ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕಾಂಗ್ರೆಸ್ ಪಕ್ಷವು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿದೆ. ನೈಜವಾಗಿ ಕಾಂಗ್ರೆಸ್‌ಗೆ ಗುರುಗಳ ಮೇಲೆ ಯಾವ ಗೌರವವೂ ಇಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಕಿಯೊನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ನಾರಾಯಣ ಗುರುಗಳ ಪಾಠವನ್ನು 10 ನೇ ತರಗತಿಯಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಕೆಲವು ದಿನಗಳಿಂದ ಸುದ್ದಿ ಹಬ್ಬಿಸುತ್ತಿದೆ. ಪಾಠವನ್ನು ಕೈಬಿಟ್ಟಿಲ್ಲ ಎಂದು ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಪಠ್ಯದಿಂದ ಗುರುಗಳ ಪಾಠ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಬಿಜೆಪಿಗೆ ನಾರಾಯಣ ಗುರುಗಳ ಬಗ್ಗೆ ಅಪಾರ ಗೌರವವಿದೆ. ಪ್ರಧಾನಿ ಮೋದಿಯವರು ಕೇರಳದ ಶಿವಗಿರಿಗೆ 4 ಬಾರಿ ಭೇಟಿಕೊಟ್ಟಿದ್ದಾರೆ. ರಾಜ್ಯದ ಬಿಜೆಪಿ ಸರಕಾರ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾರಾಯಣ ಗುರು ವಸತಿ ಶಾಲೆಗಳನ್ನು ಮಂಜೂರು ಮಾಡಿದೆ. ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ವಸತಿ ಶಾಲೆಗೆ 14 ಎಕ್ರೆ ಜಾಗ ಮಂಜೂರುಗೊಂಡಿದ್ದು, ಈ ವರ್ಷದಿಂದಲೇ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದರು.
ಬಿಜೆಪಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಿಲ್ಲವ ಮತದಾರರಿದ್ದಾರೆ. ಆದ್ದರಿಂದ ಗುರುಗಳ ವಿಷಯದಲ್ಲಿ ವಿವಾದ ಸೃಷ್ಟಿಸಿದರೆ ಬಿಲ್ಲವ ಸಮುದಾಯದ ಮತ ತಮಗೆ ದೊರೆಯಲಿದೆ ಎಂಬ ಲೆಕ್ಕಾಚಾರದಲ್ಲಿ ಈ ರೀತಿಯ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಬಿಲ್ಲವ ಸಮುದಾಯದವರು ತಪ್ಪಿಯೂ ಮತ ಹಾಕುವುದಿಲ್ಲ ಎಂದರು.
ಕಾಂಗ್ರೆಸ್ ಅವಧಿಯಲ್ಲಿ ಗುರುಗಳನ್ನು ಅವಮಾನಿಸುವ ಕೆಲಸವಷ್ಟೇ ಆಗಿತ್ತು. ಈಗ ಕಾಂಗ್ರೆಸ್‌ಗೆ ಗುರುಗಳ ಮೇಲೆ ಏಕಾಏಕಿ ಗೌರವ ಬಂದಿದೆ. ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರನ್ನಿಡಲು ಮುಂದಾಗ ಮೊದಲು ವಿರೋಧಿಸಿದ್ದೇ ಕಾಂಗ್ರೆಸ್ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುತ್ತಿರುವುದನ್ನು ಕಾಂಗ್ರೆಸ್‌ಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಭಾರತದ ಸಂತರು ಮತ್ತು ಅವರ ಕೊಡುಗೆ, ದೇಶಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳು, ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಕರ ವಿಷಯಗಳು ಗೌಣವಾಗಿದ್ದವು. ಅದನ್ನೆಲ್ಲ ಈಗ ಪಠ್ಯದಲ್ಲಿ ತರುತ್ತಿರುವುದನ್ನು ಕಾಂಗ್ರೆಸ್‌ಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನೈಜ ಇತಿಹಾಸವನ್ನು ಪಠ್ಯದಲ್ಲಿ ತರುವ ಮೂಲಕ ಬಿಜೆಪಿಯಿಂದ ಮಕ್ಕಳಲ್ಲಿ ರಾಷ್ಟ್ರೀಯ ಚಿಂತನೆಹಚ್ಚುವ ಕಾರ್ಯವಾಗುತ್ತಿದೆ ಎಂದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಜಿ.ಪಂ. ಮಾಜಿ ಅಧ್ಯಕ್ಷ ಕೊರಗಪ್ಪ, ಬಿಜೆಪಿ ಪ್ರಮುಖರಾದ ರಾಧಾಕೃಷ್ಣ, ಜಯಶ್ರೀ ಕರ್ಕೇರ ಉಪಸ್ಥಿತರಿದ್ದರು.