Advertisement

ಐಹೊಳೆ ಮಾಯ; ನೀರಲಕೇರಿ ಉದಯ!

08:58 PM Mar 12, 2021 | Team Udayavani |

ಬಾಗಲಕೋಟೆ: ಕೆಲವೇ ದಿನಗಳಲ್ಲಿ ಹಾಲಿ ಜಿಪಂ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳಲಿದ್ದು, ಹೊಸ ಸದಸ್ಯರ ಆಯ್ಕೆಗೆ ಹೊಸ ಕ್ಷೇತ್ರಗಳ ರಚನೆ ಕಾರ್ಯವೂ ನಡೆಯುತ್ತಿದೆ. ಚುನಾವಣೆ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ಜಿಲ್ಲೆಯಲ್ಲಿ 40 ಜಿಪಂ ಕ್ಷೇತ್ರಗಳ ರಚನೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಪ್ರಾಥಮಿಕ ಕ್ಷೇತ್ರ ಪುನರ್‌ ವಿಂಗಡಣೆ ಕಾರ್ಯ ನಡೆಯುತ್ತಿದೆ.

Advertisement

ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ನಾಲ್ಕು ಜಿ.ಪಂ ಕ್ಷೇತ್ರಗಳು, ತಾಲೂಕಿನಲ್ಲಿ 18 ತಾಪಂ ಕ್ಷೇತ್ರಗಳಿದ್ದವು. ಆಯೋಗದ ಹೊಸ ಮಾರ್ಗಸೂಚಿ ಅನ್ವಯ ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಜಿ.ಪಂ. ಕ್ಷೇತ್ರಗಳು, ತಾಲೂಕಿನಲ್ಲಿ 11 ತಾಪಂ ಕ್ಷೇತ್ರಗಳ ರಚನೆ ಮಾಡಬೇಕಿದೆ.

ಐಹೊಳೆ ಮಾಯ: ಕಳೆದ 2015ರಲ್ಲಿ ನಡೆದ ಜಿ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ಹೊಸ ಕ್ಷೇತ್ರವಾಗಿ ರಚನೆಗೊಂಡಿದ್ದ ಐಹೊಳೆ ಈ ಬಾರಿ ಮಾಯವಾಗಿದೆ. ಈ ಕ್ಷೇತ್ರ ವ್ಯಾಪ್ತಿಯಡಿ ಬರುತ್ತಿದ್ದ ಹಳ್ಳಿಗಳನ್ನು, ಹುನಗುಂದ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹೊಸ ಜಿ.ಪಂ. ಕ್ಷೇತ್ರವಾಗಲಿರುವ ಸೂಳಿಭಾವಿ ಕ್ಷೇತ್ರಕ್ಕೆ ಸೇರಿಸಲಾಗಿದೆ. ಐಹೊಳೆ ಮಾಯಗೊಳಿಸಿ, ಈ ಕ್ಷೇತ್ರದ ಹಳ್ಳಿಗಳನ್ನು ಹುನಗುಂದ ಕ್ಷೇತ್ರದಡಿ ಬರುವ ಸೂಳಿಭಾವಿಗೆ ಸೇರಿಸಲು ಹಲವು ರಾಜಕೀಯ ತಂತ್ರಗಾರಿಕೆಗಳೂ ಒಳಗೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ.

ಐಹೊಳೆ ಜಿ.‌ಪಂ. ಕ್ಷೇತ್ರ ಹುಟ್ಟಿಕೊಳ್ಳುವ ಮೊದಲು, ಕಮತಗಿ ಜಿ.ಪಂ. ಕ್ಷೇತ್ರವಿತ್ತು. ಕಮತಗಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದರಿಂದ, ಐಹೊಳೆ ಹೊಸ ಕ್ಷೇತ್ರ ಹುಟ್ಟಿಕೊಂಡಿತ್ತು.

ನೀರಲಕೇರಿ ಉದಯ: ಈ ವರೆಗೆ ಜಿಪಂ ಕ್ಷೇತ್ರದ ಕೇಂದ್ರ ಸ್ಥಾನ ಹೊಂದಿದ್ದ ಶಿರೂರ, ಈಗ ಪಟ್ಟಣ ಪಂಚಾಯಿತಿ ಆಗಿದೆ. ಹೀಗಾಗಿ ಶಿರೂರ ಬದಲಾಗಿ, ನೀರಲಕೇರಿ ಹೊಸ ಕ್ಷೇತ್ರ ರಚನೆ ಮಾಡಲು ಎಲ್ಲ ರೀತಿಯ ತಯಾರಿ ನಡೆದಿದೆ.

Advertisement

ಬಾಗಲಕೋಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಮೂರು ಜಿ.ಪಂ. ಕ್ಷೇತ್ರಗಳು ಈ ಬಾರಿ ಬರಲಿವೆ. ರಾಂಪುರ, ಬೇವೂರ ಹಾಗೂ ನೀರಲಕೇರಿ ಮಾತ್ರ ಜಿ.ಪಂ. ಕ್ಷೇತ್ರಗಳ ಮಾನ್ಯತೆ ಪಡೆಯಲಿವೆ ಎಂದು ಮೂಲಗಳು ಖಚಿತಪಡಿಸಿವೆ. ಮೀಸಲಾತಿ ತಂತ್ರಗಾರಿಕೆ: ಕಳೆದ 2015ರಲ್ಲಿ ಜಿ.ಪಂ, ತಾ.ಪಂ. ಕ್ಷೇತ್ರಗಳ ಪುನರ್‌ ವಿಂಗಡಣೆ ವೇಳೆ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ಆಗ ಶಾಸಕರಾಗಿದ್ದ ಎಚ್‌.ವೈ. ಮೇಟಿ ಅವರು ರಾಂಪುರ, ಐಹೊಳೆ ಹೊಸ ಕ್ಷೇತ್ರ ರಚನೆ ಆಗುವಲ್ಲಿ ವಿಶೇಷ ಪಾತ್ರ ವಹಿಸಿದ್ದರು. ಜತೆಗೆ ಆಯಾ ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲೂ ಚಾಣಾಕ್ಷéತನ ಮೆರೆದಿದ್ದರು. ಅಂತಹದ್ದೇ ತಂತ್ರಗಾರಿಕೆಯನ್ನು ಈಗ ಬಿಜೆಪಿ ಸರ್ಕಾರ ಹಾಗೂ ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿರುವ ಡಾ|ಚರಂತಿಮಠ ಅವರೂ ಅನುಸರಿಸಲಿರುವುದು ರಾಜಕೀಯ ನಡೆ ಎನ್ನಲಾಗುತ್ತಿದೆ.

ಒಂದು ಖಚಿತ ಮೂಲದ ಪ್ರಕಾರ ರಾಂಪುರ ಜಿ.ಪಂ. ಕ್ಷೇತ್ರವನ್ನು ಹಿಂದುಳಿದ ಬ ವರ್ಗ, ಬೇವೂರ ಕ್ಷೇತ್ರವನ್ನು ಪರಿಶಿಷ್ಟ ಜಾತಿ ಹಾಗೂ ಹೊಸದಾಗಿ ಉದಯವಾಗಲಿರುವ ನೀರಲಕೇರಿ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿ ಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿವೆ ಎನ್ನಲಾಗಿದೆ. ಸದ್ಯ ತಾತ್ಕಾಲಿಕವಾಗಿ ಚುನಾವಣೆ ಆಯೋಗಕ್ಕೆ ಜಿಲ್ಲೆಯಿಂದ ಕಳುಹಿಸಿದ ಹೊಸ ಕ್ಷೇತ್ರಗಳು ಹಾಗೂ ಅವುಗಳ ವ್ಯಾಪ್ತಿಗೆ ಸೇರಿದ ಹಳ್ಳಿಗಳ ವಿವರ ಇಲ್ಲಿವೆ. ಈ ಪ್ರಸ್ತಾವನೆಯನ್ನು ಚುನಾವಣೆ ಆಯೋಗ ಪರಿಶೀಲಿಸಿ, ಅಂತಿಮಗೊಳಿಸಿ, ಅಧಿಸೂಚನೆ ಹೊರಡಿಸಬೇಕಿದೆ. ಸದ್ಯ ನಿಗದಿಯಾದ ಕ್ಷೇತ್ರಗಳು, ಆ ವ್ಯಾಪ್ತಿಗೆ ಸೇರಿದ ಹಳ್ಳಿಗಳ ವಿವರ ತಾತ್ಕಾಲಿಕವಾಗಿವೆ. ಚುನಾವಣೆ ಆಯೋಗ ಇದರಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳೂ ಇವೆ.
ಶ್ರೀಶೈಲ ಕೆ. ಬಿರಾದಾರ 

Advertisement

Udayavani is now on Telegram. Click here to join our channel and stay updated with the latest news.

Next