Advertisement

ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಹಿಸಲ್ಲ

02:47 PM Dec 08, 2018 | Team Udayavani |

ಲಿಂಗಸುಗೂರು: ತಾಲೂಕು ಬರ ಪೀಡಿತ ಪ್ರದೇಶ ಎಂದು ಘೋಷಣೆಯಾಗಿದೆ. ಇದನ್ನು ಸಮರ್ಥವಾಗಿ ಎದುರಿಸಬೇಕು. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ನಾನು ಸಹಿಸಲ್ಲ ಎಂದು ಶಾಸಕ ಡಿ.ಎಸ್‌.ಹೂಲಗೇರಿ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ತಾಲೂಕಿನಲ್ಲಿ ಬರ ಆವರಿಸಿದೆ. ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಎಲ್ಲಿಲ್ಲಿ ಕುಡಿಯುವ ನೀರು ಸಮಸ್ಯೆಯಿದ್ದರೆ ಅಂತಹಲ್ಲಿ ಕೂಡಲೇ ಪರಿಹಾರ ಕಂಡುಕೊಳ್ಳಿ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
 
ತಹಶೀಲ್ದಾರ ಚಾಮರಾಜ ಪಾಟೀಲ, ಪಶುಪಲಾನಾ ಇಲಾಖೆ ಎಡಿ ರಾಚಪ್ಪ ಮಾತನಾಡಿ, 9 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹ ಇದೆ. ಆದರೂ ಎರಡು ಮೇವು ಬ್ಯಾಂಕ್‌ ಸ್ಥಾಪನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು. ಇದಕ್ಕೆ ಆಕ್ರೋಶಗೊಂಡ ಜಿಪಂ ಸದಸ್ಯ ಸಂಗಣ್ಣ ದೇಸಾಯಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ನಾಗನಗೌಡ ತುರಡಗಿ, ಮಳೆಯಿಲ್ಲದೇ ಮೇವಿಗಾಗಿ ಪರಿತಪಿಸುವಂತಾಗಿದೆ. ಎಲ್ಲೂ ಮೇವು ಸಂಗ್ರಹ ಇಲ್ಲ. ಆದರೆ ಮೇವು ದಾಸ್ತಾನು ಇದೆ ಎಂದು ಸಭೆಗೆ ಸುಳ್ಳು ಮಾಹಿತಿ ನೀಡಬೇಡಿ ಎಂದು ತಾರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಶಾಸಕರು ತಾಲೂಕಿನಲ್ಲಿ ಕೂಡಲೇ ಗೋಶಾಲೆ ಹಾಗೂ ಮೇವು ಬ್ಯಾಂಕ್‌ ತೆರೆಯಿರಿ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಿ ಕೆಲಸ ಮಾಡುವಂತೆ ಎಂದು ತಾಕೀತು ಮಾಡಿದರು. ಮುಂಗಾರು ಹಂಗಾಮಿನಲ್ಲಿ 32167 ಹೆಕ್ಟೇರ್‌,
ಹಿಂಗಾರು ಹಂಗಾಮಿನಲ್ಲಿ 85 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಸಂಪೂರ್ಣ ಹಾಳಾಗಿದೆ.

ಮುಂಗಾರು ಹಂಗಾಮಿನ ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ವರದಿ ನೀಡಲಾಗಿದೆ. ಹಿಂಗಾರು ಹಂಗಾಮಿನ ಬೆಳೆ ನಷ್ಟದ ಬಗ್ಗೆ ವರದಿ ನೀಡಲಾಗುವುದು ಎಂದು ಕೃಷಿ ಇಲಾಖೆ ಎಡಿ ಎಚ್‌.ಎಸ್‌. ರಕ್ಕಸಗಿ ಸಭೆಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆಯಲ್ಲಿ ಪಂಪ್‌ಗಾಗಿ ಮೂರು ತಿಂಗಳು ಹಿಂದಯೇ ಅರ್ಜಿ ಸಲ್ಲಿಸಲಾಗಿದೆ. ಆ ಬಗ್ಗೆ ವಿಚಾರಿಸಲು ಕಚೇರಿಗೆ ಬಂದರೂ ಮಾಹಿತಿ ನೀಡುತ್ತಿಲ್ಲ. ಹಾಗಾದರೆ ಎಷ್ಟು ಸಾರಿ ನಿಮ್ಮ ಕಚೇರಿಗೆ ಬರಬೇಕು ಎಂದು ಜಿಪಂ ಸದಸ್ಯ ಸಂಗಣ್ಣ ದೇಸಾಯಿ ಕೃಷಿ ಎಡಿಗೆ ಪ್ರಶ್ನಿಸಿದರು. ಜನಪ್ರತಿನಿಧಿಗಳು ಮಾಹಿತಿ ಕೇಳಿದರೆ ನೀಡೋಲ್ಲಂದ್ರೆ ಹೇಗೆ? ಬರೀ ಹಾರಿಕೆ ಉತ್ತರ ನೀಡುವುದಲ್ಲ. ಯಾಕೆ ನಿಮಗೆ ಇಲ್ಲಿ ಕೆಲಸ ಮಾಡಲು ಇಷ್ಟ ಇಲ್ಲವೇ? ಇಲ್ಲದಿದ್ದರೇ ಹೇಳಿ ಬೇರೆ ಕಡೆಗೆ ಕಳಿಸೋಣ ಎಂದು ಶಾಸಕರು ಎಡಿ ಎಚ್‌.ಎಸ್‌.ರಕ್ಕಸಗಿ ಅವರನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ಎಲ್ಲಿಲ್ಲಿ
ಅಂಗನವಾಡಿ ಕಟ್ಟಡಗಳ ಕಾಮಗಾರಿ ಯಾವ ಸ್ಥಿತಿಯಲ್ಲಿವೆ. ಅವುಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆ ಗಮನಕ್ಕೆ ತರಬೇಕು ಎಂದು ಸಿಡಿಪಿಒ ಪ್ರೇಮಮೂರ್ತಿಗೆ ಸೂಚಿಸಿದ ಅವರು, ನಿಮ್ಮ ಮೇಲೆ ಸಾಕಷ್ಟು ದೂರುಗಳು ಬಂದಿವೆ. ಇಲ್ಲಿ ಏನಿದ್ದರೂ ಉಪನಿರ್ದೇಶಕರು ಸಂಬಂಧವೇ ಹೊರತು ಇನ್ಯಾವರು ಅಲ್ಲ ಎಂದು ಮುದಗಲ್ಲನಲ್ಲಿ ಹೇಳಿದ್ದೀರಿ. ಹಾಗಾದರೆ ಇಲ್ಲಿಗೆ ನಿಮ್ಮ ಡಿಡಿಯವರನ್ನೇ ಕರೆದು ಇಲ್ಲಿ ಕೆಲಸ ಮಾಡಲಿ. ನೀವ್ಯಾಕೆ ಇಲ್ಲಿ ಇರೋದು. ಇಂತಹ ಉದ್ಧಟತನ ಮಾತುಗಳನ್ನು ಬಿಟ್ಟು ಸರಿಯಾಗಿ ಕೆಲಸ ಮಾಡುವರಿದ್ದರೆ ಮಾಡಿ. ಇಲ್ಲದಿದ್ದರೆ ಇಲ್ಲಿಂದ ನೀವು ಹೋಗಬಹುದು. ಇಲ್ಲಿ ನಮಗೆ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವ ಅಧಿಕಾರಿಗಳು ಬೇಕು. ನಿಮ್ಮಂತ ಕೆಲಸ ಮಾಡದವರು ನಮ್ಮ ಕ್ಷೇತ್ರಕ್ಕೆ ಬೇಕಿಲ್ಲ ಎಂದು ಸಿಡಿಪಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ಬಯ್ನಾಪುರ ಕಸ್ತೂರಬಾ ಶಾಲೆಗೆ ಸರಿಯಾಗಿ ಆಹಾರ ಸರಬರಾಜು ಆಗುತ್ತಿಲ್ಲ. ಆರ್‌ಎಂಎಸ್‌ಎ ಶಾಲೆಗಳಿಗೆ 8 ತಿಂಗಳಿಂದ ಆಹಾರ ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಏನು ಕ್ರಮಕೈಗೊಂಡಿರಿ ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸನಗೌಡ ಕಂಬಳಿ ಶಿಕ್ಷಣ ಇಲಾಖೆ ನೀಲಪ್ಪ ಅವರಿಗೆ
ಪ್ರಶ್ನಿಸಿದರು. ಆರ್‌ಎಂಎಸ್‌ಎ ಶಾಲೆಗೆ ಆಹಾರ ಪೂರೈಕೆದಾರರು ಆಹಾರ ಪೂರೈಕೆ ಮಾಡುತ್ತಿಲ್ಲ.

ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಏಜನ್ಸಿ ರದ್ದುಗೊಳಿಸಿ ಬೇರೆ ಟೆಂಡರ್‌ ಕರೆಯುವಂತೆ ಶಾಸಕರು ಸೂಚಿಸಿದರು. ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ, ಜಿಪಂ ಸದಸ್ಯೆ ರೇಣುಕಾ ಚಂದ್ರಶೇಖರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next