Advertisement

ಸಿದ್ಧಗಂಗಾ ಸಂಸ್ಥೆಯಿಂದ ನೀಟ್‌ ತರಬೇತಿ

07:23 PM Nov 08, 2020 | Suhan S |

ದಾವಣಗೆರೆ: ಕಳೆದ ಶೈಕ್ಷಣಿಕ ವರ್ಷ 2019-20ನೇ ಸಾಲಿನಲ್ಲಿ ನೀಟ್‌ ಪರೀಕ್ಷೆ ಬರೆದು, ಕೆಲವೇ ಅಂಕಗಳಲ್ಲಿ ವೈದ್ಯಕೀಯ ಸೀಟ್‌ನಿಂದ ವಂಚಿತರಾದ 50ವಿದ್ಯಾರ್ಥಿಗಳಿಗೆ ಉಚಿತವಾಗಿ ದೀರ್ಘಾವಧಿ ನೀಟ್‌ ತರಬೇತಿ ನೀಡಲು ನಗರದ ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆ ಮುಂದಾಗಿದೆ. ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ್‌ ಕೋರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಶಿಕ್ಷಣ ಶಿಲ್ಪಿ, ಸಿದ್ಧಗಂಗಾ ಸಂಸ್ಥೆಯ ಸಂಸ್ಥಾಪಕ ಎಂ.ಎಸ್‌. ಶಿವಣ್ಣನವರ ಸ್ಮರಣಾರ್ಥ ಹಾಗೂ ಸಂಸ್ಥೆಯ ಸುವರ್ಣ ಮಹೋತ್ಸವ ಸವಿನೆನಪಿಗಾಗಿ 2020-21ನೇ ಸಾಲಿನಲ್ಲಿ ನೀಟ್‌ ಪರೀಕ್ಷೆ ಬರೆಯಲು ಇಚ್ಛಿಸುವ ಆಯ್ದ 50 ಮಕ್ಕಳಿಗೆ ದೀರ್ಘಾವಧಿಯ ಉಚಿತ ತರಬೇತಿನೀಡಲಾಗುವುದು. ಕೆಲವೇ ಅಂಕಗಳ ಅಂತರದಿಂದ ಮೆಡಿಕಲ್‌ ಸೀಟ್‌ನಿಂದ ವಂಚಿತರಾದ ಮಕ್ಕಳಿಗೆ ಇದು ಸಂಸ್ಥೆಯ ಕೊಡುಗೆಯಾಗಿದೆ ಎಂದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಬಹಳಷ್ಟು ಮಕ್ಕಳಿಗೆ ನೀಟ್‌ ಪರೀಕ್ಷೆತರಬೇತಿ ಸಮರ್ಪಕವಾಗಿ ಸಿಕ್ಕಿಲ್ಲ. ಕೆಲ ಮಕ್ಕಳು ಕೆಲವೇ ಕೆಲವು ಅಂಕಗಳ ಅಂತರದಲ್ಲಿ ವೈದ್ಯಕೀಯ ಸೀಟ್‌ಕಳೆದುಕೊಂಡಿದ್ದಾರೆ. ಇಂಥ ಮಕ್ಕಳಿಗೆ ಈ ತರಬೇತಿ ಹೆಚ್ಚು ಪ್ರಯೋಜನವಾಗಲಿದೆ ಎಂದರು.

ಸಿದ್ಧಗಂಗಾ ವಿದ್ಯಾಸಂಸ್ಥೆಗೆ 50 ವರ್ಷಗಳು ತುಂಬಲಿದ್ದು, ಇದರ ಅಂಗವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ತಯಾರಿಸಲಾಗಿತ್ತು. ಮಾರ್ಚ್‌ ತಿಂಗಳಲ್ಲಿ 200 ಮಕ್ಕಳಿಗೆ ಉಚಿತ ಸಿಇಟಿ ತರಬೇತಿ ನೀಡುವ ಯೋಜನೆಯೂ ಒಂದಾಗಿತ್ತು. ಕೋವಿಡ್‌-19 ಕಾರಣದಿಂದಾಗಿ ಮಾರ್ಚ್‌ನಿಂದ ಇಲ್ಲಿಯವರೆಗೆ ಶಾಲಾ- ಕಾಲೇಜುಗಳು ಮುಚ್ಚಿರುವುದರಿಂದ ಈ ಯೋಜನೆ ಕಾರ್ಯರೂಪಕ್ಕೆ ತರಲಾಗಲಿಲ್ಲ. ಇದಕ್ಕೆ ಪರ್ಯಾಯವಾಗಿ ಈಗ 50 ಮಕ್ಕಳಿಗೆ ಉಚಿತ ನೀಟ್‌ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.

ವಿದ್ಯಾಸಂಸ್ಥೆಯ ನಿರ್ದೇಶಕ ಡಾ.ಡಿ.ಎಸ್‌. ಜಯಂತ್‌ ಮಾತನಾಡಿ, ಉಚಿತ ನೀಟ್‌ ತರಬೇತಿಗಾಗಿ ನಡೆಯುವ ಆಯ್ಕೆ 2019-20ನೇ ಸಾಲಿನಲ್ಲಿ ನೀಟ್‌ ಪರೀಕ್ಷೆ ಬರೆದ ಅಂಕಗಳ ಆಧಾರದ ಮೇಲೆ ಅವಲಂಬಿಸಿದೆ. ನೀಟ್‌ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 400ಕ್ಕಿಂತ ಹೆಚ್ಚು, ಹಿಂದುಳಿದ ವರ್ಗದವರು 350ಕ್ಕಿಂತ ಹೆಚ್ಚು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಾತಿಗೆ ಸೇರಿದ ವಿದ್ಯಾರ್ಥಿಗಳು 300ಕ್ಕಿಂತ ಹೆಚ್ಚು ಅಂಕಗಳಿಸಿ, ವೈದ್ಯಕೀಯ ಸೀಟ್‌ನಿಂದ ವಂಚಿತರಾಗಿರಬೇಕು. ಅಂಥ ಮಕ್ಕಳ ಕುಟುಂಬದ ವಾರ್ಷಿಕ ಆದಾಯ ಎಂಟು ಲಕ್ಷ ರೂ. ಒಳಗಿರಬೇಕು. ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಗಳೂ ಸಹ ಉಚಿತ ತರಬೇತಿ ಪಡೆಯಬಹುದಾಗಿದೆ ಎಂದರು.

Advertisement

ಮೊದಲು ಬಂದ 50ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ 99822 30899 ಗೆ ಮಿಸ್ಡ್ಕಾಲ್‌ ನೀಡಿ, ನ. 18ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಉಳಿದವರು ನಿಗದಿತ ಶುಲ್ಕ ಪಾವತಿಸಿ ನೀಟ್‌ ತರಬೇತಿ ಪಡೆಯಬಹುದಾಗಿದೆ. ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ವ್ಯವಸ್ಥೆ ಇರುತ್ತದೆ. ನೋಂದಣಿ ಇಂದಿನಿಂದಲೇ ಪ್ರಾರಂಭವಾಗಿದೆ. ಸರಕಾರದ ಮಾರ್ಗಸೂಚಿ ಗಮನಿಸಿ ನ. 23ರಿಂದ ಆನ್‌ಲೈನ್‌ ಇಲ್ಲವೇ ಆಫ್‌ಲೈನ್‌ನಲ್ಲಿ ತರಬೇತಿ ಆರಂಭವಾಗಲಿದೆ ಎಂದರು.

ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯಾಸಂಸ್ಥೆಯಿಂದ ಮೂರನೇ ತರಗತಿಯಿಂದ ಪಿಯುಸಿ ವರೆಗೆ ಅನುಭವಿ ಶಿಕ್ಷಕರು ಮಾಡಿದ ಪಾಠದ ವಿಡಿಯೋಗಳನ್ನು ಮಾಡಿ ಯುಟ್ಯೂಬ್‌ಗ ಹಾಕಲಾಗಿದೆ. 29400 ಜನರು ಚಂದಾದಾರರಾಗಿದ್ದು, 40ಲಕ್ಷ ಜನರು ವೀಕ್ಷಿಸಿದ್ದಾರೆ ಎಂದು ಡಾ. ಜಯಂತ್‌ ಇದೇ ಸಂದರ್ಭದಲ್ಲಿ ತಿಳಿಸಿದರು.

ವಿದ್ಯಾಸಂಸ್ಥೆಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್‌, ಉಪನ್ಯಾಸಕರಾದ ಎಲ್‌.ವಿ. ಸುಬ್ರಹ್ಮಣ್ಯ, ಕೆ.ಸಿ. ಸಿದ್ದಪ್ಪ, ಯು.ಡಿ. ಲಕ್ಷ್ಮೀ ನಾರಾಯಣ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next