ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚೊಚ್ಚಲ ಚಿನ್ನದ ಪದಕವನ್ನು ಗೆದ್ದಿದ್ದ ಒಲಿಂಪಿಕ್ ವೀರ ನೀರಜ್ ಚೋಪ್ರಾ ಅವರ ಸಾಧನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಭಾನುವಾರ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 88.17 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ಅವರು ಪಾಕಿಸ್ತಾನದ ಅರ್ಷದ್ ನದೀಮ್ ಮತ್ತು ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ವಿರುದ್ಧ ಜಯಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ”ಕ್ರೀಡೆಯಲ್ಲಿ ನೀರಜ್ ಚೋಪ್ರಾ ಅವರ ಶ್ರೇಷ್ಠತೆಯನ್ನು ತೋರಿಸುತ್ತದೆ. ಅವರ ಆಟದ ನಿಖರತೆ ಮತ್ತು ಉತ್ಸಾಹವು ಅವರನ್ನು ಅಥ್ಲೆಟಿಕ್ಸ್‌ನಲ್ಲಿ ಕೇವಲ ಚಾಂಪಿಯನ್ ಆಗಿರದೆ ಇಡೀ ಕ್ರೀಡಾ ಜಗತ್ತಿನಲ್ಲಿ ಸಾಟಿಯಿಲ್ಲದ ಶ್ರೇಷ್ಠತೆಯ ಸಂಕೇತವಾಗಿ ಬೆಳೆದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಕೇಂದ್ರ ಕ್ರೀಡಾ ಸಚಿವರು ಕೂಡ ಟ್ವೀಟ್ ಮಾಡಿದ್ದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲನೇ ಭಾರತೀಯ ಅಥ್ಲೀಟ್ ಆಗಿ ನೀರಜ್ ಚೋಪ್ರಾ ಹೊರಹೊಮ್ಮಿದ್ದಾರೆ. ನಿಮ್ಮ ಸಾಧನೆಗಳ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ ಮತ್ತು ಈ ಕ್ಷಣವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಈ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.