ಮುಂಬೈ: ಟೀಂ ಇಂಡಿಯಾಕ್ಕೆ ಎರಡು ವಿಶ್ವಕಪ್ ಗೆದ್ದ ನಾಯಕ, ಕೂಲ್ ಕ್ಯಾಪ್ಟನ್, ಲಕ್ಕಿ ಕ್ಯಾಪ್ಟನ್ ಎಂಬೆಲ್ಲಾ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಪ್ರವೇಶಿಸಿದ ಆರಂಭದಲ್ಲಿ ಟೀಂ ಮ್ಯಾನೇಜ್ ಮೆಂಟ್ ಗೆ ಅವರ ಮೇಲೆ ವಿಶ್ವಾಸವೇ ಇರಲಿಲ್ಲವಂತೆ !
ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು ಮಾಜಿ ವೇಗದ ಬೌಲರ್ ಆಶೀಶ್ ನೆಹ್ರಾ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದ ನೆಹ್ರಾ, ಧೋನಿ ತಂಡಕ್ಕೆ ಪದಾರ್ಪಣೆ ಮಾಡಿದ ಸಮಯದಲ್ಲೂ ತಂಡದಲ್ಲಿ ಆಡು್ತಿದ್ದರು. ಆಗ ಸೌರವ್ ಗಂಗೂಲಿ ತಂಡದ ಚುಕ್ಕಾಣಿ ಹಿಡಿದಿದ್ದರು.
ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡಿದ ನೆಹ್ರಾ, ಧೋನಿಯ ಮೊದಲ ಶತಕದ ನೆನಪು ಮಾಡಿಕೊಂಡರು.
ಧೋನಿ ತಂಡಕ್ಕೆ ಬಂದ ಮೊದು ಟೀಂ ಮ್ಯಾನೇಜ್ ಮೆಂಟ್ ಗೆ ವಿಶ್ವಾಸ ಮೂಡಿಸಿರಲಿಲ್ಲ. ಆದರೆ ವಿಶಾಖಪಟ್ಟಣದಲ್ಲಿ ಪಾಕಿಸ್ಥಾನ ವಿರುದ್ಧದ ಭರ್ಜರಿ ಶತಕದ ನಂತರ ಆತನ ಮೇಲೆ ಭರವಸೆ ಇಡಲಾಯಿತು. ಆಗ ತಂಡಕ್ಕೆ ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸಮನ್ ಸಿಕ್ಕಿದ ಹಾಗಾಗಿತ್ತು. ದ್ರಾವಿಡ್ ಮೇಲಿನ ಜವಾಬ್ದಾರಿ ಕಡಮೆಯಾಗಿತ್ತು ಎಂದು ನೆಹ್ರಾ ಹೇಳಿದರು.
ಆತ್ಮವಿಶ್ವಾಸವೇ ಧೋನಿಯ ಶಕ್ತಿ. ಅಂದಿನ ಶತಕದಿಂದ ಧೋನಿ ವಿಶ್ವಕ್ಕೆ ತಾನೇನೆಂದು ತೋರಿಸಿಕೊಟ್ಟ. ಆ ಸರಣಿಯ ಮುಂದಿನ ನಾಲ್ಕು ಪಂದ್ಯಗಳನ್ನು ನಾವು ಸೋತೆವು. ಆದರೆ ನಮಗೆ ಧೋನಿ ಸಿಕ್ಕಿದ ಎಂದು ನೆಹ್ರಾ 2005ರ ನೆನಪು ಮಾಡಿಕೊಂಡರು.
ಅಂದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಧೋನಿ 123 ಎಸೆತದಲ್ಲಿ 148 ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಆಶೀಶ್ ನೆಹ್ರಾ ಕೂಡಾ ನಾಲ್ಕು ವಿಕೆಟ್ ಕಬಳಿಸಿದ್ದರು. ಭಾರತ 58 ರನ್ ಗಳಿಂದ ಜಯ ಗಳಿಸಿತ್ತು.