Advertisement

Sagara: ಫ್ಲೆಕ್ಸ್ ಹಾಕಿದ್ದಕ್ಕೆ ವಿಶೇಷ ಅರ್ಥ ಬೇಡ; ಬೇಳೂರು ಸ್ಪಷ್ಟನೆ

06:04 PM Oct 14, 2024 | Shreeram Nayak |

ಸಾಗರ: ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಎಂದು ಅಭಿಮಾನಿಗಳು ಫ್ಲೆಕ್ಸ್ ಅಳವಡಿಸಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಾಳೆ ಸಾಗರ ಕ್ಷೇತ್ರದಲ್ಲಿ ನನ್ನ ಅಭಿಮಾನಿಗಳು ಗೋಪಾಲಕೃಷ್ಣ ಬೇಳೂರು ಮುಂದಿನ ಮುಖ್ಯಮಂತ್ರಿ ಎಂದು ಫ್ಲೆಕ್ಸ್ ಹಾಕಿಬಿಡಬಹುದು. ಅಭಿಮಾನಿಗಳ ಅಭಿಲಾಷೆಯನ್ನು ನಾವು ನಿಯಂತ್ರಿಸಲು ಆಗುವುದಿಲ್ಲ. ನನ್ನ ಫೋಟೋ ಹಾಕಿ ಮುಂದಿನ ಮುಖ್ಯಮಂತ್ರಿ, ಮಂತ್ರಿ ಎಂದು ಫ್ಲೆಕ್ಸ್ ಹಾಕಿದರೆ ಆಗಿ ಬಿಡುವುದಿಲ್ಲ. ಪಕ್ಷದ ಹೈಕಮಾಂಡ್ ಇದನ್ನು ಒಪ್ಪಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ವಾದ ಮಂಡಿಸಿದರು.

Advertisement

ನಗರವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನವೆಂಬರ್ ಒಂದರ ನಂತರ ನಗರೋತ್ಥಾನ ಕಾಮಗಾರಿ ಪುನರಾರಂಭಗೊಳ್ಳಲಿದೆ. ನಿರಂತರ ಮಳೆ ಬರುತ್ತಿರುವುದರಿಂದ ನಗರೋತ್ಥಾನ, ಒಳಚರಂಡಿ ಕಾಮಗಾರಿ ಕೈಗೊಳ್ಳಲು ತೊಂದರೆಯಾಗಿದೆ. ರಸ್ತೆ ಅಕ್ಕಪಕ್ಕದಲ್ಲಿರುವ ಪಾನಿಪುರಿ ಇನ್ನಿತರ ಅಂಗಡಿಗಳಿಗೆ ಪ್ರತ್ಯೇಕ ಫುಡ್‌ಕೋರ್ಟ್ ನಿರ್ಮಾಣ ಮಾಡಿಕೊಡಲಾಗುತ್ತದೆ.

ಎಲ್ಲೆಂದರಲ್ಲಿ ಅಂಗಡಿಗಳನ್ನು ಹಾಕಿದರೆ ಅವರಿಗೆ ನೋಟಿಸ್ ನೀಡಲು ಸೂಚನೆ ನೀಡಲಾಗಿದೆ. ನಗರದ ಅಂದವನ್ನು ಹಾಳು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

ಆಸ್ಪತ್ರೆ ಹಿಂಭಾಗದ ಪಿಡಬ್ಲ್ಯೂಡಿ ವಸತಿ ಗೃಹವನ್ನು ನೆಲಸಮಗೊಳಿಸಿ ಅಲ್ಲಿ ಆಸ್ಪತ್ರೆಯ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ. ನಗರವ್ಯಾಪ್ತಿಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಲು12ಕೋಟಿ ರೂ. ಯೋಜನೆ ರೂಪಿಸಿದ್ದು, ಮೊದಲ ಹಂತದಲ್ಲಿ 4.80 ಕೋಟಿ ರೂ. ಬಿಡುಗಡೆಯಾಗಲಿದೆ. ನಗರವ್ಯಾಪ್ತಿಯ ಉದ್ಯಾನವನಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಹಾಳಾಗಿರುವ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಮಹಿಳೆಯರ ಬಗ್ಗೆ ತತ್ವಾದರ್ಶದ ಮಾತನಾಡುವ ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ನಗರ ಅಧ್ಯಕ್ಷ ನಗರಸಭೆ ಸಾಮಾನ್ಯ ಸಭೆಯಲ್ಲಿ ಎಸ್‌ಸಿ ಸಮುದಾಯದ ಮಹಿಳೆ ಲಲಿತಮ್ಮ ಅವರನ್ನು ಸಭೆಯಿಂದ ಹೊರಗೆ ಕಳಿಸಿ ಎಂದು ಹೇಳಿರುವುದು ಖಂಡನೀಯ. ಮೀಸಲಾತಿ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಅವರ ಹಕ್ಕು. ನಗರಸಭೆ ಯಾರಪ್ಪನ ಸ್ವತ್ತು ಅಲ್ಲ. ನ್ಯಾಯಾಲಯಕ್ಕೆ ಹೋಗಿದ್ದಾರೆ ಎನ್ನುವ ಕಾರಣಕ್ಕೆ ಸಭೆಯಿಂದ ಹೊರಗೆ ಕಳಿಸಿ ಎನ್ನುವುದು ಬಿಜೆಪಿಯವರ ಕೆಟ್ಟ ಮನಸ್ಥಿತಿ ತೋರಿಸುತ್ತದೆ ಎಂದು ಆಕ್ರೋಶದಿಂದ ಹೇಳಿದರು.

Advertisement

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ ಕಲಸೆ, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ರವಿಕುಮಾರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಶಾಸಕರ ಕರ್ತವ್ಯಾಧಿಕಾರಿ ಟಿ.ಪಿ.ರಮೇಶ್, ಪ್ರಮುಖರಾದ ಅಶೋಕ ಬೇಳೂರು, ಗಿರೀಶ್ ಕೋವಿ, ಉಮೇಶ್ ಸೂರನಗದ್ದೆ, ತಾರಾಮೂರ್ತಿ, ಲಿಂಗರಾಜ್ ಆರೋಡಿ, ಬಸವರಾಜ ಕುಗ್ವೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next