ನವದೆಹಲಿ:ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್ ಗಳಿಗೆ ನಡೆಯಲಿರುವ ನೀಟ್(ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಸೆಪ್ಟೆಂಬರ್ 13ರಂದು ನಡೆಯಲಿದ್ದು, ಈ ವೇಳೆ ನೀಟ್ ಅಧಿಕಾರಿಗಳು ಕಾಶ್ಮೀರಿ ಯುವಕನೊಬ್ಬನ ಮನವಿ ಸ್ವೀಕರಿಸಿದ್ದರು. ಈತ ಬೇರಾರು ಅಲ್ಲ ಪುಲ್ವಾಮಾ ಭಯೋತ್ಪಾದಕ ದಾಳಿಯ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ ಎಂದು ವರದಿ ತಿಳಿಸಿದೆ!
ಸೆಪ್ಟೆಂಬರ್ 13ರಂದು ನಡೆಯಲಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂದು ಪುಲ್ವಾಮಾ ಆರೋಪಿ ವಾಝಿದ್ ಉಲ್ ಇಸ್ಲಾಮ್ ಎನ್ ಐಎ ವಿಶೇಷ ಕೋರ್ಟ್ ಮುಂದೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
40 ಮಂದಿ ಯೋಧರು ಹುತಾತ್ಮರಾದ ಪುಲ್ವಾಮಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಸಲ್ಲಿಸಿದ್ದ 19 ಮಂದಿ ಆರೋಪಿಗಳ ಚಾರ್ಜ್ ಶೀಟ್ ನಲ್ಲಿ ವಾಝಿದ್ ಹೆಸರು ಇದ್ದಿರುವುದಾಗಿ ವರದಿ ತಿಳಿಸಿದೆ. ಮುಂಬರುವ 2020ರ ನೀಟ್ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂದು ಇಸ್ಲಾಮ್ ಎನ್ ಐಎ ವಿಶೇಷ ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಮನವಿ ಮಾಡಿಕೊಂಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಆದರೆ ಈ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 3ರಂದು ನಡೆಯಲಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಎನ್ ಐಎ ಸಿದ್ದತೆ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ನೀಟ್ ಪರೀಕ್ಷೆ ಬರೆಯಲು ಅನುಮತಿ ಕೊಡಬೇಕೆಂಬ ಇಸ್ಲಾಮ್ ಅರ್ಜಿಯನ್ನು ತಿರಸ್ಕರಿಸಬೇಕು. ವಾಜಿದ್ ಜೈಶ್ ನಂತಹ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಇಟ್ಟುಕೊಂಡಿದ್ದ, ಅಲ್ಲದೇ 2019ರ ಭಯೋತ್ಪಾದಕ ದಾಳಿಯಲ್ಲಿನ ಸ್ಫೋಟಕವನ್ನು ಇ ಕಾಮರ್ಸ್ ಸೈಟ್ ಮೂಲಕ ಖರೀದಿಸುವ ಪ್ರಮುಖ ಸೂತ್ರಧಾರಿಗಳಲ್ಲಿ ಇಸ್ಲಾಮ್ ಪ್ರಮುಖನಾಗಿದ್ದಾನೆ ಎಂದು ಎನ್ ಐಎ ದೂರಿದೆ.