳಗ್ಗೆ ಪಾಲ್ಗೊಂಡು ಅವರು ಮಾತನಾಡಿದರು.

ಯುಪಿಎ ಸರಕಾರದ ಅವಧಿಯಲ್ಲಿ ಭೂಸಾರಿಗೆ ಸಚಿವರಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಅವರ ಪ್ರಯತ್ನದಿಂದ ಅಡ್ಡಹೊಳೆ-ಬಿ.ಸಿ. ರೋಡ್‌ ಚತುಷ್ಪಥ ಕಾಮಗಾರಿಗೆ ಅನುಮೋದನೆ ದೊರೆತಿದೆ. ಈಗಿನ ಸಂಸದರು ಈ ಯೋಜನೆ ಕಾರ್ಯಗತಗೊಳಿಸಬೇಕಿತ್ತು.

ಅವರು ಕಾಮಗಾರಿ ಸ್ಥಗಿತಗೊಳಿಸಲು ಅವಕಾಶ ನೀಡಬಾರದಿತ್ತು ಎಂದು ಹೇಳಿದ ಅವರು, ಎತ್ತಿನಹೊಳೆ ಯೋಜನೆ ವಿರುದ್ಧ ಪಾದಯಾತ್ರೆ ನಡೆಸಿದ್ದ ಸಂಸದರು್ ಹಾಗೂ ಬಿಜೆಪಿ ಮುಖಂಡರು ಹೆದ್ದಾರಿ ಕಾಮಗಾರಿ ಸ್ಥಗಿತವಾದಾಗ ಎಲ್ಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

ಲೋಕಸಭೆಯಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ್ದ ಯು. ಶ್ರೀನಿವಾಸ ಮಲ್ಯ ಅವರ ಕನಸಿನ ಮಂಗಳೂರು ಬಂದರು ದಕ್ಷಿಣ ಭಾರತದಲ್ಲಿ ಮುಂಚೂಣಿಯ ಬಂದರು ಆಗುವತ್ತ ದಾಪುಗಾಲು ಹಾಕಿತ್ತು. ಉಭಯ ಜಿಲ್ಲೆಯನ್ನು ಲೋಕಸಭೆಯಲ್ಲಿ ಬೆನಗಲ್‌ ಶಿವರಾಮ್‌, ಕೆ.ಆರ್‌. ಆಚಾರ್‌, ಎ. ಶಂಕರ ಆಳ್ವ, ಸಿ.ಎಂ. ಪೂಣಚ್ಚ, ಕೆ.ಕೆ. ಶೆಟ್ಟಿ, ಪಿ. ರಂಗನಾಥ ಶೆಣೈ, ಟಿ.ಎ. ಪೈ, ಜನಾರ್ದನ ಪೂಜಾರಿ, ಆಸ್ಕರ್‌ ಫೆರ್ನಾಂಡಿಸ್‌, ವಿನಯಕುಮಾರ್‌ ಸೊರಕೆ ಅವರು ಪ್ರತಿನಿಧಿಸಿ ಬಂದರು. ನಗರ ಸಂಪರ್ಕಿಸುವ ರಸ್ತೆ, ಜಿಲ್ಲೆಯ ಅಭಿವೃದ್ಧಿಗೆ ಬಹಳಷ್ಟು ಆದ್ಯತೆ ನೀಡಿದ್ದರು. 30 ವರ್ಷಗಳಿಂದ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಸಂಸದರೇ ಇದ್ದಾರೆ. ಶ್ರೀನಿವಾಸ ಮಲ್ಯರು ನಂ. 1 ಸಂಸದರಾಗಿದ್ದರು. ಮಲ್ಯರ ಮುಂದೆ ಯಾರೂ ನಂ.1 ಸಂಸದರು ಆಗಲು ಸಾಧ್ಯವಿಲ್ಲ ಎಂದರು.

Advertisement

ಬ್ಯಾಂಕ್‌ ವಿಲೀನದ ಹಿಂದೆ ಕೈವಾಡ
ದೊಡ್ಡ ಮೊತ್ತದ ಸಾಲ ನೀಡುವ ಉದ್ದೇಶದಿಂದಲೇ ವಿಜಯ ಬ್ಯಾಂಕ್‌ ಅನ್ನು ಬೇರೆ ಬ್ಯಾಂಕಿನ ಜೊತೆ ವಿಲೀನ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಇದರಿಂದ ಅಂಬಾನಿ ಸೇರಿದಂತೆ ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. ಕೇಂದ್ರ ಸರಕಾರ ಜನರ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿಲ್ಲ. ಕಾರ್ಪೋರೇಟ್ ಸಂಸ್ಥೆಗಳ ಏಜೆಂಟ್ರಂತೆ ಕೆಲಸ ಮಾಡುತ್ತಿದೆ ಎಂದು ರೈ ಟೀಕಿಸಿದರು.

ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರು ಮಾತನಾಡಿ, ನಳಿನ್‌ಕುಮಾರ್‌ ಕಳೆದ 10 ವರ್ಷಗಳಿಂದ ಸಂಸ ದರಾಗಿದ್ದಾರೆ. ಅವರು ಲೋಕಸಭೆ ಯಲ್ಲಿ ಈ ಭಾಗದ ಜನರ ಸಮಸ್ಯೆ ಪ್ರಸ್ತಾವಿಸಿದಲ್ಲಿ ಅವರಿಗೆ ಚಿನ್ನದ ಪದಕ ನೀಡುತ್ತೇವೆ. ಅವರು ಕೇವಲ ಸುಳ್ಳು ಭರವಸೆ ನೀಡುತ್ತಿದ್ದಾರೆ. ರೈತರ, ಯುವಕರ, ಕಾರ್ಮಿಕರ, ಕೃಷಿಕರ ಸಮಸ್ಯೆ ಬಗ್ಗೆ ಪ್ರಸ್ತಾಪಿಸದೇ ಇರುವ ಸಂಸದರು ನಮಗೆ ಬೇಕೇ ? ಎಂದು ಪ್ರಶ್ನಿಸಿದರು.

ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾದಯಾತ್ರೆ ಪ್ರಮುಖ ಅಸ್ತ್ರವಾಗಿದೆ. ಮಹಾತ್ಮ ಗಾಂಧೀಜಿಯವರೇ ಕೊಟ್ಟ ಅಸ್ತ್ರವೂ ಇದಾಗಿದೆ. ಈ ಹಿಂದೆ ಬಿಜೆಪಿ ಮುಖಂಡ ಜನಾರ್ದನ ರೆಡ್ಡಿಯವರ ಸವಾಲು ಸ್ವೀಕರಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಕಾಂಗ್ರೆಸ್‌ ಬೆಂಗಳೂರಿನಿಂದ ಬಳ್ಳಾರಿಗೆ 325 ಕಿ.ಮೀ.ಪಾದಯಾತ್ರೆ ನಡೆಸಿದೆ. ಈ ಹೋರಾಟದಿಂದಲೇ ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ಜನಾರ್ದನ ರೆಡ್ಡಿ ಅಲ್ಯುಮಿನಿಯಂ ತಟ್ಟೆಯಲ್ಲೂ ಊಟ ಮಾಡುವಂತಾಯಿತು. ಅನ್ಯಾಯದ ವಿರುದ್ಧ, ಜನರ ಪರವಾದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.

ಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಜೆ.ಆರ್‌. ಲೋಬೋ, ಕೆಪಿಸಿಸಿ ಉಪಾಧ್ಯಕ್ಷ ಕೆಂಪರಾಜು, ಕೆಪಿಸಿಸಿ ಸದಸ್ಯರಾದ ಡಾ| ರಘು, ಕೆ.ಪಿ.ತೋಮಸ್‌, ಜಿಲ್ಲಾ ಯುವಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗೀಸ್‌, ಸರ್ವೋತ್ತಮ ಗೌಡ, ಕೆ.ಕೆ. ಶಾಹುಲ್‌ ಹಮೀದ್‌, ಎಂ.ಎಸ್‌. ಮಹಮ್ಮದ್‌, ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕ ರೆ|ಫಾ| ವರ್ಗೀಸ್‌ ಕೈಪುನಡ್ಕ, ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷ ಸಿದ್ದೀಕ್‌, ಮಮತಾ ಗಟ್ಟಿ, ಉಪ್ಪಿನಂಗಡಿ-ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ತಾ| ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ತೌಸೀಫ್, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ತಾ.ಪಂ. ಸದಸ್ಯೆ ಉಷಾ ಅಂಚನ್‌, ಮಮತಾ ಶೆಟ್ಟಿ, ಭಾರತಿ, ಶಾಲೆಟ್ ಪಿಂಟೋ, ಅಪ್ಪಿ, ಉಷಾ ಶರತ್‌, ಆಶಾ ಟಿ., ಲೀಲಾವತಿ, ಅಶ್ರಫ್ ಬಸ್ತಿಕಾರ್‌, ಮುಸ್ತಾಫ‌ ಕೆಂಪಿ ಸೇರಿದಂತೆ ತಾ.ಪಂ. ಸದಸ್ಯರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ತಾ.ಪಂ. ಸದಸ್ಯ ಗಣೇಶ್‌ ಕೈಕುರೆ ಸ್ವಾಗತಿಸಿದರು. ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ವಂದಿಸಿದರು. ಕೆಡಿಪಿ ಸದಸ್ಯ, ನ್ಯಾಯವಾದಿ ಇಸ್ಮಾಯಿಲ್‌ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಕೆಪಿಸಿಸಿ ಕಾರ್ಯದರ್ಶಿ ಸುಳ್ಯದ ವೆಂಕಪ್ಪ ಗೌಡ ಅವರು ನೆಲ್ಯಾಡಿಯಲ್ಲಿ ಕಾಲ್ನಡಿಗೆ ಜಾಥಾದ ಉಸ್ತುವಾರಿ ವಹಿಸಿಕೊಂಡಿದ್ದರು.

ವಿದ್ಯಾರ್ಥಿಗಳೂ ಭಾಗಿ
ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಭೆ, ಕಾಲ್ನಡಿಗೆ ಜಾಥಾದಲ್ಲಿ ಸ್ಥಳೀಯ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಶಾಲಾ ಸಮವಸ್ತ್ರದಲ್ಲೇ ವಿದ್ಯಾರ್ಥಿಗಳು ಪ್ರತಿಭಟನ ಸಭೆಯಲ್ಲಿ ಭಾಗವಹಿಸಿದ್ದು, ಮಕ್ಕಳನ್ನೂ ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಸಂಘಟಕರ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ವತಿಯಿಂದ ಕಳುಹಿಸಿಕೆ ೂಡಲಾಗಿದೆ. ಸಭೆಯ ಬಳಿಕ ವಿದ್ಯಾರ್ಥಿಗಳು ಮತ್ತೆ ತರಗತಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಸಂಸದರು ಮೌನವೇಕೆ?
ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ, ವಿಧಾನಪರಿಷತ್‌ ಸದಸ್ಯ ಹರೀಶ್‌ಕುಮಾರ್‌ ಮಾತನಾಡಿ, 10 ವರ್ಷಗಳ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ, ಆಸ್ಕರ್‌ ಫೆರ್ನಾಂಡೀಸ್‌ರವರು ಭೂಸಾರಿಗೆ ಸಚಿವರಾಗಿದ್ದ ವೇಳೆ ಅಡ್ಡಹೊಳೆ-ಬಿ.ಸಿ.ರೋಡ್‌ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಎಲ್‌ ಆ್ಯಂಡ್‌ ಟಿ ಕಂಪನಿಯವರು 6 ತಿಂಗಳು ಕೆಲಸ ಮಾಡಿ, ಮಾರ್ಗ ಅಗೆದು ಹೊಂಡ ನಿರ್ಮಿಸಿ ಈಗ ಕೆಲಸ ಸ್ಥಗಿತಗೊಳಿಸಿದ್ದಾರೆ. ಅಪೂರ್ಣ ಕಾಮಗಾರಿಯಿಂದಾಗಿ ಜೀವಹಾನಿಯಾಗುವ ಸಾಧ್ಯತೆ ಇದ್ದರೂ, ಸ್ಥಳೀಯ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ಮೌನ ವಹಿಸಿರುವುದು ಯಾಕೆ ಎಂದು ಉತ್ತರಿಸಬೇಕಾಗಿದೆ. ಕಾಂಗ್ರೆಸ್‌ ವತಿಯಿಂದ ಕಾಲ್ನಡಿಗೆ ಜಾಥಾ ಮಾಡುತ್ತೇವೆ ಎಂದು ತಿಳಿದ ಸಂಸದರು ಕಾಮಗಾರಿಗೆ ಸಂಬಂಧಿಸಿ ಕೇಂದ್ರ ಸಚಿವರಿಗೆ ಮನವಿ ಕೊಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಸಂಸದರು ಸಂಪೂರ್ಣ ವಿಫ‌ಲ
ಕಾಲ್ನಡಿಗೆ ಜಾಥಾ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮಾತನಾಡಿ, ಇಲ್ಲಿನ ಹೆದ್ದಾರಿಯ ಪರಿಸ್ಥಿತಿಯೇ ಕೇಂದ್ರ ಸರಕಾರದ ಪರಿಸ್ಥಿತಿಯೂ ಆಗಿದೆ. ಕೇಂದ್ರ ಸರಕಾರ ಹಾಗೂ ಇಲ್ಲಿನ ಸಂಸದರು ಎಲ್ಲ ರಂಗದಲ್ಲೂ ಸಂಪೂರ್ಣ ವಿಫ‌ಲರಾಗಿದ್ದಾರೆ. ಕೇಂದ್ರದಲ್ಲಿ ನಾಲ್ಕೂವರೆ ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಿಂದ ದೇಶದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಲೋಕಸಭೆಯಲ್ಲಿ ವಿದ್ಯಾರ್ಥಿಗಳ, ರೈತರ, ನಿರುದ್ಯೋಗಿಗಳ, ಕಾರ್ಮಿಕರ, ಮಹಿಳೆಯರ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಪಾಕಿಸ್ಥಾನದ ಪ್ರಧಾನಿ ಮನೆಗೆ ಹೋಗಿ ಬರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಹುತಾತ್ಮ ಸೈನಿಕರ ಮನೆಗೆ ಹೋಗಿ ಸಾಂತ್ವನ ಹೇಳಲು ಪುರುಸೋತ್ತಿಲ್ಲ. ಬಿಜೆಪಿಯವರಿಗೆ ಜನರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ಅಡ್ಡಹೊಳೆ-ಬಿ.ಸಿ. ರೋಡ್‌ ಚತುಷ್ಪಥ ಕಾಮಗಾರಿ ಪುನರಾರಂಭಕ್ಕೆ ಒತ್ತಾಯಿಸಿ ಕಾಂಗ್ರೆಸ್‌ ವತಿಯಿಂದ ನಡೆಯುತ್ತಿರುವ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು, ಶೀಘ್ರದಲ್ಲಿ ಕಾಮಗಾರಿ ಪುನರಾರಂಭಕ್ಕೆ ನೈತಿಕ ಬೆಂಬಲ ನೀಡಬೇಕು ಎಂದರು.

18 ವರ್ಷ ಶಬರಿಮಲೆಯಾತ್ರೆ
40 ದಿನ ಭಜನ ಮಂದಿರದಲ್ಲಿದ್ದು ವೃತಾಚರಣೆ ಮಾಡಿ 18 ವರ್ಷ ಶಬರಿಮಲೆ ಯಾತ್ರೆ ಕೈಗೊಂಡಿದ್ದೇನೆ. ನಾನೊಬ್ಬ ಸಕ್ರೀಯ ಕ್ರೀಯಾಶೀಲ ಸನಾತನ ಹಿಂದೂ ಧರ್ಮದ ಪರಿಪಾಲಕನಾಗಿದ್ದೇನೆ. ರಾಮಭಕ್ತನೂ ಆಗಿದ್ದೇನೆ ಎಂದು ಹೇಳಿದ ರಮಾನಾಥ ರೈ, ಸಂಘ ಪರಿವಾರದ ಪ್ರಮುಖ ನಾಯಕರು ಶಬರಿಮಲೆಗೆ ಹೋಗಿದ್ದಾರೆಯೇ? ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡುವವರಿಗೆ ದೇವರ ಶಾಪ ತಟ್ಟಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next