ತಿ.ನರಸೀಪುರ: ನಮಗೆ ಸಮಾಜ ಏನು ಕೊಡುಗೆ ನೀಡಿದೆ ಎಂಬುದಕ್ಕಿಂತ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬ ಬಗ್ಗೆ ಪುನಾರಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಪ್ರೇಮಕುಮಾರಿ ಹೇಳಿದರು.
ಪುರಸಭೆ ವತಿಯಿಂದ ಪಟ್ಟಣದ ಸಿಡಿಎಸ್ ಭವನದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಮಾಜ ನಮಗೆ ಅರ್ಥಿಕ, ಶೈಕ್ಷಣಿಕ ಸೇರಿದಂತೆ ಹಲವು ರೀತಿಯ ಅನೂಕೂಲ ವ್ಯವಸ್ಥೆ ಮಾಡಿಕೊಟ್ಟಿದೆ. ಅದೇ ರೀತಿ ನಾವು ಸಮಾಜಕ್ಕೆ ಕಿಂಚಿತ್ತಾದರೂ ಸೌಲಭ್ಯ ನೀಡಿ ಋಣ ಸಂದಾಯ ಮಾಡಿ ಜೀವನವನ್ನು ಸಾರ್ಥಕತೆಪಡಿಸಿಕೊಳ್ಳಬೇಕೆಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸಮಾನರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕುಟುಂಬದಲ್ಲಿ ಮಹಿಳೆ ಅನಾರೋಗ್ಯಕ್ಕೆ ತುತ್ತಾದರೇ ಕುಟುಂಬದ ಎಲ್ಲಾ ಸದಸ್ಯರಿಗೂ ತೊಂದರೆಯಾಗುತ್ತದೆ. ಆದರೆ ಇದು ಪುರುಷರಿಗೆ ಅನ್ವಯಿಸುವುದಿಲ್ಲ. ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕೆಂದರು. ಮಹಿಳೆಯರು ಶಿಸ್ತುಬದ್ಧ ಜೀವನ ನಡೆಸುವ ಜೊತೆಗೆ ಕುಟುಂಬದ ನಿರ್ವಹಣೆಯನ್ನು ಸಂಪೂರ್ಣವಾಗಿ ನಿಭಾಯಿಸಬೇಕು.
ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಮಹಿಳೆಗೆ ಇನ್ನೂ ಸ್ವಾತಂತ್ರ ಸಿಕ್ಕಿಲ್ಲ. ಇನ್ನೂ ಕೂಡ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಈ ಶೋಷಣೆ ನಿಂತರೆ ಮಾತ್ರ ನಮ್ಮ ಸಮಾಜ ಉನ್ನತ ಮಟ್ಟ ತಲುಪಲು ಸಾಧ್ಯ ಎಂದರು. ಸಾರ್ವಜನಿಕ ಆಸ್ಪತ್ರೆ ಮಹಿಳಾ ವೈದ್ಯಾಧಿಕಾರಿ ಡಾ.ಭಾರತಿ ಆರೋಗ್ಯದ ಕುರಿತು ಮಹಿಳೆಯರಿಗೆ ಸಲಹೆ ನೀಡಿದರು. ಪುರಸಭೆ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷೆ ರತ್ನಮ್ಮ ಸದಸ್ಯರಾದ ಶಶಿಕಲಾ, ಮೀನಾಕ್ಷಿ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಯೋಜನಾಧಿಕಾರಿ ಕೆಂಪರಾಜು, ಆರೋಗ್ಯಾಧಿಕಾರಿ ಚೇತನ್‌ಕುಮಾರ್, ಆರ್‌ಒ ರಾಣಿ ಇತರರು ಇದ್ದರು.