ಬೆಂಗಳೂರು: ಬಿಬಿಎಂಪಿ ಒಡೆತನದ ಮಾರುಕಟ್ಟೆಗಳಿಂದ ಪಾಲಿಕೆಗೆ ಬಾಡಿಗೆ ರೂಪದಲ್ಲಿ 90.77 ಕೋಟಿ ರೂ. ಸಂಗ್ರಹವಾಗಬೇಕಿದ್ದು, ಕಾಂಗ್ರೆಸ್-ಜೆಡಿಎಸ್ ಆಡಳಿತ ಪಾಲಿಕೆಯ ಆದಾಯ ಮೂಲಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಪಾಲಿಕೆಯ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ 116 ಮಾರುಕಟ್ಟೆಗಳು ಪಾಲಿಕೆಯ ಒಡೆತನದಲ್ಲಿದ್ದು, ಅಲ್ಲಿನ 5,910 ಮಳಿಗೆಗಳಿಂದ ವಾರ್ಷಿಕ 32.65 ಕೋಟಿ ರೂ. ಆದಾಯ ಬರಬೇಕಿದೆ.
ಪ್ರಸಕ್ತ ಸಾಲಿನ ಆದಾಯ ಹಾಗೂ ಬಾಕಿ ಬಾಡಿಗೆ ಸೇರಿ ಪಾಲಿಕೆಗೆ ಒಟ್ಟು 90.77 ಕೋಟಿ ರೂ. ಸಂಗ್ರಹವಾಗಬೇಕಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುತ್ತಿಲ್ಲ ಎಂದು ದೂರಿದರು.
ಮಾರುಕಟ್ಟೆ ವಿಭಾಗದಿಂದ ವಾರ್ಷಿಕ ಪಾಲಿಕೆಗೆ 32.65 ಕೋಟಿ ರೂ. ಬಾಡಿಗೆ ಸಂಗ್ರಹವಾಗಬೇಕು. ಆದರೆ, ಪ್ರಸಕ್ತ ಸಾಲಿನಲ್ಲಿ ಈವರೆಗೆ 3.58 ಕೋಟಿ ರೂ. ಮಾತ್ರ ಬಾಡಿಗೆ ಸಂಗ್ರಹಿಸಲಾಗಿದೆ. ಬಾಕಿ ರೂಪದಲ್ಲಿ ಇನ್ನೂ 90 ಕೋಟಿಯಷ್ಟು ಹಣ ಬರಬೇಕಿದ್ದರೂ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಲಿಕೆಯ ಆದಾಯ ಮೂಲಗಳನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದರು.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ಲಕ್ಕಸಂದ್ರ ಮಾರುಕಟ್ಟೆ, ಜಯನಗರ 2ನೇ ಬ್ಲಾಕ್ ಮಾರುಕಟ್ಟೆ, ಗಾಂಧಿಬಜಾರ್, ಕಲಾಸಿಪಾಳ್ಯ ಮಾರುಕಟ್ಟೆ ಸೇರಿ ಸಾವಿರಾರು ಮಳಿಗೆಗಳಿಂದ 90 ಕೋಟಿ ರೂ. ಬಾಕಿ ಬರಬೇಕಿದೆ.
ಜತೆಗೆ 200ಕ್ಕೂ ಹೆಚ್ಚು ವ್ಯಾಪಾರಿಗಳು ಈವರೆಗೆ ಬಾಡಿಗೆಯನ್ನೇ ಪಾವತಿಸದಿದ್ದರೂ, ಅವರಿಂದ ಮಳಿಗೆಗಳನ್ನು ಪಾಪಸ್ ಪಡೆಯಲು ಅಧಿಕಾರಿಗಳು ಮುಂದಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಈಗಾಗಲೇ ವೇತನ ನೀಡಿಲ್ಲವೆಂದು ಪೌರಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ನೌಕರರು ಹಾಗೂ ಸಿಬ್ಬಂದಿಗೂ ವೇತನ ಪಾವತಿಯಾಗಿಲ್ಲ. ಇದರೊಂದಿಗೆ ಗುತ್ತಿಗೆದಾರರಿಗೆ ಹಲವು ವರ್ಷಗಳಿಂದ ಬಿಲ್ ಪಾವತಿಸಿಲ್ಲ.
ಹೀಗಿದ್ದರೂ ಪಾಲಿಕೆಯ ಆದಾಯ ಮೂಲಗಳನ್ನು ನಿರ್ಲಕ್ಷಿಸುತ್ತಿರುವುದೇಕೆ? ಒಂದೊಮ್ಮೆ ಮೇಯರ್ ಆರ್.ಸಂಪತ್‌ರಾಜ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಸ್ವಂತ ಕಟ್ಟಡಗಳಾಗಿದ್ದರೆ, ಬಾಡಿಗೆ ವಸೂಲಿ ಮಾಡದೆ ಬಿಡುತ್ತಿದ್ದರೇ ಎಂದು ಪ್ರಶ್ನಿಸಿದರು.