Advertisement

Nejaru Incident; ನಮ್ಮ ಕುಟುಂಬದಲ್ಲಿ ಕಲಹವಿರಲಿಲ್ಲ, ವಿವಾದ ಮಾಡಬೇಡಿ: ನೂರ್ ಮೊಹಮ್ಮದ್

02:30 PM Nov 14, 2023 | Team Udayavani |

ಉಡುಪಿ: ನಮ್ಮಲ್ಲಿ ಯಾವುದೇ ಕೌಟುಂಬಿಕ ಕಲಹ ಇರಲಿಲ್ಲ. ಈ ಬಗ್ಗೆ ಯಾವುದೇ ವಿವಾದಗಳು ಬೇಡ. ನನ್ನ ಕುಟುಂಬಕ್ಕೆ ಭಯವಿತ್ತು ಎನ್ನುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ಪಕ್ಕದ ಮನೆಯವರಿಗೂ ನಿಲ್ಲಲು ಭಯವಾಗುತ್ತಿದೆ. ನನ್ನ ಮಗನನ್ನು ಒಬ್ಬನೇ ಬಿಡಲು ಭಯವಾಗುತ್ತಿದೆ. ನಮ್ಮ ಹಿಂದೆ ಯಾರಿದ್ದಾರೆ ನನಗೆ ಗೊತ್ತಾಗುತ್ತಿಲ್ಲ ಎಂದು ಉಡುಪಿಯ ನೇಜಾರಿನಲ್ಲಿ ಕಳೆದ ರವಿವಾರ ನಡೆದ ಕೊಲೆಯಲ್ಲಿ ಕುಟುಂಬವನ್ನು ಕಳೆದುಕೊಂಡ ನೂರ್ ಮೊಹಮ್ಮದ್ ಹೇಳಿದರು.

Advertisement

ಮಂಗಳವಾರ ಮನೆಗೆ ಭೇಟಿ ನೀಡಿದ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರೊಂದಿಗೆ ಮಾತುಕತೆ ನಡೆಸಿ ಬಳಿಕ ನೂರ್ ಮೊಹಮ್ಮದ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“15 ವರ್ಷ ನನ್ನ ಕುಟುಂಬ ರಿಯಾದ್ ನಲ್ಲಿ ಇತ್ತು. ರಂಜಾನ್ ಸಂದರ್ಭದಲ್ಲಿ ಉಮ್ರಾ ಮಾಡಿ ಬಂದಿದ್ದೆವು. ಮುಂದಿನ 15 ದಿನದಲ್ಲಿ ಮತ್ತೆ ರಿಯಾದಿಗೆ ಬರಲು ಸಿದ್ದತೆ ನಡೆಸಿದ್ದರು. ನಾನು ತುಂಬಾ ತುರ್ತಾಗಿ ಬಂದಿದ್ದೇನೆ. ಕೊಲೆಯಾದ ದಿನ ನಾನು ಮನೆಗೆ ಕರೆ ಮಾಡಿದೆ. ನಂತರ ಈ ದುರ್ಘಟನೆ ಬಗ್ಗೆ ತಿಳಿಯಿತು. ಅಲ್ಲಿ ಮ್ಯಾನೇಜರ್ ನ ನೆರವು ಪಡೆದು ಬಂದಿದ್ದೇನೆ. ನನಗೆ ಇಬ್ಬರನ್ನು ಭದ್ರತೆಗಾಗಿ ಕೊಟ್ಟು ಕಳುಹಿಸಿದ್ದರು” ಎಂದರು.

ನನ್ನ ಚಿಕ್ಕ ಮಗಳು ಏರ್ ಇಂಡಿಯಾದಲ್ಲಿ ಸಿಬ್ಬಂದಿಯಾಗಿದ್ದಾಳೆ. 11 ಗಂಟೆಗೆ ಆಕೆ ವಿಮಾನ ಹಿಡಿಯಬೇಕಾಗಿತ್ತು. ದೊಡ್ಡ ಮಗಳು ಪಿಜಿ ಮಾಡುತ್ತಿದ್ದಳು. ನನ್ನ ಮಗನಿಗೆ ಮದುವೆ ಮಾಡಿ ಈ ಮನೆಯನ್ನು ಬಿಟ್ಟುಕೊಡಬೇಕು ಎಂದಿದ್ದೆ. ಮಗಳಿಗೂ ಮದುವೆ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದೆ. ಆದಷ್ಟು ಬೇಗ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಡಿ ಎಂದು ಸರಕಾರದ ಜೊತೆ ಕಳಕಳಿಯಿಂದ ವಿನಂತಿ ಮಾಡುತ್ತೇನೆ. ಈ ಕೃತ್ಯ ಮಾಡಿದ ಅಪರಾಧಿಯನ್ನು ಕೂಡಲೇ ಹಿಡಿಯಬೇಕು. ಈ ಪರಿಸರದ ಜನರು ನಂತರ ನೆಮ್ಮದಿಯಿಂದ ಇರಬಹುದು ಎಂದು ನೂರ್ ಮೊಹಮ್ಮದ್ ಹೇಳಿದರು.

ಇದನ್ನೂ ಓದಿ:Atlee Kumar: ಶಾರುಖ್ – ವಿಜಯ್‌‌ ಜೊತೆಯೇ ನನ್ನ ಮುಂದಿನ ಸಿನಿಮಾ ಎಂದ ಅಟ್ಲಿ

Advertisement

ಹಣಕಾಸಿನ ಸಮಸ್ಯೆ ವಿಚಾರದ ಬಗ್ಗೆ ನಾನು ಸಾರ್ವಜನಿಕವಾಗಿ ಏನು ಹೇಳಲು ಸಾಧ್ಯವಿಲ್ಲ. ನನಗೆ ಏನಾದರೂ ನಷ್ಟವಾಗಿದ್ದರೆ ಅದು ನನ್ನ ನಷ್ಟ. ಈ ಬಗ್ಗೆ ಜನರಿಗೆ ಹೇಳುವುದಿಲ್ಲ. ಎಲ್ಲ ವಿಚಾರಗಳನ್ನು ತನಿಖಾ ಅಧಿಕಾರಿಗೆ ಹೇಳಿದ್ದೇನೆ ಎಂದರು.

ತಾಯಿ ಆರೋಗ್ಯ ಸ್ಥಿರವಾಗಿದೆ: ನನ್ನ ತಾಯಿಗೆ ಏನು ಕೇಳಿದರೂ ಹೇಳುವ ಸ್ಥಿತಿಯಲ್ಲಿಲ್ಲ. ಆಕೆಗೆ ವಯಸ್ಸಾಗಿದೆ. ನಾನು ಅವರನ್ನು ಸ್ವಂತ ಮನೆಗೆ ಕಳುಹಿಸಿಕೊಟ್ಟಿದ್ದೇನೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದರು.

ಫೋನ್ ನಲ್ಲಿ ಮಾಹಿತಿ ಸಿಕ್ಕಿದೆ:  ಪೊಲೀಸರ ತನಿಖೆಗೆ ನಾನು ಸಂಪೂರ್ಣ ಸಹಕಾರ ಕೊಡುತ್ತೇನೆ. ತನಿಖಾಧಿಕಾರಿಗಳು ನಮಗೆ ಸಂಪೂರ್ಣ ಭರವಸೆ ಕೊಟ್ಟಿದ್ದಾರೆ. ಕುಟುಂಬದ ಬಳಿ ಇರುವ ಎಲ್ಲ ಮಾಹಿತಿಗಳನ್ನು ಹಂಚಿಕೊಂಡಿದ್ದೇವೆ. ನಾಲ್ಕು ಫೋನ್ ಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ನನ್ನ ಮತ್ತು ಮಗನ ಫೋನನ್ನು ಪೊಲೀಸರು ತಪಾಸಣೆ ಮಾಡಿ ವಾಪಸ್ ಕೊಟ್ಟಿದ್ದಾರೆ. ಫೋನ್ ಗಳಲ್ಲಿ ಕೆಲವು ಮಾಹಿತಿಗಳು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ನೂರ್ ಮೊಹಮ್ಮದ್ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next