Advertisement

ನೆಹರೂನಗರಕ್ಕೆ ಬೇಕು ಜವಾಹರ್‌ ಲಾಲರ ಪುತ್ಥಳಿ

10:45 AM Nov 15, 2017 | Team Udayavani |

ನಗರ: ಮಕ್ಕಳ ಪ್ರೀತಿಯ ಚಾಚಾ ಎಂದೇ ಜನಜನಿತರಾದ ಜವಾಹರ್‌ಲಾಲ್‌ ನೆಹರೂ ಅವರ ಪುತ್ಥಳಿಯನ್ನು ನೆಹರೂನಗರದಲ್ಲಿ ಅಳವಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಸಮೀಪದಲ್ಲೇ ಕಾಲೇಜು ಇರುವುದರಿಂದ ಮಕ್ಕಳಿಗೆ ಇವರ ಸಂದೇಶ ಸಾರಬೇಕು ಎನ್ನುವುದು ಉದ್ದೇಶ.

Advertisement

ನವೆಂಬರ್‌ 14 ಜವಾಹರ್‌ ಲಾಲ್‌ ನೆಹರೂ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಪುತ್ತೂರು ಕಾಂಗ್ರೆಸ್‌ ಕಚೇರಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ಹೊತ್ತಿಗೆ ಪುತ್ತೂರು ನಗರಸಭೆ ನಾಮನಿರ್ದೇಶಿತ ಸದಸ್ಯ ಮಹೇಶ್‌ ಕಲ್ಲೇಗ, ಸಾರ್ವಜನಿಕರ ಪರವಾಗಿ ನೆಹರೂ ಅವರ ಪುತ್ಥಳಿ ನಿರ್ಮಿಸುವಂತೆ ಮನವಿ ನೀಡಿದ್ದಾರೆ.

ಶಾಸಕಿ ಶಕುಂತಳಾ ಶೆಟ್ಟಿ ಅಧಿವೇಶನದಲ್ಲಿ ಇರುವ ಕಾರಣ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಮೂಲಕ ಮನವಿ ನೀಡಲಾಗಿದೆ. ಪುತ್ತೂರು ಆಸುಪಾಸಿನಲ್ಲಿ ಎಲ್ಲಿಯೂ ಜವಾಹರ್‌ ಲಾಲ್‌ ನೆಹರೂ ಅವರ ಪುತ್ಥಳಿ ಇಲ್ಲ. ಮಾತ್ರವಲ್ಲ ಅವರ ಜೀವನದ ಸಂದೇಶ ಸಾರುವ ಕೆಲಸ ಎಲ್ಲಿಯೂ ನಡೆದಿಲ್ಲ. ಆದ್ದರಿಂದ ನೆಹರೂ ಅವರ ಪುತ್ಥಳಿ ನಿರ್ಮಿಸಿ, ಈ ಮೂಲಕ ಜನರಿಗೆ, ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ನೀಡಬೇಕು ಎನ್ನುವುದು ಹಲವು ಸಮಯಗಳ ಕನಸು. ಆದಷ್ಟು ಶೀಘ್ರ ಶಾಸಕಿ ಶಕುಂತಳಾ ಶೆಟ್ಟಿ ಅವರ ನೇತೃತ್ವದಲ್ಲೇ ಪುತ್ಥಳಿ ನಿರ್ಮಾಣ ಮಾಡುವಂತೆ ಒತ್ತಾಯಿಸಲಾಗಿದೆ.

ನೆಹರೂನಗರ ಜಂಕ್ಷನ್‌ನಲ್ಲೇ ನೆಹರೂ ಪುತ್ಥಳಿ ನಿರ್ಮಿಸಬೇಕು. ಇದಕ್ಕೇ ಪ್ರಥಮ ಆದ್ಯತೆ. ಒಂದು ವೇಳೆ ಸಾಧ್ಯ ಇಲ್ಲ ಎಂದಾದರೆ ಮಂಜಲ್ಪಡ್ಪು ಅಥವಾ ನೆಹರೂ ನಗರ ಆಸುಪಾಸಿನಲ್ಲಿ ಪುತ್ಥಳಿ ಸ್ಥಾಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹೀಗಿರಬೇಕು ಪುತ್ಥಳಿ
ಅರ್ಧ ಪುತ್ಥಳಿಯನ್ನು ಆಯಕಟ್ಟಿನ ಪ್ರದೇಶದಲ್ಲಿ ಸ್ಥಾಪಿಸಬೇಕು. ಇದರ ಕೆಳಗಡೆ ನೆಹರೂ ಅವರಿಗಿದ್ದ ಮಕ್ಕಳ ಬಗೆಗಿನ ಪ್ರೀತಿ, ಸ್ವಾತಂತ್ರ್ಯ ಹೋರಾಟ, ಜೀವನ ಶೈಲಿ, ಪ್ರಧಾನಿಯಾಗಿ ಮಹತ್ವದ ಕಾರ್ಯ ಮೊದಲಾದ ವಿಷಯಗಳನ್ನು ಅಮೃತಶಿಲೆಯಲ್ಲಿ ಕೆತ್ತಿ, ಅಳವಡಿಸಬೇಕು. ನೆಹರೂನಗರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಮಾತ್ರವಲ್ಲ, ನೆಹರೂ ಅವರಿಗೂ ಮಕ್ಕಳೆಂದರೆ ಪ್ರೀತಿ. ಆದ್ದರಿಂದ ನೆಹರೂನಗರದಲ್ಲಿ ಪುತ್ಥಳಿ ನಿರ್ಮಿಸುವುದು ಹೆಚ್ಚು ಸೂಕ್ತ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Advertisement

ನೆಹರೂ ಭೇಟಿ 
ಪುತ್ತೂರಿನ ನೆಹರೂನಗರಕ್ಕೆ ಜವಾಹರ್‌  ಲಾಲ್‌ ನೆಹರೂ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಪುತ್ಥಳಿ ನಿರ್ಮಾಣ ಮಾಡ ಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಪುತ್ತೂರು ವಿದ್ಯಾವರ್ಧಕ ಸಂಘದ ಶಾಲೆಯನ್ನು 1915ರಲ್ಲಿ ನೆಹರೂ ಉದ್ಘಾಟನೆ ಮಾಡಿದ್ದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅಜ್ಜ ಚಂದಯ್ಯ ಹೆಗ್ಗಡೆ ಅವರು ನೆಹರೂಗೆ ಆಪ್ತರಾಗಿದ್ದರು. ಈ ಸಮಾರಂಭದಲ್ಲಿ ಚಂದಯ್ಯ ಹೆಗ್ಗಡೆ ಕೂಡ ಉಪಸ್ಥಿತರಿದ್ದರು. ನೆಹರೂನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯ ಸ್ಮರಣಾರ್ಥವಾಗಿ ಚಂದಯ್ಯ ಹೆಗ್ಗಡೆ ಅವರು ನೆಹರೂನಗರ ಎಂದು ಹೆಸರಿಟ್ಟರು. ಈ ಹಿನ್ನೆಲೆಯಲ್ಲಿ ಪುತ್ಥಳಿ ನಿರ್ಮಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಇಲ್ಲಿಗೆ ನೆಹರೂ ಭೇಟಿ ನೀಡಿದ್ದರು
ಪುತ್ತೂರು ವಿದ್ಯಾವರ್ಧಕ ಸಂಘದ ಶಾಲೆಯನ್ನು 1915ರಲ್ಲಿ ನೆಹರೂ ಉದ್ಘಾಟಿಸಿದ್ದರು. ಈ ಹಿನ್ನೆಲೆಯಲ್ಲಿ ನೆಹರೂನಗರ ಎಂಬ ಹೆಸರು ಬಂದಿದೆ. ಮಕ್ಕಳೆಂದರೆ ನೆಹರೂ ಅವರಿಗೆ ತುಂಬಾ ಪ್ರೀತಿ. ಆದ್ದರಿಂದ ನೆಹರೂನಗರದಲ್ಲಿ ನೆಹರೂ ಅವರ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಶಾಸಕಿಗೆ ಮನವಿ ನೀಡಲಾಗಿದೆ.
ಮಹೇಶ್‌ ಕಲ್ಲೇಗ,
  ನಗರಸಭೆ ನಾಮನಿರ್ದೇಶಿತ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next