ನವದೆಹಲಿ: ಟೋಕಿಯೋ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ.
ಸ್ವಿಜರ್‌ಲೆಂಡ್‌ನಲ್ಲಿ ನಡೆದಿದ್ದ ಪ್ರತಿಷ್ಠಿತ ಲಾಸೆನ್ ಡೈಮಂಡ್ ಲೀಗ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಡೈಮಂಡ್ ಲೀಗ್ ಗೆದ್ದ ಕೀರ್ತಿಗೆ ಭಾಜನರಾಗಿದ್ದಾರೆ.
25ರ ಹರೆಯದ ಚೋಪ್ರಾ ಅವರು ಸ್ನಾಯು ಸೆಳೆತದ ಸಮಸ್ಯೆಯಿಂದ ಮೂರು ಸ್ಪರ್ಧೆಗಳಿಂದ ದೂರ ಉಳಿದಿದ್ದರು. ಇದೀಗ ಸ್ವಿಜರ್‌ಲೆಂಡ್‌ನ ಲಾಸೆನ್ ಡೈಮಂಡ್ ಲೀಗ್‌ನ 5ನೇ ಪ್ರಯತ್ನದಲ್ಲಿ 87.66 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.
ಮೊದಲ ಎಸೆತದಲ್ಲಿ ಫೌಲ್ ಮಾಡಿದ್ದ ಚೋಪ್ರಾ, 2ನೇ ಎಸೆತದಲ್ಲಿ 83.52 ಮೀಟರ್, 3ನೇ ಎಸೆತದಲ್ಲಿ 85.04 ಮೀಟರ್ ಜಾವೆಲಿನ್ ಎಸೆದಿದ್ದರು. ಆದರೆ, 4ನೇ ಎಸೆತದಲ್ಲಿ ಮತ್ತೊಂದು ಫೌಲ್ ಮಾಡಿದ್ದ ಚೋಪ್ರಾ, 5ನೇ ಎಸೆತದಲ್ಲಿ 87.66 ದೂರ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಆರನೇ ಮತ್ತು ಕೊನೆಯ ಎಸೆತದಲ್ಲಿಯೂ 84.15 ಮೀಟರ್ ದೂರ ಎಸೆದು ಗಮನ ಸೆಳೆದರು.
ಜರ್ಮನಿಯ ಜೂಲಿಯನ್ ವೆಬರ್ 87.03 ಮೀಟರ್ ದೂರ ಎಸೆದು ಎರಡನೇ ಸ್ಥಾನ ಪಡೆದರೆ, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 86.13 ಮೀ. ದೂರ ಎಸೆಯುವ ಮೂಲಕ ಮೂರನೇ ಸ್ಥಾನ ಪಡೆದರು.