Advertisement

ಕಾಸರಗೋಡಿನ ಸಾಹಿತ್ಯ ಲೋಕ: ನೀರ್ಚಾಲು ಗೋಪಾಲಕೃಷ್ಣ ಮಧ್ಯಸ್ಥ

02:30 AM May 21, 2018 | |

ಕಾಸರಗೋಡಿನ ಪವಿತ್ರ ನೆಲದಲ್ಲಿ ಜನಿಸಿ, ಪ್ರಖ್ಯಾತವಾದ ನೀರ್ಚಾಲು ಮಹಾಜನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದು, ಹೊರನಾಡುಗಳಲ್ಲಿ ಉದ್ಯೋಗ ನಿರ್ವಹಿಸುವುದರೊಡನೆ ಕನ್ನಡ ಸಾಹಿತ್ಯ – ಕಲೆಗಳಲ್ಲಿ ತೊಡಗಿಸಿ ಕೊಂಡು ಪತ್ರಿಕೋದ್ಯಮದೊಡನೆ ಕಾಸರಗೋಡಿನ ಸಾಹಿತ್ಯಲೋಕಕ್ಕೆ ಕೀರ್ತಿಯನ್ನು ತಂದಂತಹ ಅನೇಕ ಮಂದಿ ವಿದ್ವಾಂಸರುಗಳಿದ್ದಾರೆ. ಇಂತಹವರಲ್ಲಿ  ನೀರ್ಚಾಲು ಗೋಪಾಲಕೃಷ್ಣ  ಮಧ್ಯಸ್ಥರೂ (ಜಿ.ಕೆ. ಮಧ್ಯಸ್ಥ) ಒಬ್ಬರು.

Advertisement

ಕಾಸರಗೋಡು ನೆಲದಲ್ಲಿ ನೆಲೆಸಿರುವ ಹವ್ಯಕ ಬ್ರಾಹ್ಮಣರಲ್ಲಿ ಮಧ್ಯಸ್ಥರದ್ದು ಒಂದು ಪ್ರತಿಷ್ಠಿತ ಮನೆತನ. ಹಿಂದೆ ಮಾಯಿಪ್ಪಾಡಿ ರಾಜರಿಗೆ ಬಗೆಹರಿಸಲಾಗದ ವ್ಯಾಜ್ಯವೊಂದನ್ನು ಈ ಮನೆತನದ ಹಿರಿಯರೊಬ್ಬರು ಮಧ್ಯಸ್ಥಿಕೆ ವಹಿಸಿ ಬಗೆಹರಿಸಿದುದರಿಂದ ಅರಸರು ಈ ಮನೆತನದವರಿಗೆ “ಮಧ್ಯಸ್ಥ’ ಎಂಬ ಬಿರುದಿನೊಂದಿಗೆ ಬೇಳ ಗ್ರಾಮದ ಕುಂಜಾರುನಲ್ಲಿ ಸ್ಥಳವನ್ನೂ ಉಂಬಳಿಯಾಗಿ ನೀಡಿದರು. ಅಂದಿನಿಂದ ಈ ಮನೆತನದವರು ಮಧ್ಯಸ್ಥರೆಂದೇ ಕರೆಯಲ್ಪಟ್ಟರು ಎಂಬ ಹೇಳಿಕೆಯಿದೆ.

ಈ ಮನೆತನದ ಕೇಶವ ಮಧ್ಯಸ್ಥ – ಪರಮೇಶ್ವರಿ ಅಮ್ಮ ದಂಪತಿಯ ಏಕಮಾತ್ರ ಪುತ್ರರಾಗಿ ನೀರ್ಚಾಲು ಗೋಪಾಲಕೃಷ್ಣ ಮಧ್ಯಸ್ಥರು 1945ರ ಆಗಸ್ಟ್‌ 16ರಂದು ಜನಿಸಿದರು. ಈಶ್ವರಿ (ಗೃಹಿಣಿ), ಸರಸ್ವತಿ (ಗೃಹಿಣಿ) ಅವರು ಸಹೋದರಿಯರು.  ಜಿ.ಕೆ. ಮಧ್ಯಸ್ಥರು ತಮ್ಮ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣವನ್ನು  ನೀರ್ಚಾಲಿನ ಮಹಾಜನ ಸಂಸ್ಕೃತ ಮಹಾವಿದ್ಯಾಲಯದಲ್ಲಿ  ಪಡೆದರು. ಪದವಿ ಶಿಕ್ಷಣವನ್ನು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪಡೆದರು.

ಪತ್ರಿಕೋದ್ಯಮದಲ್ಲಿ ಹೆಚ್ಚಿನ ಆಸಕ್ತಿಯಿದ್ದ ಮಧ್ಯಸ್ಥರು ಸುಮಾರು 4 ದಶಕಗಳ ಕಾಲ ಉದಯವಾಣಿ, ಮುಂಗಾರು, ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದರು. ಅವರು ಆರ್ಥಿಕ ವಿಷಯಗಳನ್ನು ಕುರಿತಂತೆ ಹಾಗೂ ಶಬ್ದಗಳ ಹುಟ್ಟು ಮತ್ತು ಅವು ಪಡೆಯುವ ವಿವಿಧ ಸ್ವರೂಪಗಳನ್ನು ಕುರಿತಂತೆ ಕ್ರಮವಾಗಿ ದುಡ್ಡುಕಾಸು ಮತ್ತು ಪದೋನ್ನತಿ ಎಂಬ ಕೃತಿಗಳನ್ನು ರಚಿಸಿರುತ್ತಾರೆ. ಅವರ ಹಲವಾರು ಕಥೆಗಳು, ಲೇಖನಗಳು ಸುಧಾ, ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದೀಗ ಉಡುಪಿಯಲ್ಲಿ ನೆಲೆಸಿರುವ ಗೋಪಾಲ ಕೃಷ್ಣ ಮಧ್ಯಸ್ಥರ ಸಹಧರ್ಮಿಣಿ ಶಾರದಾ. ಈ ದಂಪತಿಗೆ ಅಶ್ವಿ‌ನಿ ಮತ್ತು ಅನಿತಾ ಎಂಬ ಎರಡು ಹೆಣ್ಣು ಮಕ್ಕಳು. ಏಕಮಾತ್ರ ಪುತ್ರ ನಂದನ್‌ ಸೊÌàದ್ಯೋಗಿಯಾಗಿರುತ್ತಾರೆ.

Advertisement

ಮಧ್ಯಸ್ಥರ ಪ್ರಕಟಿತ ಕೃತಿಗಳು
ಬೆಂಗಳೂರಿನ ವಸಂತ ಪ್ರಕಾಶನದವರು ಅವರ ಪಂಚತಂತ್ರದ ಮನೋಜ್ಞ ಕಥೆಗಳು, ಈಸೋಪ, 101 ಅಜ್ಜನ ನೀತಿ ಕಥೆೆಗಳು, ಅಜ್ಜಿ ಹೇಳಿದ 101 ಕಥೆಗಳು, ಹಿತೋಪದೇಶ, ಮಹಾಭಾರತ, ಶ್ರೀಕೃಷ್ಣ ಲೀಲೆ, ಶ್ರೀಮದ್ಭಾಗವತ, ಹಾಸ್ಯದ ದೊರೆ ತೆನಾಲಿ ರಾಮ, ಛತ್ರಪತಿ ಶಿವಾಜಿ, ಡಾ.ಎಸ್‌.ರಾಧಾಕೃಷ್ಣನ್‌, ಟಿಪ್ಪು ಸುಲ್ತಾನ್‌, ವೀರ ಸಾವರ್ಕರ್‌, ಮಹತ್ವದ ಮಾರ್ಗಗಳು ಎಂಬ ಕೃತಿಗಳನ್ನು ಪ್ರಕಾಶಿಸಿರುತ್ತಾರೆ. ಡಾ| ಅಬ್ದುಲ್‌ ಕಲಾಂ ಅವರ ಟರ್ನಿಂಗ್‌ ಪಾಯಿಂಟ್ಸ್‌, ನನ್ನ ಪಯಣ(ಮೈಜರ್ನಿ), ಅದಮ್ಯ ಚೇತನ, ಸಂಪನ್ನ ಭಾರತ ಸಮೃದ್ಧ ಭಾರತ, ನಿಮ್ಮ ಭವಿಷ್ಯಕ್ಕೊಂದು ರೂಪ ಕೊಡಿ, ಮಹತ್ವದ ಮಾರ್ಗಗಳು ಮೊದಲಾದ ಕೃತಿಗಳನ್ನು  ಕನ್ನಡಕ್ಕೆ ಅನುವಾದಿಸಿರುತ್ತಾರೆ. ಅವರ ಪದೋನ್ನತಿ ಭಾಗ-2 ಕೃತಿಯು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಲಿದೆ.

– ಲೇ: ಕೇಳು ಮಾಸ್ತರ್‌ ಅಗಲ್ಪಾಡಿ        

Advertisement

Udayavani is now on Telegram. Click here to join our channel and stay updated with the latest news.

Next