ಹೊಸದಿಲ್ಲಿ: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಎಫ್ಬಿಕೆ ಗೇಮ್ಸ್‌ನಿಂದ ಹಿಂದೆ ಸರಿದಿದ್ದಾರೆ. ಮತ್ತೆ ಸ್ನಾಯು ಸೆಳೆತಕ್ಕೆ ಸಿಲುಕಿದ್ದು, ಮುನ್ನೆಚ್ಚರಿಕೆಯ ಕಾರಣ ಈ ನಿರ್ಧಾರಕ್ಕೆ ಬಂದಿರುವುದಾಗಿ ಟ್ವೀಟ್ ಮಾಡಿದ್ದಾರೆ.
ನೆದರ್ಲೆಂಡ್ಸ್‌ನ ಹೆಂಗೇಲೊದಲ್ಲಿ ಜೂನ್ 4ರಂದು ಎಫ್ಬಿಕೆ ಗೇಮ್ಸ್ ನಡೆಯಲಿದೆ.
“ಇತ್ತೀಚೆಗೆ ಅಭ್ಯಾಸ ನಡೆಸುತ್ತಿದ್ದಾಗ ನಾನು ಸ್ನಾಯು ಸೆಳೆತಕ್ಕೆ ಒಳಗಾದೆ. ವೈದ್ಯಕೀಯ ತಪಾಸಣೆ ಬಳಿಕ ಮುನ್ನೆಚ್ಚರಿಕೆಯ ಕ್ರಮವಾಗಿ ಎಫ್ಬಿಕೆ ಗೇಮ್ಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಸಂಘಟಕರಿಗೆ ಶುಭ ಹಾರೈಕೆಗಳು. ಪಂದ್ಯಾವಳಿ ಯಶಸ್ಸು ಕಾಣಲಿ’ ಎಂಬುದಾಗಿ ನೀರಜ್ ಚೋಪ್ರಾ ಹೇಳಿದ್ದಾರೆ.
“ಗಾಯ ಎನ್ನುವುದು ಕ್ರೀಡಾ ಪಯಣದ ಅವಿಭಾಜ್ಯ ಅಂಗ. ಇದನ್ನು ತಡೆದು ನಿಲ್ಲುವುದು ಸುಲಭವಲ್ಲ. ನಾನೀಗ ಚೇತರಿಕೆಯ ಹಾದಿಯಲ್ಲಿದ್ದೇನೆ. ಜೂನ್ ತಿಂಗಳಲ್ಲೇ ಟ್ರ್ಯಾಕ್‌ಗೆ ಮರಳುತ್ತೇನೆ’ ಎಂದೂ ನೀರಜ್ ತಿಳಿಸಿದ್ದಾರೆ. ಜೂ. 13ರಂದು ಫಿನ್ಲಂಡ್‌ನ ಟುರ್ಕುದಲ್ಲಿ ನಡೆಯುವ ಪಾವೋ ನುರ್ಮಿ ಗೇಮ್ಸ್‌ಗೆ ಚೋಪ್ರಾ ಮರಳುವ ಸಾಧ್ಯತೆ ಇದೆ.
25 ವರ್ಷದ ನೀರಜ್ ಚೋಪ್ರಾ ಮೇ 5ರಂದು 88.67 ಮೀ. ಸಾಧನೆಯೊಂದಿಗೆ ದೋಹಾ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸಿ ನೂತನ ಸೀಸನ್ ಆರಂಭಿಸಿದ್ದರು.