ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ನಡುವೆ ಶನಿವಾರದಿಂದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗಾಗಿ ಇರುವ ನೀಟ್-ಯುಜಿ ಕೌನ್ಸೆಲಿಂಗ್ ಮುಂದೂಡಿಕೆಯಾಗಿದೆ. ಪ್ರಸಕ್ತ ತಿಂಗಳ ಅಂತ್ಯದಲ್ಲಿ ಆರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಸದ್ಯದಲ್ಲೇ ಕೇಂದ್ರ ಶಿಕ್ಷಣ ಸಚಿವಾಲಯವು ಅಂತಿಮ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಕೆಲವು ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ಪತ್ರ ವಿತರಿಸುವ ಪ್ರಕ್ರಿಯೆ ಮುಂದುವರಿದಿದ್ದು, ಹೆಚ್ಚುವರಿ ಸೀಟುಗಳನ್ನೂ ಸೇರ್ಪಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ, ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲೇ ಹೊಸ ಕಾಲೇಜುಗಳ ಸೀಟುಗಳನ್ನೂ ಸೇರಿಸಿ, ಕೌನ್ಸೆಲಿಂಗ್ ದಿನಾಂಕ ಘೋಷಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಇನ್ನೊಂದೆಡೆ ನೀಟ್-ಯುಜಿ ಕೌನ್ಸೆಲಿಂಗ್ ದಿನಾಂಕದ ಬಗ್ಗೆ ಇನ್ನೂ ಅಧಿಸೂಚನೆಯನ್ನೇ ಹೊರಡಿ ಸಿಲ್ಲ. ಹೀಗಾಗಿ ಮುಂದೂಡಿಕೆಯ ಪ್ರಶ್ನೆಯೇ ಉದ್ಭವಿ ಸುವುದಿಲ್ಲ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯ ಅಧಿ ಸೂಚನೆ ಹೊರಬಿದ್ದ ಬಳಿಕವೇ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲ ಯದ ಮೂಲಗಳು ತಿಳಿಸಿವೆ. ಇನ್ನೊಂದು ಬೆಳವಣಿಗೆ ಯಲ್ಲಿ ನೀಟ್-ಯುಜಿ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
ಸುಗಮವಾಗಿ ನಡೆದ ಎಫ್ಎಂಜಿಇ ಪರೀಕ್ಷೆ: ವಿದೇಶದಲ್ಲಿ ಎಂಬಿಬಿಎಸ್ ಪಡೆದವರಿಗೆ ದೇಶದಲ್ಲಿ ವೈದ್ಯಕೀಯ ವೃತ್ತಿ ಮುಂದುವರಿಸಲು ಅಥವಾ ಶಿಕ್ಷಣ ಪಡೆಯಲು ಅರ್ಹತೆ ಪಡೆಯಲು ಬೇಕಾಗಿರುವ ಫಾರಿನ್ ಮೆಡಿಕಲ್ ಗ್ರಾಜ್ಯುವೇಟ್ ಎಕ್ಸಾಂ (ಎಫ್ಎಂಜಿಇ) ಶನಿವಾರ ನಿರಾತಂಕವಾಗಿ ಮುಕ್ತಾಯ ಗೊಂಡಿದೆ. ನೀಟ್ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಬಿಗಿ ಕ್ರಮಗಳನ್ನು ಕೈಗೊಂಡಿತ್ತು.
ಮತ್ತೂಮ್ಮೆ ನೀಟ್-ಯುಜಿ ಪರೀಕ್ಷೆ ನಡೆಸಿ: ಕಾಂಗ್ರೆಸ್ ಆಗ್ರಹ
ಕೇಂದ್ರ ಸರಕಾರ ಮತ್ತೂಮ್ಮೆ ಪಾರದರ್ಶಕವಾಗಿ ನೀಟ್-ಯುಜಿ ಪರೀಕ್ಷೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂ ಕೋರ್ಟ್‌ನ ಉಸ್ತುವಾರಿಯಲ್ಲಿ ನೀಟ್-ಯುಜಿ ಸೇರಿದಂತೆ ಎಲ್ಲ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಎಂದು ಸುಳ್ಳು ಹೇಳಿದೆ ಎಂದು ಆರೋಪಿಸಿದ್ದಾರೆ. ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ಜತೆಗೆ ಕೇಂದ್ರ ಸರಕಾರ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.