Advertisement

ಸರಕಾರ, ಪೊಲೀಸರ ನಿರ್ಲಕ್ಷ್ಯವೇ ಕುಕ್ಕರ್‌ ಪ್ರಕರಣಕ್ಕೆ ಕಾರಣ: ಲೋಬೋ  

12:26 AM Nov 30, 2022 | Team Udayavani |

ಮಂಗಳೂರು: ಗೋಡೆ ಬರಹದಂತಹ ಪ್ರಕರಣಗಳು ನಡೆದಾಗ ಸರಕಾರ, ಪೊಲೀಸ್‌ ಅಧಿಕಾರಿಗಳು ಎಚ್ಚರಗೊಂಡಿದ್ದರೆ ಕುಕ್ಕರ್‌ ದಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ. ಸರಕಾರದ ವೈಫ‌ಲ್ಯವೇ ಇಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿದೆ ಎಂದು ಮಾಜಿ ಶಾಸಕ ಜೆ.ಆರ್‌. ಲೋಬೋ ಹೇಳಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಯಾರೋ ಒಬ್ಬ ನಡೆಸುವ ಅಪರಾಧಕ್ಕೆ ಇಡೀ ಸಮುದಾಯವನ್ನು ಸಂಶಯಿಸುವ, ಅನುಮಾನದಿಂದ ನೋಡುವ ಪ್ರಕ್ರಿಯೆ ನಡೆಯುತ್ತಿರುವುದು ಖಂಡನೀಯ ಎಂದರು.

ಚುನಾವಣೆ ಹತ್ತಿರ ಬರುವಾಗ ಸಮಾಜದಲ್ಲಿ ಇಂತಹ ಗೊಂದಲದ ವಾತಾವರಣ ಸೃಷ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಇದರಿಂದಾಗಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಕುಂಠಿತಗೊಳ್ಳುತ್ತಿದೆ. ವ್ಯಾಪಾರ ಕುಂದಿದೆ, ಪ್ರವಾಸೋದ್ಯಮ ಅಭಿವೃದ್ದಿಯಾಗುತ್ತಿಲ್ಲ.

ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್‌ ಒಬ್ಬರು ವಿದ್ಯಾರ್ಥಿಯನ್ನು ಭಯೋತ್ಪಾದಕ ಎನ್ನುವ ಮನಸ್ಥಿತಿಗೆ ಯಾರು ಕಾರಣ? ಇತ್ತೀಚೆಗೆ ನಂತೂರಿನಲ್ಲಿ ಒಂದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪರಸ್ಪರ ಮಾತನಾಡಿದ್ದಕ್ಕೆ ಅವರನ್ನು ಹಿಡಿದು ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೆಂದರೆ ಪೊಲೀಸರು ಇಂತಹವರ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ವಿದ್ಯುತ್‌ ದರ ಏರಿಕೆ, ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯ ಹೊರೆಯ ಜತೆಗೆ ಜಿಎಸ್‌ಟಿಯಿಂದಾಗಿ ಜನಜೀವನ ಸಂಕಷ್ಟದಲ್ಲಿದೆ. ಆಡಳಿತ ಖರ್ಚು ಕಡಿಮೆ ಮಾಡಿದಾಗ ಈ ರೀತಿ ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಬಹುದು. ಆದರ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಬಿಜೆಪಿ ಆಡಳಿತ ಹಾಗೂ ಪೊಲೀಸ್‌ ವ್ಯವಸ್ಥೆ ವೈಫ‌ಲ್ಯಗೊಂಡಿದ್ದು, ಇಂತಹ ಸರಕಾರ ಬೇಕಾ ಎಂಬ ಬಗ್ಗೆ ಜನ ಯೋಚನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

Advertisement

ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಳ್ಳಿಗೆ ತಾರನಾಥ ಶೆಟ್ಟಿ, ಶಾಲೆಟ್‌ ಪಿಂಟೋ, ಅಪ್ಪಿ, ಶುಭೋದಯ ಆಳ್ವ, ಸಂತೋಷ್‌ ಶೆಟ್ಟಿ, ಲುಕ್ಮಾನ್‌ ಬಂಟ್ವಾಳ, ಟಿ.ಕೆ. ಸುಧೀರ್‌, ಪ್ರಕಾಶ್‌ ಸಾಲ್ಯಾನ್‌, ಸಲೀಂ, ಶಾಂತಲಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next