ಪಿರಿಯಾಪಟ್ಟಣ: ನಿರಂತರವಾಗಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ತಡೆಯುವಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ವೈದ್ಯಕೀಯ ಪ್ರಕೋಷ್ಠದ ಮೈಸೂರು ಜಿಲ್ಲಾ ಗ್ರಾಮಾಂತರದ ಅಧ್ಯಕ್ಷ ಡಾ.ಪ್ರಕಾಶ್‌ಬಾಬುರಾವ್ ಆರೋಪಿಸಿದರು.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಬಿಜೆಪಿ ತಾಲೂಕು ಘಟಕ ದೀಪಕ್‌ರಾವ್ ಹತ್ಯೆಯನ್ನು ಎನ್‌ಎಐಎಗೆ ವಹಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂಗಳ ಹಬ್ಬ ಆಚರಣೆಗಳ ಮೇಲೆ ನಿರ್ಭಂದ ಹೇರುತ್ತಾ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ.
ಇದಲ್ಲದೆ ನಿರಂತರವಾಗಿ ಹಿಂದುಗಳ ಹತ್ಯೆಯಾಗುತ್ತಿದ್ದರೂ ಇದರ ಬಗ್ಗೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ ಭಾವನೆ ತೋರುತ್ತಿದೆ. ಹಿಂದು ಕಾರ್ಯಕರ್ತರ ಹತ್ಯೆ ಹಿಂದೆ ಇರುವ ಪಿಎಫ್ಐ ಹಾಗೂ ಕೆಎಫ್ಡಿ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ಸುರತ್ಕಲ್‌ನಲ್ಲಿ ಹತ್ಯೆಯಾಗಿರುವ ದೀಪಕ್‌ರಾವ್ ಹತ್ಯೆಯ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ತಕ್ಕಪಾಠ: ಬಿಜೆಪಿ ಮುಖಂಡ ಶಶಿಕುಮಾರ್ ಮಾತನಾಡಿ, ಸೂರತ್ಕಲ್‌ನಲ್ಲಿ ಸಮಾಜಿಕ ಪ್ರಕೋಷ್ಠದ ಅಧ್ಯಕ್ಷರಾಗಿ ಸೇವೆಸಲ್ಲಿಸತ್ತಿದ್ದ ದೀಪಕ್ ರಾವ್ ಅವರನ್ನು ತಲವಾರ್‌ನಿಂದ ಹತ್ಯೆ ಮಾಡಿದು, ರಾಜಾದ್ಯಂತ ಹಿಂದುಗಳ ಹತ್ಯೆ ನಿರಂತರವಾಗಿರುವುದನ್ನು ತಾಲೂಕು ಬಿಜೆಪಿ ಘಟಕ ಖಂಡಿಸುತ್ತದೆ.
ದೀಪಕ್‌ರಾವ್ ಕುಟುಂಬಕ್ಕೆ 50 ಲಕ್ಷರೂ.ಗಳ ಪರಿಹಾರ ಘೋಷಣೆ ಮಾಡಬೇಕು. ಹಿಂದುಗಳ ಮೇಲೆ ದಾಳಿ ನಡೆಯುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮೀನಾರಾಯಣ್ ಮನವಿ ಪತ್ರವನ್ನು ಓದಿ ತಹಶೀಲ್ದಾರ್‌ಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಟಿ.ಡಿ.ಗಣೇಶ್, ತಾ.ಅಧ್ಯಕ್ಷ ಪಿ.ಜೆ.ರವಿ, ಪ್ರಧಾನ ಕಾರ್ಯದರ್ಶಿ ಕಿರಣ್ ಜಯರಾಮೇಗೌಡ, ತಾ.ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ, ಜಿಲ್ಲಾ ಕಾರ್ಯದರ್ಶಿ ಭಾಗ್ಯ, ಆನಂದ್, ಮುಖಂಡರಾದ ಲೋಕಪಾಲಯ್ಯ, ಶಿವರಾಂ, ನಾಗರಾಜ್, ಚಂದ್ರು, ರಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.