ಲೌಸನ್ನೆ: ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಲಾಸೆನ್ ಡೈಮಂಡ್ ಲೀಗ್ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 89.49 ಮೀಟರ್ ಎಸೆಯುವ ಮೂಲಕ ಋತುವಿನ ಅತ್ಯುತ್ತಮ ಎಸೆತದೊಂದಿಗೆ 2 ನೇ ಸ್ಥಾನ ಪಡೆದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಸ್ಪರ್ಧೆ ಗುರುವಾರ ರಾತ್ರಿ 12.22 ಕ್ಕೆ ಆರಂಭವಾಗಿದ್ದು ನೀರಜ್ ಕೊನೆಯ ಪ್ರಯತ್ನದಲ್ಲಿ 89.49 ಮೀಟರ್ ದೂರವನ್ನು ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಆ್ಯಂಡರ್ಸನ್ ಪೀಟರ್ಸ್ 90.61 ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದರು.
ಲಾಸೆನ್ ಡೈಮಂಡ್ ಲೀಗ್‌ನಲ್ಲಿ ನೀರಜ್ ಚಾಂಪಿಯನ್ ಆಗುತ್ತಾರೆ ಎಂದು ದೇಶ ನಿರೀಕ್ಷಿಸಿತ್ತು. ಎರಡನೇ ಸ್ಥಾನದಲ್ಲಿದ್ದರೂ, ನೀರಜ್ ಅವರ ಈ ಋತುವಿನ ಅತ್ಯುತ್ತಮ ಪ್ರದರ್ಶನವು ಲಾಸೆನ್ ನಲ್ಲಿ ಕಂಡುಬಂದಿದೆ. ನೀರಜ್ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಅಂದರೆ ಮೊದಲ ಐದು ಪ್ರಯತ್ನಗಳಲ್ಲಿ ನೀರಜ್ ಅವರು 82.10, 83.21, 83.13, 82.34 ಮತ್ತು 85.58 ಆಗಿತ್ತು. ಆದರೆ ಆರನೇ ಪ್ರಯತ್ನದಲ್ಲಿ 89.49 ಮೀಟರ್ ದೂರ ಕ್ರಮಿಸಿ ಎರಡನೇ ಸ್ಥಾನಕ್ಕೆ ಏರಿದರು.
ನೀರಜ್ ಚೋಪ್ರಾ 2022ರ ಡೈಮಂಡ್ ಲೀಗ್‌ನಲ್ಲಿ ಚಾಂಪಿಯನ್ ಆಗಿದ್ದರು. ಆದರೆ ಕಳೆದ ವರ್ಷ ಯೂಜಿನ್ ಡೈಮಂಡ್ ಲೀಗ್ ಫೈನಲ್‌ನಲ್ಲಿ ದ್ವಿತೀಯ ಸ್ಥಾನಿಯಾದರು.
ಇದನ್ನೂ ಓದಿ: Chandrayaan 3 Succes: ಇಂದು ರಾಷ್ಟ್ರೀಯ ಬಾಹ್ಯಾಕಾಶ ದಿನ; ಅಂತರಿಕ್ಷದಲ್ಲಿ ಭಾರತ ವಿಕ್ರಮ!