Advertisement

ಫಸಲ್‌ ಬಿಮಾ ಅನುಷ್ಠಾನಕ್ಕೆ ನಿರ್ಲಕ್ಷ್ಯ

03:11 PM Jul 15, 2017 | Team Udayavani |

ದಾವಣಗೆರೆ: ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಯೋಜನೆಯ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಅಧಿಕಾರಿಗಳ ವಿರುದ್ಧ ಶುಕ್ರವಾರ
ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ (ಲೀಡ್‌ ಬ್ಯಾಂಕ್‌) ಪ್ರಗತಿ ಪರಿಶೀಲನಾ ಸಭೆಯಲ್ಲಿ ಹರಿಹಾಯ್ದಿದ್ದಾರೆ.

Advertisement

ಪ್ರಧಾನಮಂತ್ರಿ… ಹೆಸರು ಇರುವ ಕಾರಣಕ್ಕೆ ರಾಜ್ಯ ಸರ್ಕಾರ ಇಡೀ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ಈ ಯೋಜನೆ ಕೇಂದ್ರದ್ದೇ. ಕೇಂದ್ರ ಸರ್ಕಾರವೇ ಸರಿಯಾಗಿ ಯೋಜನೆ ನಡೆಸುತ್ತಿಲ್ಲ ಎಂಬಂತೆ ರೈತರ ಹಾದಿ ತಪ್ಪಿಸುವ ಜೊತೆಗೆ ಕೇಂದ್ರಕ್ಕೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಫಸಲ್‌ ಬಿಮಾ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ್ದು ತಲಾ ಶೇ. 40 ರಷ್ಟು ಪಾಲು ಇರುತ್ತದೆ. ಇನ್ನುಳಿದ ಶೇ. 20 ರಷ್ಟು ಭಾಗವನ್ನು ರೈತರು ತುಂಬಬೇಕು. ರಾಜ್ಯ ಸರ್ಕಾರವೇ ವಿಮಾ ಏಜೆನ್ಸಿ ನಿಗದಿಪಡಿಸಬೇಕು. ಬೆಳೆ ಕಳೆದುಕೊಂಡ ರೈತರಿಗೆ ರಾಜ್ಯ ಸರ್ಕಾರರ್ವೇ ಪರಿಹಾರ
ಒದಗಿಸುವತ್ತ ಗಮನ ನೀಡಬೇಕು. ಆದರೆ, ಇದು ಯಾವುದೂ ಸರಿಯಾಗಿ ನಡೆಯುತ್ತಲೇ ಇಲ್ಲ. ಕಳೆದ ವರ್ಷ ವಿಮೆ ಮಾಡಿಸಿರುವ 29,600 ರೈತರಲ್ಲಿ 11,310 ರೈತರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಅದು ಒಬ್ಬರಿಗೆ ಸಿಕ್ಕರೆ ಇನ್ನೊಬ್ಬರಿಗೆ ಬಂದೇ ಇಲ್ಲ.
ಹೀಗಾದರೆ ರೈತರು ಯಾವ ಹುಮ್ಮಸ್ಸಿನಿಂದ ಈ ವರ್ಷ ವಿಮೆ ಕಟ್ಟುತ್ತಾರೆ ನೀವೇ ಹೇಳಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಎನ್‌.ಟಿ. ಎರ್ರಿಸ್ವಾಮಿ ಮಾತನಾಡಿ, ಇನ್ಸೂರೆನ್ಸ್‌ ಕಂಪೆನಿಯವರು ಯಾವ ಪಾಲಿಸಿಗಳು ವಿಮೆಗೆ ಯೋಗ್ಯ ಮತ್ತು ಯಾವುದು ಅಲ್ಲವೆಂಬ ಮಾಹಿತಿ ನೀಡುತ್ತಿಲ್ಲ. ಕಾರಣ ಏನೇ ಇರಬಹುದು ಅದನ್ನು ಹೇಳಿದರೆ ಬ್ಯಾಂಕ್‌ನವರು 
ರೈತರಿಗೆ ಹೇಳಿ ಸ್ಪಷ್ಟಪಡಿಸಬಹುದು. ಒಟ್ಟು 29,600 ವಿಮೆದಾರರ ಪೈಕಿ 17,201 ರೈತರಿಗೆ ವಿಮೆ ಮಂಜೂರಾಗಿದ್ದು, 11,310 ರೈತರಿಗೆವಿಮಾ ಹಣ ಜಮೆಯಾಗಿದೆ. ಉಳಿದವರಿಗೆ ಏಕೆ ಮಂಜೂರಾಗಿಲ್ಲವೆಂಬ ಕಾರಣ ವಿಮಾ ಕಂಪೆನಿಯವರು ನೀಡಿಲ್ಲ ಎಂದರು.

ವಿಮಾ ಕಂಪನಿ ಅಧಿಕಾರಿ ಸಮಜಾಯಿಷಿ ನೀಡಲು ಮುಂದಾಗುತ್ತಿದ್ದಂತೆ ಸಿದ್ದೇಶ್ವರ್‌, ವಿಮಾ ಕಂಪನಿಯವರು ಯಾವ ಕಾರಣಕ್ಕೆ ಪರಿಹಾರ ಮಂಜೂರಾಗಿಲ್ಲ ಎಂದು ನಮಗೆ, ಬ್ಯಾಂಕ್‌ನವರಿಗೆ ನೀಡುವುದೇ ಇಲ್ಲ ಎಂದರೆ ಹೇಗೆ. ಮಾಹಿತಿ ಕೊಡದೇ ಇರುವುದಕ್ಕೆ ಕಾರಣ ಏನು ಎಂದು ಖಾರವಾಗಿ ಪ್ರಶ್ನಿಸಿದರು.

ಜಿಲ್ಲಾಧಿಕಾರಿ, ಸಿಇಒ ಒಳಗೊಂಡಂತೆ ಎಲ್ಲಾ ಅಧಿಕಾರಿಗಳು ಫಸಲ್‌ ಬಿಮಾ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು. ನೋಟು ಅಮಾನ್ಯ ನಂತರ ಬ್ಯಾಂಕ್‌ ನವರು ಸಾರ್ವಜನಿಕರಿಗೆ ಸ್ಪಂದಿಸಿದಂತೆ ಫಸಲ್‌ ಬಿಮಾ ಯೋಜನೆಯ ಬಗ್ಗೆಯೂ ರೈತರೊಂದಿಗೆ ಸ್ಪಂದಿಸಬೇಕು. ಫಸಲ್‌ ಬಿಮಾ ಯೋಜನೆಯ ಬಗ್ಗೆಯೇ ಮತ್ತೂಂದು ಸಭೆ ಏರ್ಪಡಿಸಿದರೆ ಸಂಸತ್‌ ಕಲಾಪ ಇದ್ದರೂ ಬಿಟ್ಟು ಬರುತ್ತೇನೆ. ಒಟ್ಟಾರೆಯಾಗಿ ರೈತರಿಗೆ ಅನುಕೂಲ ಆಗಬೇಕು ಎಂದು ಸಿದ್ದೇಶ್ವರ್‌ ಹೇಳಿದರು.
ಫಸಲ್‌ ಬಿಮಾ ಯೋಜನೆಯಡಿ ಅಡಕೆ ಬೆಳೆ ಸೇರಿಸಿ, ವಿಮೆ ತುಂಬಲು ಜು. 31 ರವರೆಗೆ ಅವಧಿ ವಿಸ್ತರಣೆ ಮಾಡುವ ಬಗ್ಗೆ ದೂರವಾಣಿಯಲ್ಲಿ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ಚರ್ಚಿಸಿದರು. ಅವಧಿ ವಿಸ್ತರಣೆ ತಡವಾಗಿ ಬಂದಿರುವ ಕುರಿತು ಜಿಲ್ಲಾ ಧಿಕಾರಿಗಳ ಮೂಲಕ ಪತ್ರ ಸಲ್ಲಿಸುವಂತೆ ಮನವಿ ಮಾಡಿದರು. ರೈತರಿಗೆ ಶೀಘ್ರವಾಗಿ ವಿಮೆ ಪಾವತಿಸುವ ಕುರಿತು ಕ್ರಮ
ವಹಿಸುವುದಾಗಿ ತಿಳಿಸಿದರು.

Advertisement

ವಿಮೆ ಕಟ್ಟಿಸಿಕೊಳ್ಳಲು ಅವಧಿ ವಿಸ್ತರಣೆ ಮಾಡುವಂತೆ ಸಂಬಂಧಿತ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ತಾವು ಚರ್ಚಿಸಿ, ಪತ್ರ ಬರೆದಿದ್ದರೂ ಸಹ ಕೆಲವಾರು ಬ್ಯಾಂಕ್‌ನಲ್ಲಿ ರೈತರ ವಿಮೆ ಪ್ರೀಮಿಯಂ ಕಟ್ಟಿಸಿಕೊಳ್ಳಲು ಸಬೂಬು ಹೇಳುತ್ತಿದ್ದಾರೆ. ಸಾಲ ನವೀಕರಣವಾಗಿಲ್ಲ ಎಂದೆಲ್ಲಾ ಹೇಳಿ ಕಳುಹಿಸಲಾಗುತ್ತಿದೆ. ರೈತರೇ ದೇಶದ ಬೆನ್ನೆಲುಬು. ಅವರೊಂದಿಗೆ ಬ್ಯಾಂಕುಗಳ ಅ ಧಿಕಾರಿ,
ಸಿಬ್ಬಂದಿ ಗೌರವದಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಡಿ. ಎಸ್‌. ರಮೇಶ್‌ ಮಾತನಾಡಿ,
ರೈತರಿಗೆ ವಿಮೆ ಶೀಘ್ರ ಪಾವತಿಯಾಗುವಂತೆ ಕ್ರಮ ವಹಿಸುವುದಾಗಿ ತಿಳಿಸಿ, ಬ್ಯಾಂಕ್‌ ಬಗ್ಗೆ ವಿಶ್ವಾಸವಿಟ್ಟು ಬರುವ ರೈತರನ್ನ ಹೆಚ್ಚು ಓಡಾಡಿಸದೇ ಅಧಿ ಕಾರಿ ಮತ್ತು ಸಿಬ್ಬಂದಿ ಸಹಕರಿಸಬೇಕು ಎಂದರು. 2017ರ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಇಲ್ಲಿಯವರೆಗೆ 4,681 ರೈತರು ತೋಟಗಾರಿಕೆ ಬೆಳೆಗೆ, 1,006 ರೈತರು ವಿಮೆ ಮಾಡಿಸಿದ್ದಾರೆ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಎರ್ರಿಸ್ವಾಮಿ ತಿಳಿಸಿದರು. ಇತರೆ ಬೆಳೆಗೆ ಕೇವಲ 1,006 ರೈತರು ವಿಮೆ ಮಾಡಿಸಿರುವ ಕಾರಣ ಕೇಳಿ, ಬ್ಯಾಂಕ್‌ ಮತ್ತು ಸಿಎಸ್‌ಸಿ ಕೇಂದ್ರಗಳು ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಶೀಘ್ರಗತಿಯಲ್ಲಿ ರೈತರ ಅರ್ಜಿಗಳ ಅಪ್‌ಲೋಡ್‌ ಮಾಡುವಂತೆ ಸಿದ್ದೇಶ್ವರ್‌ ಸೂಚಿಸಿದರು.

ನಬಾರ್ಡ್‌ನ ರವೀಂದ್ರ, ರಿಸರ್ವ್‌ ಬ್ಯಾಂಕಿನ ವ್ಯವಸ್ಥಾಪಕ ಆನಂದ್‌ ನಿಮ್‌, ಸಿ.ಆರ್‌. ಎನ್‌. ವರ್ಮ, ಜಿಲ್ಲಾ ಪಂಚಾಯತ್‌ ಯೋಜನಾ
ನಿರ್ದೇಶಕ ಡಾ| ರಂಗಸ್ವಾಮಿ, ಯೂನಿವರ್ಸಲ್‌ ಸೊಂಪ್‌ ಇನ್ಸೂರೆನ್ಸ್‌ ಕಂಪೆನಿ ಅ ಧಿಕಾರಿ ಮುಖೇಶ್‌, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಶೇ. 102ರಷ್ಟು ಸಾಧನೆ…
ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಎನ್‌.ಟಿ. ಎರ್ರಿಸ್ವಾಮಿ ಮಾತನಾಡಿ, ವಾರ್ಷಿಕ ಸಾಲ ಯೋಜನೆಯಡಿ ಕಳೆದ ಸಾಲಿನಲ್ಲಿ ಕೃಷಿ
ಸಾಲದ 1878.03 ಕೋಟಿ ಗುರಿಯಲ್ಲಿ 1880.70, ಕೈಗಾರಿಕಾ ಸಾಲದಲ್ಲಿ 389.17 ಕೋಟಿ ಗುರಿಯಲ್ಲಿ 107.08, ಇತರೆ 471.68
ಗುರಿಯಲ್ಲಿ 469.50 ಕೋಟಿ ಒಟ್ಟು ಆದ್ಯತಾ ಸಾಲದ 2738.88 ಕೋಟಿ ಗುರಿಯಲ್ಲಿ 2766.92 ಕೋಟಿ ಸಾಲ ನೀಡುವ ಮೂಲಕ
ಶೇ. 102 ಗುರಿ ಸಾಧಿ ಸಲಾಗಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ಮಾತ್ರ ಶೇ. 100 ಸಾಧನೆಯಾಗಿದ್ದು, ದಾವಣಗೆರೆ ಜಿಲ್ಲೆಯೂ ಒಂದಾಗಿದೆ ಎಂದು ತಿಳಿಸಿದರು. ಆದ್ಯತಾ ಮತ್ತು ಆದ್ಯತಾ ರಹಿತ ಸಾಲ ವಿತರಣೆಯಲ್ಲಿ ಶೇ. 99.22 ಪ್ರಗತಿ ಸಾ ಧಿಸಲಾಗಿದೆ. ಪ್ರಸಕ್ತ ಸಾಲಿನ 3 ತಿಂಗಳಲ್ಲಿ ಒಟ್ಟು 1,315 ವಿದ್ಯಾರ್ಥಿಗಳಿಗೆ 21.51 ಕೋಟಿ ರೂಪಾಯಿ ವಿದ್ಯಾಭ್ಯಾಸ ನೀಡಲಾಗಿದೆ. 2016-17 ರಲ್ಲಿ ಸ್ವಸಹಾಯ ಸಂಘಗಳ 57,157 ಗುಂಪುಗಳಿಗೆ 350.51 ಕೋಟಿ ಸಾಲ, 17.81 ಲಕ್ಷ ಖಾತೆಗಳಲ್ಲಿ 9.48 ಖಾತೆಗಳಿಗೆ ಆಧಾರ್‌ ಲಿಂಕ್‌ ಮಾಡಿಸಲಾಗಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಒಟ್ಟು ಕಳೆದ ಸಾಲಿನಿಂದ ಇಲ್ಲಿಯವರಿಗೆ 588.71 ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next