ಕನಕಪುರ: ಶರಣರು, ದಾರ್ಶನಿಕರ ಜಯಂತಿ ಮತ್ತು ಅದರ ಪೂರ್ವಭಾವಿ ಸಭೆಗಳಲ್ಲಿ ಅಧಿಕಾರಿಗಳು ಭಾಗವಹಿಸದೆ ನಿರ್ಲಕ್ಷ್ಯವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುರುಬರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕನಕದಾಸ ಮತ್ತು ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಕುರುಬರ ಸಂಘದ ಅಧ್ಯಕ್ಷ ಚಂದ್ರು ಹಾಗೂ ಪದಾಧಿಕಾರಿಗಳು ಮಾತನಾಡಿ, ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಿ ಅರಿವು ಮೂಡಿಸಿ, ಜಯಂತಿಗಳನ್ನು ಆಚರಿಸಲು ಸರ್ಕಾರದ ಉದ್ದೇಶ. ಆದರೆ, ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಂಡರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆದರೆ, ಕೆಲವು ಅಧಿಕಾರಿಗಳು ಗೈರಾಗಿ ಅಗೌರವ ತರುತ್ತಿದ್ದಾರೆ ಎಂದು ದೂರಿದರು.
ಬೇಜವಾಬ್ದಾರಿ ವರ್ತನೆ ಸರಿಯಲ್ಲ: ನಮ್ಮ ತಾಲೂಕಿನಲ್ಲಿ ಕೆಲವು ಅಧಿಕಾರಿಗಳು ಹಲವು ವರ್ಷಗಳಿಂದ ಇಲ್ಲಢ ಇದ್ದು ಜಿಡ್ಡುಹಿಡಿದ್ದಿದ್ದಾರೆ. ಎಷ್ಟು ಮೇಲಧಿಕಾರಿಗಳು ಬಂದು ಹೋದರು ಸಹ, ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿ ಪ್ರವೃತ್ತಿ ಇನ್ನೂ ಸುಧಾರಣೆ ಕಂಡಿಲ್ಲ. ಎಷ್ಟೇ ನೋಟಿಸ್ ನೀಡಿದರೂ ಅಧಿಕಾರಿಗಳು ಕಾರ್ಯಕ್ರಮಗಳಿಗೆ ಗೈರಾಗುವುದು ತಪ್ಪಲಿಲ್ಲ. ಮೇಲಾಧಿಕಾರಿಗಳ ನೋಟಿಸ್‌ಗೆ ಕಿಮ್ಮತ್ತು ನೀಡದೆ, ಬೇಜವಾಬ್ದಾರಿ ತನದಿಂದ ವರ್ತಿಸುತ್ತಿರುವುದು ಸರಿಯಲ್ಲ. ಗೈರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅದ್ದೂರಿ ಜಯಂತಿ ಆಚರಿಸಿ: ಸಮಾಜಕ್ಕೆ ಆದರ್ಶವಾದ ವ್ಯಕ್ತಿಗಳ ಜಯಂತಿಯನ್ನು ನಾಲ್ಕು ಗೋಡೆಗಳ ಮಧ್ಯೆ ಆಚರಣೆಗೆ ಸೀಮಿತ ಮಾಡಿದೆ, ನಗರದಲ್ಲಿ ಮೆರವಣಿಗೆ ನಡೆಸಿ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕು. ಎಲ್ಲ ಇಲಾಖೆಗಳ ಸಹಕಾರ ನೀಡಿ, ಕನಕ ಜಯಂತಿಯನ್ನು ಅದ್ದೂರಿಯಿಂದ ಆಚರಣೆ ಮಾಡಬೇಕು ಎಂದು ತಿಳಿಸಿದರು.
ಅಸಹಾಯಕತೆ: ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಮಾತನಾಡಿ, ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಸಾಕಾಗಿದ್ದೇವೆ. ಆದರೆ, ಗೈರಾಗುವುದು ತಪ್ಪಲಿಲ್ಲ. ನಮಗೆ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಯಾವುದೇ ಶರಣರು, ಸಾಹಿತಿಗಳು, ಆದರ್ಶ ವ್ಯಕ್ತಿಗಳ ಜಯಂತಿಯನ್ನು ಯಾವುದೇ ಬೇಧಭಾವ ಮಾಡಿದೆ, ಸರ್ಕಾರದ ಮಾರ್ಗಸೂಚಿಯಂತೆ ಸಕಲ ಗೌರವ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತೇವೆ. ಸಮುದಾಯದ ಮುಖಂಡರು ಅದ್ದೂರಿಯಿಂದ ಆಚರಣೆ ಮಾಡಿ, ನಾವು ಪಾಲ್ಗೊಳ್ಳುತ್ತೇವೆ ಎಂದರು.
ಸಭೆಯಲ್ಲಿ ನಗರ ಠಾಣೆ ಸಿಎಸ್‌ಐ ಉಷಾ ನಂದಿನಿ, ಶಿಕ್ಷಣ ಇಲಾಖೆಯ ಸತೀಶ್, ಪಿಆರ್‌ಡಿ ಇಲಾಖೆ ಎಇಇ ಚಂದ್ರಶೇಖರ್, ಸರ್ಕಾರಿ ಪಿಯು ಕಾಲೇಜ್ ಉಪನ್ಯಾಸಕ ಶ್ರೀನಿವಾಸ್, ಕುಂಬಾರರ ಸಂಘದ ಅಧ್ಯಕ್ಷ ಚಂದ್ರು, ಗೌರವಾಧ್ಯಕ್ಷ ಮಲ್ಲೇಶ್, ಕಾರ್ಯಾಧ್ಯಕ್ಷ ಆನಂದ್, ಕಾರ್ಯದರ್ಶಿ ಮಹೇಶ್, ಸತೀಶ್, ಶಿವ ಚನ್ನಯ್ಯ, ಚಿಕ್ಕಣ್ಣ, ಜಯ ಕರ್ನಾಟಕದ ಕೃಷ್ಣಪ್ಪ, ನೀಲಿ ರಮೇಶ್, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸುರೇಶ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.