ಬೆಂಗಳೂರು: ಸರಕಾರಿ ಪಿಯು ಕಾಲೇಜು, ಆದರ್ಶ ವಿದ್ಯಾಲಯದಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ನೀಟ್, ಜೆಇಇ, ಸಿಇಟಿ ಉಚಿತ ತರಬೇತಿ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಮುಂದಿನ ವರ್ಷ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪೇಸ್ ಸಂಸ್ಥೆ ಸಹಯೋಗದೊಂದಿಗೆ 25 ಸಾವಿರ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಉಚಿತ ಆನ್‌ಲೈನ್ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿ, ಬಡವರ ಮಕ್ಕಳು ವೈದ್ಯರು, ಎಂಜಿನಿಯರ್ ಆಗಬೇಕೆಂಬ ಕನಸು ನನಸಾಗಬೇಕು. ಪಾಲಕರಿಗೆ ತರಬೇತಿ ವೆಚ್ಚದ ಹೊರೆ ತಗ್ಗಿಸಲು ಸರಕಾರ ಈ ವ್ಯವಸ್ಥೆ ಮಾಡಿದೆ ಎಂದರು.
ಆಯ್ಕೆಯಾದ ಪಿಯು ವಿಜ್ಞಾನ ಮೊದಲ, 2ನೇ ವರ್ಷದ ತಲಾ 10 ಸಾವಿರ ಮತ್ತು ಆದರ್ಶ ವಿದ್ಯಾಲಯದ 5 ಸಾವಿರ ಸೇರಿ 25 ಸಾವಿರ ವಿದ್ಯಾರ್ಥಿಗಳಿಗೆ ಈ ವರ್ಷ ಉಚಿತ ತರಬೇತಿ ನೀಡಲಾಗುತ್ತದೆ. ಎಲ್ಲರಿಗೂ ಪ್ರತ್ಯೇಕ ಲಾಗಿನ್ ಐಡಿ, ಪುಸ್ತಕ ನೀಡುತ್ತೇವೆ. ಪ್ರತಿದಿನದ ತರಗತಿಗೆ ಮುನ್ನ, ಅನಂತರ 1 ಗಂಟೆ ಕಾಲ ನೀಟ್, ಜೆಇಇ, ಸಿಇಟಿ ಆನ್‌ಲೈನ್ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
15 ಸಾವಿರ ಶಿಕ್ಷಕರ ಹುದ್ದೆ ಭರ್ತಿಗೆ ಪ್ರಸ್ತಾವನೆ
800 ಪಿಯು ವಿಜ್ಞಾನ ಉಪನ್ಯಾಸಕರ ಹುದ್ದೆ ಸೇರಿ 15 ಸಾವಿರ ಶಾಲಾ ಶಿಕ್ಷಕರ ಹುದ್ದೆ ಭರ್ತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಕಲ್ಯಾಣ ಕರ್ನಾಟಕದ ಐದು ಸಾವಿರ ಹುದ್ದೆ ಗಳ ಭರ್ತಿಗೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಇವು ಹೊರತುಪಡಿಸಿ ಇನ್ನೂ 15 ಸಾವಿರ ಶಿಕ್ಷಕರ ಹುದ್ದೆ ಗಳನ್ನು ತುಂಬುವ ಅಗತ್ಯವಿದೆ.
ಎಸ್ಸಿ ಮೀಸಲು ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ| ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗ ವರದಿ ಸಲ್ಲಿಕೆಯಾಗಿ ಸರಕಾರದಿಂದ ಅಂಗೀಕಾರವಾದ ಬಳಿಕ ಕಲ್ಯಾಣ ಕರ್ನಾಟಕದ ಶಿಕ್ಷಕರ ಹುದ್ದೆ ಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.