Advertisement

ನೆರೆ ಸಂತ್ರಸ್ತರ ಸ್ಥಿತಿ ಮಳೆಗಾಲದಲ್ಲಿ ಮತ್ತೆ ಅತಂತ್ರ

01:42 PM Jun 16, 2020 | mahesh |

ಶಿವಮೊಗ್ಗ: ಕಳೆದ ವರ್ಷ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ತುಂಗೆ ಉಕ್ಕಿ ಹರಿದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ನೂರಾರು ಮನೆಗಳು ನೆಲಕ್ಕುರುಳಿದವು. ಈ ನೂರಾರು ಕುಟುಂಬಗಳು ಸರಕಾರ ಕೊಡುವ 5 ಲಕ್ಷ ರೂ. ಸಹಾಯಧನದ ನಿರೀಕ್ಷೆ ಮೇಲೆ ಎಲ್ಲರೂ ತಳಪಾಯ ಹಾಕಿದ್ದವು. ಸರಕಾರ ಖಾತೆ ಇದ್ದವರಿಗಷ್ಟೇ 5 ಲಕ್ಷ ಕೊಡಲು ಮುಂದಾಗಿದ್ದು, ಖಾತೆ ಇಲ್ಲದವರು, ಸ್ಲಂ ವಾಸಿಗಳು ಅತಂತ್ರರಾಗಿದ್ದಾರೆ. ಗುಡಿಸಲು, ಸಣ್ಣ ಗೂಡು ಮನೆಗಳಲ್ಲಿ ಕಾಲ ಕಳೆಯುತ್ತಿರುವ ಇವರು ಮತ್ತೂಂದು ಮಳೆಗಾಲ ಎದುರಿಸಲು ಸಜ್ಜಾಗಿದ್ದಾರೆ.

Advertisement

ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಕೊಡಲಾಗುವುದು ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಭರವಸೆ ನೀಡಿದ್ದರು. ಆದರೆ ಈ ಭರವಸೆ ಈಗ ಹುಸಿಯಾಗಿದೆ. ಸರಕಾರ ಖಾತೆ ಇದ್ದವರಿಗೆ ಮಾತ್ರ ಹಣ ಹಾಕುತಿದ್ದು, ಉಳಿದ ಕಡುಬಡವರು ಅಸಹಾಯಕತೆಯಿಂದ ದಿನ ದೂಡುತ್ತಿದ್ದಾರೆ. “ಸರಕಾರ ಕೊಡುವುದಿಲ್ಲ ಎಂದಿದ್ದರೆ ನಮ್ಮ ಶಕ್ತಿ ಇದ್ದಷ್ಟು ಮನೆ ಕಟ್ಟಿಕೊಳ್ಳುತ್ತಿದ್ದೆವು. ಈಗ ಹಣವೂ ಇಲ್ಲ, ಮನೆಯೂ ಇಲ್ಲ’ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ನಿರಾಶ್ರಿತರು. ನೆರೆ ಹಾವಳಿಗೆ ಸಿಕ್ಕ ಸಂತ್ರಸ್ತರನ್ನು ಜಿಲ್ಲಾಡಳಿತ 14 ನೆರೆ ಪರಿಹಾರ ಕೇಂದ್ರಗಳನ್ನು ತೆರೆದಿತ್ತು. ತುಂಗಾ ನದಿ ಪ್ರವಾಹದಿಂದ ಸಾವಿರಾರು ಜನರು ನಿದ್ದೆ ಇಲ್ಲದೆ ಎರಡು ದಿನ ರಾತ್ರಿ ಕಳೆದಿದ್ದರು.

ಮನೆಯಲ್ಲಿದ್ದ ಫ್ರಿಜ್‌, ಟಿವಿ, ವಾಶಿಂಗ್‌ ಮಿಷನ್‌, ಕಾರು, ಬೈಕ್‌ ಸೇರಿ ಬೆಲೆ ಬಾಳುವ ವಸ್ತುಗಳು ಕೆಟ್ಟು ನಿಂತಿದ್ದರೆ, ಅಕ್ಕಿ, ಬೇಳೆ, ತರಕಾರಿ, ಹಾಸಿಗೆ, ದಿಂಬು ಸೇರಿ ದಿನ ಬಳಕೆ ವಸ್ತುಗಳು ನೀರು ಪಾಲಾಗಿದ್ದವು. ಇದು ನಗರದಲ್ಲಿ 20 ವರ್ಷದ ಹಿಂದಿನ ನೆರೆ ಹಾವಳಿ ಘಟನೆಯನ್ನು ನೆನಪು ಮಾಡಿತ್ತು. ಸೀಗೆಹಟ್ಟಿ, ಕುಂಬಾರಗುಂಡಿ, ಸಿದ್ದಯ್ಯ ರಸ್ತೆ, ಕೋಟೆ ರಸ್ತೆ, ವಿದ್ಯಾನಗರ, ಹರಕೆರೆ, ಇಮಾಮ್‌ ಬಡಾವಣೆ, ಹೊಸಮನೆ, ಕುಂಬಾರ್‌ ಗುಂಡಿ, ವೆಂಕಟೇಶ್‌ ನಗರ, ಬಾಪೂಜಿ ನಗರ, ಲಷ್ಕರ್‌ ಮೊಹಲಾ, ಟ್ಯಾಂಕ್‌ ಮೊಹಲಾ, ಶಾಂತಮ್ಮ ಲೇಔಟ್‌, ಕೆ.ಆರ್‌. ಪುರಂ, ಎನ್‌.ಟಿ. ರಸ್ತೆ, ಶೇಷಾದ್ರಿಪುರಂ, ಆಶ್ವತ್ಥ್ನಗರ, ಕೃಷಿನಗರ, ಡಾಲರ್ಸ್‌ ಕಾಲನಿ, ಎಲ್‌ಬಿಎಸ್‌ ನಗರ ಸೇರಿ ಪಾಲಿಕೆ ವ್ಯಾಪ್ತಿಯ 30ರಲ್ಲಿ ಬಹುತೇಕ ಬಡಾವಣೆಗಳು ನೆರೆ ಹಾವಳಿಯಿಂದ ತತ್ತರಿಸಿದ್ದವು.

ಮಹಾನಗರ ಪಾಲಿಕೆ ವ್ಯಾಪ್ತಿಯ 30 ಬಡಾವಣೆಗಳಲ್ಲಿ ನೆರೆಯಿಂದ ಬರೋಬ್ಬರಿ 180ರಿಂದ 200 ಕೋಟಿ ರೂ. ಹಾನಿ ಸಂಭವಿಸಿತ್ತು. ಸಂಪೂರ್ಣ ನೆಲಕಚ್ಚಿದ್ದ 350ಕ್ಕೂ ಅಧಿಕ ಮನೆಗಳು 5 ಲಕ್ಷ ರೂ., ಭಾಗಶಃ ಹಾನಿಯಾಗಿದ್ದ 900ಕ್ಕೂ ಅಧಿಕ ಮನೆಗಳಿಗೆ ತಲಾ 25 ಸಾವಿರ ರೂ. ಹಾಗೂ  ನೀರು ನುಗ್ಗಿದ್ದ 5 ಸಾವಿರ ಅಧಿಕ ಮನೆಗಳಿಗೆ ತಲಾ 10 ಸಾವಿರ ರೂ. ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.

ಅದರಂತೆ ಪಾಲಿಕೆಯಿಂದ ಇದುವರೆಗೆ ನೀರು ನುಗ್ಗಿದ 588 ಮನೆಗಳಿಗೆ ತಲಾ 10 ಸಾವಿರ ರೂ., ಭಾಗಶಃ ಹಾನಿಗೊಳಗಾದ 767 ಮನೆಗಳಿಗೆ ತಲಾ 25 ಸಾವಿರ ರೂ. ಹಾಗೂ ಸಂಪೂರ್ಣ ಕುಸಿದ ಮನೆಗಳಿಗೆ 35 ಸಾವಿರದಿಂದ 3 ಲಕ್ಷ ರೂ.ವರೆಗೂ ವಿತರಿಸಿದೆ. ಇನ್ನೂ 50ಕ್ಕೂ ಅಧಿಕ ಮನೆಗಳಿಗೆ ತಲಾ 25 ಸಾವಿರ ರೂ., ಸಾವಿರಾರು ಮನೆಗಳಿಗೆ ತಲಾ 10 ಸಾವಿರ ರೂ. ಹಾಗೂ ನೂರಾರು ಮನೆಗಳಿಗೆ 5 ಲಕ್ಷ ರೂ. ಪರಿಹಾರ ಸಿಕ್ಕಿಲ್ಲ. ಹಾಗಾಗಿ ಫಲಾನುಭವಿಗಳು ನಿತ್ಯವೂ ಪಾಲಿಕೆಗೆ ಅಲೆದಾಡುವುದು ತಪ್ಪುತ್ತಿಲ್ಲ.

Advertisement


ಪರಿಹಾರಕ್ಕೆ ಕಾಂಗ್ರೆಸ್‌ ಫೈಟ್‌

ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಲ್ಲಿ ಬಿಜೆಪಿ ಮೀನಾಮೇಷ ಎಣಿಸುತ್ತಿದೆ ಎಂದು ಪಾಲಿಕೆ ಸಭಾಂಗಣದಲ್ಲಿ ಮೂರು ಬಾರಿ ವಾಗ್ಯುದ್ಧ ನಡೆಸಿದೆ. ಮನೆ ಕಳೆದುಕೊಂಡ ಎಲ್ಲರಿಗೂ 5 ಲಕ್ಷ ರೂ. ಕೊಡಬೇಕೆಂದು ಒತ್ತಾಯಿಸಿದೆ. ಲಾಕ್‌ಡೌನ್‌ಗೂ ಮುನ್ನ ಡಿಸಿಎಂ ಅಶ್ವತ್ಥ್ ನಾರಾಯಣ ಹಾಗೂ ಸಿಎಂಗೂ ಎಲ್ಲ ಕೆಟಗರಿಗೂ 5 ಲಕ್ಷ ರೂ. ಕೊಡಲು ಮನವಿ ಮಾಡಲಾಗಿತ್ತು. ಜಿಲ್ಲಾಡಳಿತದ ಮುಂದೆ 300 ಮಂದಿ ಪ್ರತಿಭಟನೆ ನಡೆಸಿದ್ದರು. ಈಚೆಗೆ ಕಾಂಗ್ರೆಸ್‌ ಹೋರಾಟಕ್ಕೆ
ಮಣಿದ ಬಿಜೆಪಿ ಮುಖಂಡರು ಸಿಎಂ ಬಳಿ ನಿಯೋಗ ಕರೆದುಕೊಂಡು ಹೋಗುವ ಭರವಸೆ ನೀಡಿದ್ದರು. 20 ದಿನ ಕಳೆದರೂ ಯಾವುದೇ ಬೆಳವಣಿಗೆ ನಡೆದಿಲ್ಲ.

ಎಷ್ಟುಹಾನಿ?
ನೆಲಸಮವಾಗಿದ್ದ ಮನೆಗಳ ಸಂಖ್ಯೆ 346
ಭಾಗಶಃ ಕುಸಿದ ಮನೆಗಳ ಸಂಖ್ಯೆ 900
ತುಂಗಾ ನದಿ ನೀರು ನುಗ್ಗಿದ ಮನೆಗಳು 5,000
ಮುರಿದು ಬಿದ್ದಿದ್ದ ವಿದ್ಯುತ್‌ ಕಂಬಗಳು 42
ಹಾಳಾಗಿದ್ದ ರಸ್ತೆ ಮತ್ತು ಚರಂಡಿ 124.8 ಕೋಟಿ ರೂ.
ಜಾನುವಾರು ಸಾವು 17

ಪಾಲಿಕೆಯಿಂದ ವಿತರಣೆ ಆದ ಹಣ
588 ಫಲಾನುವಿಗಳಿಗೆ ತಲಾ 10 ಸಾವಿರ ರೂ.
767 ಫಲಾನುಭವಿಗಳಿಗೆ ತಲಾ 25 ಸಾವಿರ ರೂ.

ಒಂದು ಸಹಾಯಧನ ಕೊಡಲು ಎರಡು ಮಳೆಗಾಲ ಬೇಕೇ? ಪರಿಹಾರ ಕೊಡಿ ಎಂದು ವಿಪಕ್ಷದವರು ಧ್ವನಿ ಎತ್ತಬೇಕಾ? ಜನಪರವಾಗಿ ಕೆಲಸ ಮಾಡಿ ಅಭ್ಯಾಸ ಇಲ್ಲವೇ?. ಸಿಎಂ ಬಳಿ ನಿಯೋಗ ಕರೆದುಕೊಂಡು ಹೋಗುವುದಾಗಿ 15 ದಿನ ಆಯ್ತು. ಯಾವುದೇ ಉತ್ತರ ಬಂದಿಲ್ಲ.
ಎಚ್‌.ಸಿ. ಯೋಗೀಶ್‌, ಪಾಲಿಕೆ ವಿಪಕ್ಷ ನಾಯಕ

ನಮ್ಮ ವಾರ್ಡ್‌ನಲ್ಲಿ 130 ಮನೆ ಬಿದ್ದಿವೆ. ಮೊದಲನೇ ಹಂತದ 1 ಲಕ್ಷ ರೂ. ಬಂದಿದ್ದು ಬಿಟ್ಟರೆ ಬೇರ್ಯಾವುದೇ ಹಣ ಬಂದಿಲ್ಲ. 130ರಲ್ಲಿ 30 ಮನೆ ಮಾತ್ರ ದಾಖಲೆ ಇರುವಂತವು. ಇವುಗಳಿಗೆ ಮುಂದೆ ಹಣ ಬರಬಹುದು. ಉಳಿದ 100 ಮನೆಗಳಿಗೆ ದಾಖಲೆ ಇಲ್ಲ. ಎಲ್ಲರೂ ಪಾಯ ಹಾಕಿದ್ದಾರೆ. ಮತ್ತೆ ಪ್ರವಾಹ ಬಂದರೇ ದೇವರೇ ಗತಿ.
ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next