ನವದೆಹಲಿ: ನೀಟ್ ಪಿಜಿ 2021ರ ಕೌನ್ಸೆಲಿಂಗ್ ವಿಳಂಬವಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಸತಿ ವೈದ್ಯರು ರಸ್ತೆಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಪ್ರತಿಭಟನಾನಿರತ ವೈದ್ಯರೊಂದಿಗೆ ಸಂಧಾನಕ್ಕೆ ಯತ್ನಿಸಿದರಾದರೂ ಅದು ತೃಪ್ತಿ ತಂದಿಲ್ಲ ಎಂದು ವಸತಿ ವೈದ್ಯರ ಅಸೋಸಿಯೇಷನ್(ಎಫ್ಒಆರ್‌ಡಿಎ) ತಿಳಿಸಿದೆ.
ಎಫ್ಒಆರ್‌ಡಿಎ ಸದಸ್ಯರೊಂದಿಗೆ ಮಾತನಾಡಿರುವ ಸಚಿವರು, “ಸುಪ್ರೀಂ ಕೋರ್ಟ್‌ನ ವಿಚಾರಣೆಯಲ್ಲಿರುವ ಕಾರಣ ಕೌನ್ಸೆಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ಕೌನ್ಸೆಲಿಂಗ್ ನಡೆಸಲಿದ್ದೇವೆ. ಹಾಗಾಗಿ ಈಗ ಹೋರಾಟ ಕೈಬಿಡಿ’ ಎಂದು ಮನವಿ ಮಾಡಿದ್ದಾರೆ.
ಆದರೆ ಸೋಮವಾರ ಪ್ರತಿಭಟನಾನಿರತ ವೈದ್ಯರನ್ನು ಬಂಧಿಸಿರುವ ವಿಚಾರದಲ್ಲಿ ಪೊಲೀಸರು ಲಿಖೀತ ಕ್ಷಮೆ ಕೇಳಬೇಕು ಹಾಗೂ ನೀಟ್ ಕೌನ್ಸೆಲಿಂಗ್ ಶೀಘ್ರವೇ ಮಾಡುವ ಬಗ್ಗೆಯೂ ಲಿಖೀತ ಭರವಸೆ ಕೊಡಬೇಕು ಎಂದು ಎಫ್ಒಆರ್‌ಡಿಎ ಒತ್ತಾಯಿಸಿದೆ.
ಈ ವಿಚಾರವಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. “ಒಂದೆಡೆ ಒಮಿಕ್ರಾನ್ ಹೆಚ್ಚಾಗುತ್ತಿದೆ, ಇನ್ನೊಂದೆಡೆ ವೈದ್ಯರು ಹೋರಾಟದಲ್ಲಿದ್ದಾರೆ. ವೈದ್ಯರು ಆಸ್ಪತ್ರೆಯಲ್ಲಿರಬೇಕೇ ಹೊರತು ರಸ್ತೆಯಲ್ಲಲ್ಲ. ಹಾಗಾಗಿ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ’ ಎಂದು ಪತ್ರದಲ್ಲಿ ಕೋರಿದ್ದಾರೆ.
ಇದನ್ನೂ ಓದಿ : ಎಸ್ಪಿಯದ್ದು ಭ್ರಷ್ಟಾಚಾರದ “ಸುಗಂಧ’! ಎಸ್ಪಿ ವಿರುದ್ಧ ಮೋದಿ ವಾಗ್ಧಾಳಿ