Advertisement

ಕಳಪೆ ಆಹಾರ ಆರೋಪ ತನಿಖೆಯಾಗಲಿ: ಸಿಪಿಐ ಕಾರ್ಯಕರ್ತರ ಆಗ್ರಹ

12:16 PM Jan 14, 2017 | Team Udayavani |

ದಾವಣಗೆರೆ: ಗಡಿ ಭದ್ರತಾ ಪಡೆ ಯೋಧರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಕೆ, ಸಂಸದ ಅನಂತ್‌ಕುಮಾರ್‌ ಹೆಗಡೆ ವಿರುದ್ಧ ಕ್ರಮ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಸಿಪಿಐ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. 

Advertisement

ಗಡಿ ಭದ್ರತಾ ಪಡೆ ಯೋಧರಿಗೆ ಅಧಿಕಾರಿಗಳು ಕಳಪೆ ಗುಣಮಟ್ಟದ ಆಹಾರ ಪೂರೈಕೆ ಬಗ್ಗೆ ಯೋಧ ತೇಜ್‌ ಬಹದ್ದೂರ್‌ ಯಾದವ್‌ ಮಾಡಿರುವ ಆರೋಪವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಆ ಸಂಬಂಧ ಕೂಲಂಕುಷ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಮ್ಮ ತಾಯಿಗೆ ಬೇಗ ಚಿಕಿತ್ಸೆ ಕೊಡಲಿಲ್ಲ ಎಂಬ ಕಾರಣಕ್ಕೆ ಶಿರಸಿಯ ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಸಂಸದ ಅನಂತಕುಮಾರ್‌ ಹೆಗಡೆ ವಿರುದ್ಧ ಸರ್ಕಾರ ಕೂಡಲೇ ಕಠಿಣ ಕ್ರಮ ತೆಗೆದು ಕೊಳ್ಳಬೇಕು. ಎಲ್ಲಾ ವೈದ್ಯ ಸಮುದಾಯಕ್ಕೆ ಸೂಕ್ತ ರಕ್ಷಣೆ, ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. 

ರಾಜ್ಯ ಸರ್ಕಾರ ಆಯ್ದ ಕುಟುಂಬಗಳಿಗೆ ಪಡಿತರದ ಬದಲಿಗೆ ತಿಂಗಳಿಗೆ 800 ರೂಪಾಯಿ ನಗದು ನೀಡುವ ಯೋಜನೆ ಜಾರಿಗೆ ಮುಂದಾಗಿರುವುದನ್ನು ನೋಡಿದರೆ ಮುಂದೊಮ್ಮೆ ಇಡೀ ಯೋಜನೆಯನ್ನೇ ನಿಲ್ಲಿಸುವ ಹುನ್ನಾರ ಹೊಂದಿದೆ. ಪಡಿತರ ಬದಲಿಗೆ ನಗದು ನೀಡುವಂಥಹ ಪದ್ಧತಿ ಕೈ ಬಿಡಬೇಕು.

ಕುಟಂಬಕ್ಕೆ ಅಗತ್ಯವಾದ ಪಡಿತರ ವಿತರಿಸುವಂತಾಗಬೇಕು ಎಂದು ಒತ್ತಾಯಿಸಿದರು. ರಾಣೆಬೆನ್ನೂರಿನ ಕೆಎಸ್ಸಾರ್ಟಿಸಿ ಘಟಕದ ಕಾವಲುಗಾರ ಲಿಂಗರಾಜ್‌ ಎಂಬುವರನ್ನು ಕಟ್ಟಿ ಹಾಕಿ, ಬೆಂಕಿ ಹಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮೃತನ ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗದ ಜೊತೆಗೆ 15 ಲಕ್ಷ ಪರಿಹಾರ ನೀಡಬೇಕು ಎಂದರು. 

Advertisement

ಕೇಂದ್ರ ಸರ್ಕಾರ ನ. 8 ರಂದು ನೋಟು ಅಮಾನ್ಯದ ನಂತರ ತಮ್ಮ ಹಣ ಬದಲಾವಣೆ, ಪಡೆಯುವುದಕ್ಕೆ ಸರತಿ ಸಾಲಲ್ಲಿ ನಿಂತಹರವಲ್ಲಿ ಕೆಲವರು ಮೃತಪಟ್ಟರು. ಬ್ಯಾಂಕ್‌ ಅಧಿಕಾರಿಗಳು ಸಹ ಸಾವನ್ನಪ್ಪುವಂತಾಯಿತು. ಆ ಎಲ್ಲಾ ಕುಟುಂಬಕ್ಕೆ 15 ಲಕ್ಷ ಪರಿಹಾರ ಕೊಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ, ನಗರಪಾಲಿಕೆ ಸದಸ್ಯ ಆವರಗೆರೆ ಎಚ್‌.ಜಿ. ಉಮೇಶ್‌, ಎಚ್‌. ಆನಂದರಾಜ್‌, ಆವರಗೆರೆ ಚಂದ್ರು, ಆವರಗೆರೆ ವಾಸು, ಐರಣಿ ಚಂದ್ರು, ಎನ್‌.ಟಿ. ಬಸವರಾಜ್‌, ಹನುಮಂತಪ್ಪ, ವಿಮಲಾಕ್ಷಿ, ಜಯಮ್ಮ, ಅನಸೂಯ, ಅಂಬುಜಾ, ಸಿದ್ದಮ್ಮ, ಸಾವಿತ್ರ, ಭಾಗ್ಯಲಕ್ಷ್ಮಿ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next