ಕೊಹಿಮಾ/ಅಗರ್ತಲಾ: ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಮಂಗಳವಾರ ಹೊಸ ಸರಕಾರಗಳು ಅಸ್ತಿತ್ವಕ್ಕೆ ಬಂದಿವೆ. ಎರಡೂ ರಾಜ್ಯಗಳಲ್ಲಿನ ಸರಕಾರಗಳ ವಿಶೇಷತೆ ಎಂದರೆ ತಲಾ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಿಸಿಕೊಳ್ಳಲಾಗಿದೆ. ಬಣ್ಣಗಳ ಹಬ್ಬ ಹೋಳಿಯ ನಡುವೆ, ಬಿಜೆಪಿ ಮತ್ತು ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದಿದೆ.
ನಾಗಾಲ್ಯಾಂಡ್ ರಾಜಧಾನಿ ಕೊಹಿಮಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನ್ಯಾಶನಲ್ ಡೆಮಾಕ್ರಾಟಿಕ್ ಪಾರ್ಟಿ (ಎನ್‌ಡಿಪಿಪಿ)ಯ ಹಿರಿಯ ನಾಯಕ ನೈಫಿಯೂ ರಿಯೋ ಅವರು ದಾಖಲೆಯ ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎನ್‌ಡಿಪಿಪಿಯ ಟಿ.ಆರ್.ಝೆಲಿಯಾಂಗ್ ಮತ್ತು ಬಿಜೆಪಿ ಶಾಸಕ ಯಾಂತುಂಗೋ ಪಟ್ಟಾನ್ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
ನಾಗಾಲ್ಯಾಂಡ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶಾಸಕಿಯರಾಗಿ ಆಯ್ಕೆಯಾಗಿರುವ ಇಬ್ಬರ ಪೈಕಿ ಸಲೌಟುಯೋ ನುವೋ ಕ್ರೂಸ್ ಸಚಿವೆಯಾಗಿದ್ದಾರೆ. ಅವರೇ ಈ ಸಂಪುಟದಲ್ಲಿ ಹೊಸ ಮುಖ. ಒಟ್ಟಾರೆಯಾಗಿ ಹೇಳುವುದಿದ್ದರೆ ಎನ್‌ಡಿಪಿಪಿಪಿಯ ಏಳು, ಬಿಜೆಪಿಯ ಐವರು ಸಚಿವರಾಗಿದ್ದಾರೆ.
2ನೇ ಬಾರಿಗೆ ಕೊನ್ರಾಡ್: ಮೇಘಾಲಯದಲ್ಲಿ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ)ಯ ನಾಯಕ ಕೊನ್ರಾಡ್ ಸಂಗ್ಮಾ ನೇತೃತ್ವದ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಸಗ್ಮಾ ಅವರ ಪಕ್ಷದ ಶಾಸಕರಾಗಿರುವ ಪ್ರಸ್ಟೋನ್ ಸಾಂಗ್, ಸ್ನಿಯಾವ್‌ಭಲಾಂಗ್ ಧರ್ ಡಿಸಿಎಂಗಳಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಬಿಜೆಪಿಯ ಅಲೆಕ್ಸಾಂಡರ್ ಲಾಲೂ ಹೆಕ್ ಸಚಿವರಾಗಿದ್ದಾರೆ. ಯುಡಿಪಿ ಮತ್ತು ಎಚ್‌ಎಸ್‌ಡಿಪಿಯ ಒಬ್ಬೊಬ್ಬ ಶಾಸಕರು ಸಚಿವರು ಪ್ರಮಾಣ ಸ್ವೀಕರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸಹಿತ ಪ್ರಮುಖರು ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಇಂದು ಸಹಾ ಪ್ರಮಾಣ ಸ್ವೀಕಾರ
ತ್ರಿಪುರಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಡಾ| ಮಾಣಿಕ್ ಸಹಾ ನೇತೃತ್ವದ Óರಕಾರ ಬುಧವಾರ ಅಸ್ತಿತ್ವಕ್ಕೆ ಬರಲಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸಹಿತ ಪ್ರಮುಖರು ಭಾಗವಹಿಸಲಿದ್ದಾರೆ.