ಕೋವಿಡ್ 19 ಯಾವಾಗ ಕೊನೆಯಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.
ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಕೊನೆಯಾಗಬಹುದು ಮತ್ತು ಆನಂತರ ಪರಿಸ್ಥಿತಿ ಸಂಪೂರ್ಣ ಮೊದಲಿನಂತೆ ಆಗಲಿದೆ ಎಂಬುದರ ಖಚಿತತೆ ಇದ್ದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್), ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡುವುದರಲ್ಲಿ ಅರ್ಥವಿದೆ. ಕೋವಿಡ್ 19 ಅಂತ್ಯ ಯಾವಾಗ ಎಂಬುದೇ ಗೊತ್ತಿಲ್ಲದಿರುವಾಗ ಪರೀಕ್ಷೆ ಮುಂದೂಡುವುದು ಎಷ್ಟು ಸಮಂಜಸ?
ಮುಂದೂಡಿಕೆಯಿಂದ ವಿದ್ಯಾರ್ಥಿಗಳ ಬದುಕಿಗೆ ದೊಡ್ಡ ಹೊಡೆತ ಕೊಟ್ಟಂತಾಗುತ್ತದೆ. ಪರೀಕ್ಷೆಯಿಲ್ಲದೆ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಕೋರ್ಸ್‌ಗಳ ರಾಷ್ಟ್ರಮಟ್ಟದ ಸೀಟು ಹಂಚಿಕೆ ಅಷ್ಟು ಸುಲಭವಿಲ್ಲ.
ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯಲ್ಲಿ ಪಡೆದ ಅಂಕದ ಆಧಾರದಲ್ಲಿ ಸೀಟು ನೀಡಲು ಸಾಧ್ಯವಿಲ್ಲ. ಏಕೆಂದರೆ, ಒಂದೊಂದು ರಾಜ್ಯದಲ್ಲಿ ವಿಭಿನ್ನವಾದ ಮೌಲ್ಯಮಾಪನ ಪದ್ಧತಿಯಿದೆ.
Related Articles
ಮೌಲ್ಯಮಾಪನವು ಪರೀಕ್ಷೆಯ ಫಲಿತಾಂಶ ನೀಡಬಲ್ಲದೇ ವಿನಾ ಅದೊಂದೇ ವೃತ್ತಿಪರ ಕೋರ್ಸ್‌ನ ಸೀಟು ಹಂಚಿಕೆ ಮಾನದಂಡ ಆಗಲಾರದು. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಯಿಲ್ಲದೆ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಯಾದರೆ ಸೀಟು ಪಡೆದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಇದೊಂದು ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲೇಬೇಕು.
ರಾಜ್ಯ ಸರಕಾರ ಬಹಳ ಯಶಸ್ವಿಯಾಗಿ ಈಗಾಗಲೇ ಎಸೆಸೆಲ್ಸಿ, ದ್ವಿತೀಯ ಪಿಯುಸಿ ಇಂಗ್ಲಿಷ್ ಹಾಗೂ ಸಿಇಟಿ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಕೋವಿಡ್ 19 ಈ ಯಾವ ಪರೀಕ್ಷೆಗೂ ಅಡ್ಡಿ ಆಗಲಿಲ್ಲ.
ಸರಕಾರ ವಿದ್ಯಾರ್ಥಿಗಳ ಸುರಕ್ಷೆಗಾಗಿ ಅತ್ಯಂತ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಂಡಿತ್ತು. ಇದೇ ರೀತಿಯ ಸುರಕ್ಷಾ ಕ್ರಮಗಳೊಂದಿಗೆ ನೀಟ್, ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಮತ್ತು ಅದರ ಆಧಾರದಲ್ಲೇ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಯಾಗಬೇಕು.
ಕೋವಿಡ್ 19ನಿಂದ ಎಲ್ಲರಿಗೂ ಸಮಸ್ಯೆಯಾಗಿದೆ ಎಂದು ಪರೀಕ್ಷೆ ಮುಂದೂಡುವುದು ಸರಿಯಲ್ಲ. ದೇಶದ ಕೆಲವೊಂದು ಭಾಗದಲ್ಲಿ ಮಳೆ ಅಥವಾ ಪ್ರವಾಹದಿಂದ ಸಮಸ್ಯೆಯಾಗಿರಬಹುದು. ಅಂಥ ಪ್ರದೇಶದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ನಿರ್ಧಾರವನ್ನು ತೆಗೆದುಕೊಂಡು ಪರೀಕ್ಷೆ ನಡೆಸಬೇಕು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರಗಳ ಮೂಲಕ ಸಾರಿಗೆ ವ್ಯವಸ್ಥೆ ಮಾಡಬೇಕು. ನೀಟ್ ಪರೀಕ್ಷೆ ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಇನ್ನೂ ಎಲ್ಲಿಯ ತನಕ ಮುಂದೂಡುವುದು? ವಿದ್ಯಾರ್ಥಿಗಳ ಒಂದು ವರ್ಷದ ಶೈಕ್ಷಣಿಕ ಜೀವನವೇ ಹಾಳಾಗಬಹುದು.
ಪರೀಕ್ಷೆ ಸಿದ್ಧತೆಗಾಗಿ ಪಟ್ಟ ಶ್ರಮ ವ್ಯರ್ಥವಾದೀತು. ಪಾಲಕ, ಪೋಷಕರಲ್ಲಿ ಆತಂಕ ಸೃಷ್ಟಿಯಾದೀತು. ಹೀಗಾಗಿ ಪರೀಕ್ಷೆ ನಡೆಸಬೇಕು. ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣದ ಪ್ರವೇಶವೂ ಅರ್ಥಪೂರ್ಣವಾಗಿರಬೇಕು.
– ಡಾ| ಎನ್.ಪ್ರಭುದೇವ್, ವಿಶ್ರಾಂತ ಕುಲಪತಿ ಹಾಗೂ ಶಿಕ್ಷಣ ತಜ್ಞ