ನವದೆಹಲಿ: 2004 ಮತ್ತು 2015ರಲ್ಲಾದ ನೀಟ್ -ಯುಜಿ ಹಿಂದಿನ ಘಟನೆಗಳಲ್ಲಿ ಭಾರಿ ಪ್ರಮಾಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರಿಂದ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿಯ ಸೋರಿಕೆಯು ತೀರಾ ಸೀಮಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಿದೆ. ಒಂದು ವೇಳೆ ಪರೀಕ್ಷೆ ರದ್ದುಗೊಳಿಸಿದರೆ, ಪರೀಕ್ಷೆಯಲ್ಲಿ ನ್ಯಾಯೋಚಿತವಾಗಿ ಉತ್ತೀರ್ಣರಾದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತೆ ಆಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಸೋರಿಕೆಯಾದ ವಿವಾದಗಳ ನಡುವೆಯೂ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ರದ್ದುಗೊಳಿಸದಿರುವ ನಡೆಗೆ ವಿವರಣೆ ನೀಡಿದ ಕೇಂದ್ರ ಸಚಿವ ಪ್ರಧಾನ್ ಈ ಪ್ರಕರಣವು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಹೀಗಾಗಿ ಕೋರ್ಟ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ ಎಂದಿದ್ದಾರೆ.
ಯುಜಿಸಿ ನೆಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಎನ್‌ಟಿಎ ‘ಸಾಂಸ್ಥಿಕ ವೈಫಲ್ಯ’ ಎಂದು ಹೇಳಿರುವ ಧರ್ಮೇಂದ್ರ ಪ್ರಧಾನ್, ಸಂಸ್ಥೆಯ ಕಾರ್ಯವೈಖರಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಿದೆ. ಆದರೆ ಪರೀಕ್ಷೆಯನ್ನು ರದ್ದುಗೊಳಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
“ಅಕ್ರಮದ ಕೆಲವು ಪ್ರತ್ಯೇಕ ಪ್ರಕರಣಗಳ ಕಾರಣದಿಂದ, ಪರೀಕ್ಷೆಯನ್ನು ನ್ಯಾಯಬದ್ಧವಾಗಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳ ವೃತ್ತಿ ಜೀವನಕ್ಕೆ ಅಡ್ಡಿಪಡಿಸುವುದು ನ್ಯಾಯಸಮ್ಮತವಲ್ಲ. ನಾವು ಬಿಹಾರ ಪೊಲೀಸರ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರಿಂದ ವರದಿ ಕೇಳಿದ್ದೇವೆ. ಅದು ಕೈ ಸೇರಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾನು ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲಿದ್ದು, ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲಾಗುವುದು. ನಮ್ಮ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ಯಾವುದೇ ಅವ್ಯವಹಾರ ಅಥವಾ ಅಕ್ರಮಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ” ಎಂದು ಪ್ರಧಾನ್ ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯು ಕೆಲವೇ ಸ್ಥಳದಲ್ಲಿ ನಡೆದಿದ್ದು, ಬಿಹಾರದ ಒಂದೆರಡು ವಿದ್ಯಾರ್ಥಿಗಳು ಮಾತ್ರ ಇದರ ಲಾಭ ಪಡೆದಿದ್ದಾರೆ. ಹೀಗಾಗಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬಿಹಾರದಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ಮೂವರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.
ಎನ್‌ಟಿಎ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ
ನೀಟ್ ಯುಜಿ ಪರೀಕ್ಷೆಯಲ್ಲಿ 67 ವಿದ್ಯಾರ್ಥಿಗಳು ಪೂರ್ಣವಾಗಿ 720 ಅಂಕಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿತ್ತು. ತಪ್ಪು ಪ್ರಶ್ನೆಯ ಕಾರಣದಿಂದ ಹಾಗೂ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಿಗುವುದು ವಿಳಂಬವಾದ ಕಾರಣದಿಂದ ಕೆಲವು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸ್ಪಷ್ಟೀಕರಣ ನೀಡಿದೆ. ಮೇ 5ರಂದು ಎನ್‌ಟಿಎ ನಡೆಸಿದ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್ ಯುಜಿ 2024 ಪರೀಕ್ಷೆಯಲ್ಲಿ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೂನ್ 4ರ ನಿಗದಿತ ದಿನಾಂಕಕ್ಕೂ ಮುನ್ನ ಫಲಿತಾಂಶ ಪ್ರಕಟವಾಗಿತ್ತು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಮತ್ತು 1500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಿರುವುದು ವಿವಾದ ಸೃಷ್ಟಿಸಿತ್ತು. ಇದು ವ್ಯಾಪಕ ಪ್ರತಿಭಟನೆಗಳು ಹಾಗೂ ಕಾನೂನು ಹೋರಾಟಗಳಿಗೆ ಎಡೆಮಾಡಿಕೊಟ್ಟಿದೆ. ವಿವಿಧ ಕೋರ್ಟ್‌ಗಳಲ್ಲಿ ದೂರುಗಳು ದಾಖಲಾಗಿದ್ದು, ಈ ವಿಚಾರವನ್ನು ಎನ್‌ಟಿಎ ನಿರ್ವಹಿಸಿದ ರೀತಿಯನ್ನು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿದೆ.