ಬಳ್ಳಾರಿ/ಕೊಪ್ಪಳ/ಗದಗ/ದಾವಣೆಗೆರೆ: ಕೆಲ ದಿನಗಳ ಹಿಂದೆ ನಡೆದ ಹುಬ್ಬಳ್ಳಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ, ಜೆಡಿಎಸ್, ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಬಳ್ಳಾರಿ: ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಬಳ್ಳಾರಿ ನಗರದ ದುರ್ಗಮ್ಮ ದೇವಸ್ಥಾನದಿಂದ ಆರಂಭವಾಯಿತು. ಎಂಎಲ್ ಸಿ ಏಚರೆಡ್ಡಿ ಸತೀಶ್, ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಲಕ್ಷ್ಮಿಅರುಣಾ ನೇತೃತ್ವದಲ್ಲಿ ಆರಂಭವಾಗಿ ಡಿಸಿ ಕಚೇರಿಗೆ ಆಗಮಿಸಿತು.
ಪ್ರತಿಭಟನಾಕಾರರನ್ನು ಡಿಸಿ ಕಚೇರಿ ಒಳಗಡೆ ಬಿಡದಂತೆ ಪೊಲೀಸರು ತಡೆದ ಬಳಿಕ ಕೆಲವರು ಗೇಟ್ ತಳ್ಳಿ ಒಳಗಡೆ ಬಂದರು. ಹತ್ಯೆ ಮಾಡಿದವನ ವಿರುದ್ಧ, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಕೊಪ್ಪಳ: ಕೊಪ್ಪಳದಲ್ಲಿ ಬಿಜೆಪಿ- ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ ನಡೆಸಲಾಯಿತು. ಕೊಪ್ಪಳದ ಅಶೋಕ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಭಾಗಿಯಾಗಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಗದಗ: ಜಿಲ್ಲಾ ಬಿಜೆಪಿ, ಎಬಿವಿಪಿ, ಹಾಗೂ ವಿವಿಧ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ನಗರದ ಜನರಲ್ ಕಾರ್ಯಪ್ಪ ಸರ್ಕಲ್ (ಹಳೇ ಜಿಲ್ಲಾಧಿಕಾರಿ ಕಚೇರಿ ವೃತ್ತ)ದಲ್ಲಿ ಪ್ರತಿಭಟನೆ ನಡೆಸಿದರು.
ಹತ್ಯೆ ಮಾಡಿದ ಆರೋಪಿ ಫಯಾಜ್ ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಕೊಲೆ, ದರೋಡೆ, ಹಲ್ಲೆಗಳಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಣ್ಮುಚ್ಚಿ ಕುಳಿತಿದೆ. ಹತ್ಯೆಯ ಪ್ರಕರಣಗಳಲ್ಲಿ ವೈಯಕ್ತಿಕ ಕಾರಣ ಎಂಬ ಹೇಳಿಕೆ ನೀಡುವ ಮೂಲಕ ಹಲ್ಲೆಕೋರರಿಗೆ ಬಹಿರಂಗವಾಗಿ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಆರೋಪಿ ಫಯಾಜ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ದಾವಣಗೆರೆ: ಬಿಜೆಪಿ ಮಹಿಳಾ, ಯುವ ಮೋರ್ಚಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಘಟನೆ ವಿದ್ಯಾರ್ಥಿಗಳನ್ನು ಮಾತ್ರವಲ್ಲ ಜನಸಾಮಾನ್ಯರನ್ನೂ ಬೆಚ್ಚಿ ಬೀಳಿಸಿದೆ. ಸರ್ಕಾರ ಹತ್ಯಾಚಾರವೆಸಗಿದ ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.