Advertisement

ಬಾಂಧವ್ಯ ಪಾಕ್‌ಗೆ ಬಿಟ್ಟಿದ್ದು

11:58 PM Sep 17, 2020 | mahesh |

ಹೊಸದಿಲ್ಲಿ: ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಬೇಕೇ, ಬೇಡವೇ ಎನ್ನುವುದು ಪಾಕಿಸ್ತಾನ ಸರ್ಕಾರಕ್ಕೆ ಬಿಟ್ಟಿದ್ದು. ಎರಡೂ ದೇಶಗಳ ನಡುವೆ ಇರುವ ಬಾಂಧವ್ಯ ಸುಧಾರಣೆಗೆ ಸಂಬಂಧಿಸಿ ನೆರೆಯ ರಾಷ್ಟ್ರವೇ ಧನಾತ್ಮಕ ನಿರ್ಣಯ ಕೈಗೊಳ್ಳಬೇಕು. ಉಗ್ರವಾದ, ಹಿಂಸೆ ಮುಕ್ತ ವಾತಾವರಣದಲ್ಲಿ ಮಾತ್ರವೇ ಶಾಂತಿ ಮಾತುಕತೆ ಸಾಧ್ಯ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ.

Advertisement

ಪಾಕಿಸ್ತಾನದ ಬಗ್ಗೆ ಸರ್ಕಾರ ಹೊಂದಿರುವ ನಿರ್ಣಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖೀತ ಉತ್ತರ ನೀಡಿದ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್‌, ವಿವಿಧ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ನಡೆಸುತ್ತಿರುವ ಪ್ರಚೋದನಾಕಾರಿ ಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಲಾಗುತ್ತಿದೆ ಎಂದರು.

ಭಾರತದ ನಿರಂತರ ಪ್ರಯತ್ನದಿಂದಲೇ ಉಗ್ರ ಸಂಘಟನೆಗಳಾಗಿರುವ ಜಮಾತ್‌ ಉದ್‌-ದಾವಾ, ಲಷ್ಕರ್‌-ಎ-ತೊಯ್ಬಾ, ಜೈಶ್‌-ಎ-ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗಳ ವಿರುದ್ಧ ಜಗತ್ತಿನ ರಾಷ್ಟ್ರಗಳು ಪ್ರಬಲವಾಗಿ ಧ್ವನಿ ಎತ್ತುವಂತಾಯಿತು ಎಂದು ಮುರಳೀ ಧರನ್‌ ಹೇಳಿದ್ದಾರೆ. ಭಯೋತ್ಪಾದನಾ ಧನ ಸಹಾಯ ನಿಗ್ರಹ ಪಡೆ (ಎಫ್ಎಟಿಎಫ್) ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವು ನೀಡುವ ಕಾರಣ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಇರಿಸಿದೆ. ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಪಾಕಿಸ್ತಾನದ ಉಗ್ರರು ಮತ್ತು ಉಗ್ರ ಸಂಘಟನೆಗಳ ವಿರುದ್ಧ ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಕೂಡ ಕ್ರಮ ಕೈಗೊಳ್ಳಲು ಒತ್ತಾಯ ಮಾಡುತ್ತಿವೆ ಎಂದೂ ಸಚಿವ ಮುರಳೀಧರನ್‌ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ.

“ಹೌಡಿ ಮೋದಿ’ ಸರ್ಕಾರಿ ವೆಚ್ಚದಲ್ಲಿ ನಡೆದಿಲ್ಲ: ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಗೌರವಾರ್ಥ ಅಮೆರಿಕದ ಹ್ಯೂಸ್ಟನ್‌ನಲ್ಲಿ ಆಯೋಜಿಸಲಾಗಿದ್ದ “ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಸರ್ಕಾರದ ವತಿಯಿಂದ ವೆಚ್ಚ ಮಾಡಲಾಗಿಲ್ಲ. ಅಮೆರಿಕದ ಟೆಕ್ಸಸ್‌ ಇಂಡಿಯಾ ಫೋರಂ 2019ರ ಸೆ.22ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 50 ಸಾವಿರ ಮಂದಿ ಭಾಗವಹಿಸಿದ್ದರು ಎಂದು ಸಚಿವ ವಿ.ಮುರಳೀಧರನ್‌ ರಾಜ್ಯಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಸರ್ಕಾರದ ಬೊಕ್ಕಸದಿಂದ ವೆಚ್ಚ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ “ಇಲ್ಲ’ ಎಂದು ಅವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಕೋವಿಡ್ ಹೋರಾಟಕ್ಕೆ ಪಿಎಂ ಕೇರ್ನಿಂದ ಹಣ ಕೊಡಿ
ಕೊರೊನಾ ವಿರುದ್ಧದ ಹೋರಾಟಕ್ಕೆ ಯಾವುದೇ ರೀತಿಯಲ್ಲೂ ರಾಜಕೀಯ ಬಣ್ಣ ನೀಡಬಾರದು ಎಂದು ಹೇಳಿರುವ ಶಿವಸೇನೆ, ಕೇಂದ್ರ ಸರ್ಕಾರವು ಪಿಎಂ ಕೇರ್ ನಿಧಿಯಿಂದ ರಾಜ್ಯಗಳಿಗೆ ಹಣಕಾಸು ನೆರವು ನೀಡಲಿ ಎಂದು ಆಗ್ರಹಿಸಿದೆ. ಅಲ್ಲದೆ, ಜಿಎಸ್‌ಟಿ ಬಾಕಿ ಪಾವತಿಸು ವಂತೆಯೂ ಮನವಿ ಮಾಡಿದೆ. ಎಲ್ಲ ರಾಜ್ಯಗಳೂ ಸೋಂಕಿನ ವಿರುದ್ಧ ಸಮರ್ಥ ಹೋರಾಟ ನಡೆಸುತ್ತಿವೆ. ಯಾರು ಕೂಡ “ಭಾಭಿ ಜೀ ಪಾಪಡ್‌’ ತಿಂದು ಗುಣಮುಖರಾಗಿದ್ದಲ್ಲ ಎಂದು ಇತ್ತೀಚೆಗೆ ಪಾಪಡ್‌ ಬಿಡುಗಡೆ ಮಾಡಿದ್ದ ಕೇಂದ್ರ ಸಚಿವ ಮೇಘವಾಲ್‌ ಅವರ ಹೆಸರೆತ್ತದೆ ಸಂಸದ ಸಂಜಯ್‌ ರಾವನ್‌ ಟೀಕಿಸಿದ್ದಾರೆ.

Advertisement

ಜಿಎಸ್ಟಿ ಬಾಕಿ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ
ಜಿಎಸ್‌ಟಿ ಬಾಕಿ ಪಾವತಿಗೆ ಒತ್ತಾಯಿಸಿ ಗುರುವಾರ ಸಂಸತ್‌ ಭವನದ ಆವರಣದಲ್ಲಿ 8 ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ. ಕಾಂಗ್ರೆಸ್‌ ನಾಯಕರು ಮಾತ್ರ ಈ ಧರಣಿಗೆ ಗೈರಾಗಿದ್ದು ವಿಶೇಷವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌, ಈ ಪ್ರತಿಭಟನೆಗೆ ನಾವು ಕಾಂಗ್ರೆಸ್‌ ಅನ್ನು ಆಹ್ವಾನಿಸಿಲ್ಲ ಎಂದಿದ್ದಾರೆ. ಟಿಎಂಸಿ, ಟಿಆರ್‌ಎಸ್‌, ಆರ್‌ಜೆಡಿ, ಆಮ್‌ ಆದ್ಮಿ ಪಕ್ಷ, ಡಿಎಂಕೆ, ಎಸ್ಪಿ, ಎನ್‌ಸಿಪಿ ಮತ್ತು ಶಿವಸೇನೆ ನಾಯಕರು ಧರಣಿಯಲ್ಲಿ ಭಾಗಿಯಾಗಿದ್ದರು.

ಗಿಲ್ಗಿಟ್‌- ಬಾಲ್ಟಿಸ್ತಾನ್‌ “ಪೂರ್ಣ ಪ್ರಮಾಣದ ಪ್ರಾಂತ್ಯ’?
ಗಿಲ್ಗಿಟ್‌- ಬಾಲ್ಟಿಸ್ತಾನ್‌ಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಟ್ಟಿದ್ದು, ದೇಶದ ಅವಿಭಾಜ್ಯ ಅಂಗ ಎಂದು ಭಾರತ ಹೇಳಿಕೊಂಡು ಬರುತ್ತಿದ್ದರೂ, ಪಾಕ್‌ ಭಿನ್ನರಾಗ ಎತ್ತಿದೆ. ಗಿಲ್ಗಿಟ್‌- ಬಾಲ್ಟಿಸ್ತಾನ್‌ಗಳನ್ನು ಪೂರ್ಣ ಪ್ರಮಾಣದ ಪಾಂತ್ಯ ಎಂದು ಘೋಷಿಸಲು ಪಾಕ್‌ ಸರ್ಕಾರ ಸಕಲ ತಯಾರಿ ಆರಂಭಿಸಿದೆ.ಪಾಕ್‌ ಆಕ್ರಮಿತ ಗಿಲ್ಗಿಟ್‌- ಬಾಲ್ಟಿಸ್ತಾನ್‌ಗೆ ಪ್ರಧಾನಿ ಇಮ್ರಾನ್‌ ಖಾನ್‌ ಶೀಘ್ರವೇ ಭೇಟಿ ನೀಡಲಿದ್ದಾರೆ. ಎಲ್ಲ ಸಾಂವಿಧಾನಿಕ ಹಕ್ಕುಗಳನ್ನೊಳಗೊಂಡಂತೆ ಪೂರ್ಣ ಪ್ರಮಾಣದ ಪ್ರಾಂತ್ಯವೆಂದು ಘೋಷಿಸಲಿದ್ದಾರೆ ಎಂದು ಕಾಶ್ಮೀರ ಮತ್ತು ಗಿಲ್ಗಿಟ್‌- ಬಾಲ್ಟಿಸ್ತಾನ್‌ ವ್ಯವಹಾರ ಸಚಿವ ಅಲಿ ಅಮಿನ್‌ ಗಂದಾಪುರ್‌ ತಿಳಿಸಿದ್ದಾರೆ. ಗಿಲ್ಗಿಟ್‌- ಬಾಲ್ಟಿಸ್ತಾನ್‌ನ ಬೇಡಿಕೆಗೆ ತಕ್ಕಂತೆ ಆ ಭಾಗದಲ್ಲಿ ರಾಷ್ಟ್ರೀಯ ಅಸೆಂಬ್ಲಿ ಮತ್ತು ಸಂಸದ ಕ್ಷೇತ್ರಗಳನ್ನು ರಚಿಸ ಲಾಗುತ್ತದೆ. ಸಾಂವಿಧಾನಿಕ ಹಕ್ಕುಗಳ ಅಡಿಯಲ್ಲಿ ಸಮರ್ಪಕ ಪ್ರಾತಿನಿಧ್ಯ ನೀಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next