ನೆಲಮಂಗಲ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ದಾಖಲೆಗಳಿಲ್ಲದ 48.156ಕೆ.ಜಿ ಬೆಳ್ಳಿ ವಸ್ತುಗಳು, ಲಕ್ಷಾಂತರ ಮೌಲ್ಯದ ಸೀರೆ,ಬಟ್ಟೆಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 20 ಲಕ್ಷ ನಗದು ಹಣವನ್ನು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಶಿ ಧರ್ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಂಡಿದ್ಧಾರೆ.
ಬೆಂಗಳೂರಿನಿಂದ ಚಿಕ್ಕಮಂಗಳೂರಿಗೆ ನೆಲಮಂಗಲ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ಬೆಳ್ಳಿ ವಸ್ತುಗಳನ್ನು ರಾಷ್ಟ್ರೀಯ ಹೆದ್ದಾರಿ 48ರ ಟೋಲ್ ಬಳಿ ಗ್ರಾಮಾಂತರ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಸುಮಾರು 20ಲಕ್ಷ 22 ಸಾವಿರ ಬೆಲೆ ಬಾಳುವ 48.156ಕೆ.ಜಿ ಬೆಳ್ಳಿ ಕಂಡು ಬಂದಿದ್ದು ದಾಖಲಾತಿ ಇಲ್ಲದ ಪರಿಣಾಮ ಇಬ್ಬರನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ.
ನಗರ ಪೊಲೀಸರಿಂದ 3 ಲಕ್ಷ ವಶ: ಬೆಂಗಳೂರಿ ನಿಂದ ಅಜ್ಜನಪುರದ ಕಡೆ ಸಂಚರಿಸುತ್ತಿದ್ದ ವ್ಯಕ್ತಿಯ ವಾಹನದಲ್ಲಿ 17 ಲಕ್ಷ ನಗದು ಪತ್ತೆಯಾಗಿದ್ದು, ಬ್ಯಾಡರಹಳ್ಳಿ ಗೇಟ್‌ಬಳಿ ನಗರ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ಮಾಡಿ ದಾಖಲಾತಿ ನೀಡದ ಹಿನ್ನೆಲೆ ಹಣ ವಶಕ್ಕೆ ಪಡೆದು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದಲ್ಲದೇ ಬೆಂಗಳೂರಿನಿಂದ ತುಮಕೂರಿನ ಕಡೆಗೆ ಬರುತ್ತಿದ್ದ ಟಿ.ಎನ್ 12ಎಡಬ್ಲ್ಯೂ 9068 ನೀಲಿ ಬಣ್ಣದ ಕಾರನ್ನು ನೆಲಮಂಗಲದ ಬಳಿ ಪರಿಶೀಲನೆ ಮಾಡಿದಾಗ ವಾಹನದಲ್ಲಿದ್ದ ಬ್ಯಾಗ್‌ನಲ್ಲಿ 3ಲಕ್ಷ ಹಣ ಪತ್ತೆಯಾಗಿದ್ದು, ಚಾಲಕ ದೀಪ್‌ಸಿಂಗ್ ಸರಿಯಾದ ಮಾಹಿತಿ ಹಾಗೂ ದಾಖಲಾತಿ ನೀಡದೆ ಪರಿಣಾಮ 3 ಲಕ್ಷ ಹಣ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಇನ್‌ಸ್ಪೆಕ್ಟರ್ ಶಶಿಧರ್ ತಿಳಿಸಿದರು.
ಒಟ್ಟಾರೆ ನಾಲ್ಕು ಪ್ರತ್ಯೇಕ ಪ್ರಕರಣದಲ್ಲಿ ಯಾವ ಪಕ್ಷಕ್ಕೆ ಸೇರಿದ ವಸ್ತುಗಳು, ಹಣ ಎಂಬುದು ತಿಳಿದುಬಂದಿಲ್ಲ, ವಶಕ್ಕೆ ಪಡೆದ ವ್ಯಕ್ತಿಗಳಿಂದ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಲಕ್ಷಾಂತರ ಬಟ್ಟೆ ವಶ : ನೆಲಮಂಗಲ ಟೋಲ್ ಬಳಿ ಲಕ್ಷಾಂತರ ಬೆಲೆ ಬಾಳುವ ಸೀರೆ, ಪುರುಷರ ಪ್ಯಾಂಟ್, ಶರ್ಟ್ ಗಳಿದ್ದ 18 ಬ್ಯಾಗ್‌ಗಳು ಹಾಗೂ 1 ರೆನಾಲ್ಟ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಇವರು ಬೆಂಗಳೂರಿನಿಂದ ಹಾಸನದ ಕಡೂರಿಗೆ ಸಾಗಿಸುತ್ತಿದ್ದರು ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಲಕ್ಷಾಂತರ ಮೌಲ್ಯದ ಬಟ್ಟೆಯನ್ನು ಯಾವುದೇ ದಾಖಲಾತಿಗಳಿಲ್ಲದೆ ಸಾಗಿಸುತ್ತಿದ್ದ ಹಿನ್ನೆಲೆ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿರುವುದು ಎಂದು ಪರಿಗಣಿಸಿ ದೂರು ದಾಖಲಿಸಿ ಮೂರು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.