Advertisement

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

04:30 PM Apr 24, 2024 | Kavyashree |

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಫಯಾಜ್‌ನನ್ನು ಬುಧವಾರ ತಮ್ಮ ವಶಕ್ಕೆ ಪಡೆದಿದ್ದಾರೆ.

Advertisement

ಮಂಗಳವಾರದಿಂದ ತನಿಖೆ ಆರಂಭಿಸಿರುವ ಎಸ್ಪಿ ವೆಂಕಟೇಶ್ ನೇತೃತ್ವದ ತಂಡ, ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿ‌ ಪುರಸ್ಕರಿಸಿದ ನ್ಯಾಯಾಲಯ ಆರು ದಿನ ಆರೋಪಿಯನ್ನು ಸಿಐಡಿಗೆ ಒಪ್ಪಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಧಾರವಾಡ: ರಾಜ್ಯಾದ್ಯಂತ ತೀವ್ರ ಸಂಚಲನ ಉಂಟು ಮಾಡಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆಗೈದ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊಲೆಯಾದ ನಂತರ 14 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ಒಳಗಾಗಿದ್ದ ಫಯಾಜ್‌ನನ್ನು ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಬುಧವಾರ ಬೆಳಗ್ಗೆಯೇ ಕಾರಾಗೃಹಕ್ಕೆ ಬಂದ ಸಿಐಡಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ನಂತರ ಕೇಂದ್ರ ಕಾರಾಗೃಹಕ್ಕೆ ವೈದ್ಯರನ್ನು ಕರೆಸಿಕೊಂಡು ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ನಂತರ ಐದು ವಾಹನಗಳಲ್ಲಿ ಸೂಕ್ತ ಬಂದೋಬಸ್ತ್ ಮಧ್ಯೆ ಆರೋಪಿನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದುಕೊಂಡು ತೆರಳಿದರು. ಆದರೆ ಎಲ್ಲಿಗೆ ತೆರಳಿದರು ಎಂಬ ಕುರಿತು ಅಧಿಕಾರಿಗಳು ಸದ್ಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ.

Advertisement

ಫಯಾಜ್‌ಗೆ ಸರಿಯಾದ ಶಿಕ್ಷೆ ಆಗದೇ ಹೋದಲ್ಲಿ ನಾವೇ ಶಿಕ್ಷೆ ಕೊಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ನೀಡಿದ್ದ ಹೇಳಿಕೆ ತೀವ್ರ ಸಂಚಲನ ಸೃಷ್ಠಿಸಿತ್ತು. ಇದರಿಂದಾಗಿ ಪೊಲೀಸರು ಆರೋಪಿ ಫಯಾಜ್‌ಗೆ ಬಿಗಿ ಭದ್ರತೆ ಒದಗಿಸಿದ್ದು ಕಂಡು ಬಂದಿತು.

Hubli: ನೇಹಾ ಕೊಲೆ ಖಂಡಿಸಿ ಎನ್‌ಎಸ್‌ಯುಐ ವತಿಯಿಂದ ಪ್ರತಿಭಟನೆ

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ)ದ ವತಿಯಿಂದ ವಿದ್ಯಾರ್ಥಿಗಳು ಬುಧವಾರ ನಗರದ ಬಿವಿಬಿ ಕಾಲೇಜು ಎದುರು ಪ್ರತಿಭಟನೆ ನಡೆಸಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

ಎಚ್‌ಡಿಬಿಆರ್‌ಟಿಎಸ್ ಕಾರಿಡಾರಿನಲ್ಲಿ ಚಿಗರಿ ಬಸ್‌ಗಳ ಸಂಚಾರ ಹಾಗೂ ಹುಬ್ಬಳ್ಳಿ-ಧಾರವಾಡ ನಡುವಿನ ಸಾರ್ವಜನಿಕ ವಾಹನಗಳ‌ ಸಂಚಾರವನ್ನು ಸುಮಾರು ಒಂದುತಾಸು ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹಂತಕನಿಗೆ ಗಲ್ಲು ಶಿಕ್ಷೆ, ಜೀವಾವಧಿ ಶಿಕ್ಷೆ ಇಲ್ಲವೇ ಎನ್ ಕೌಂಟರ್‌ನಂತಹ ಶಿಕ್ಷೆ ನೀಡಬೇಕು ಮತ್ತು ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.

ಹತ್ಯೆಯಾದ ನೇಹಾಳಿಗೆ ಬೇಗನೇ ನ್ಯಾಯ ದೊರೆಯದಿದ್ದರೆ, ಸಂಘಟನೆಯಿಂದ ಹೋರಾಟ ಮುಂದುವರೆಸಲಾಗುವುದು ಎಂದು ಆಗ್ರಹಿಸಿ ಬಿವಿಬಿ ಕಾಲೇಜ್‌ನ ಮುಖ್ಯದ್ವಾರದ ಗೇಟ್ ಮುರಿದು ಒಳನುಗ್ಗಲು ಪ್ರಯತ್ನಿಸಿದರು. ಬಲಭಾಗದ ಗೇಟ್  ತೆರವು ಮಾಡಿ ಒಳನುಸುಳಲು ಪ್ರಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

ಎನ್‌ಎಸ್‌ಯುಐ ಬಾವುಟ ಹಾಗೂ ನೇಹಾ ಸಾವಿಗೆ ನ್ಯಾಯ ಬೇಕು ಎನ್ನುವ ಫಲಕ ಪ್ರದರ್ಶಿಸಿ, ಘೋಷಣೆ ಕೂಗಿದರು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲೇಬೇಕು ಎಂದು ಒತ್ತಾಯಿಸಿದರು.

ಡಿಸಿಪಿ ರಾಜೀವ್ ಎಂ. ಅವರಿಗೆ ಮನವಿ ಪತ್ರ ಸಲ್ಲಿಸಿ, ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ರೋಹಿತ ಘೋಡಕೆ, ರಫೀಕ್ ಅಲಿ, ರೋಹನ ಹಿಪ್ಪರಗಿ, ವಿನಯ ಪಟ್ಟಣಶೆಟ್ಟಿ, ರಾಹುಲ ಬೆಳದಡಿ, ಬಸನಗೌಡ ಪಾಟೀಲ, ವಿಶಾಲ ಮಾನೆ, ಕಿರಣ ಗಾಂಧಾಳ, ಕಲ್ಮೇಶ ಉಳ್ಳಾಗಡ್ಡಿ, ನಿಖಿಲ ಹಿರೇಮಠ, ಕಿಶೋರ ಶಿರಸಂಗಿ ಸೇರಿದಂತೆ ನೂರಾರು ವಿದ್ಯಾರ್ಥಿ, ವಿದ್ತಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next