Advertisement

ಕೊನೆ ಭಾಗದ ನಾಲೆಗಳಿಗೆ ನೀರು ಹರಿಸಲು ಆಗ್ರಹ

07:20 AM Feb 03, 2019 | Team Udayavani |

ಮಳವಳ್ಳಿ: ಹೆಬ್ಟಾಳ ಚನ್ನಯ್ಯ ನಾಲೆ ಹಾಗೂ ಕೊನೆ ಭಾಗದ ವಿಶ್ವೇಶ್ವರಯ್ಯ ನಾಲೆಗಳಿಗೆ ನೀರು ಹರಿಸುವಂತೆ ಮದೂರು- ಮಳವಳ್ಳಿ ರೈತ ಸಂಘದ ಮುಖಂಡರು ತಾಲೂಕಿನ ಕಾಗೇಪುರದ ಕಾವೇರಿ ನೀರಾವರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದರು.

Advertisement

ರೈತ ಸಂಘದ ಸಭೆಯಲ್ಲಿ ಕೊನೆಯ ಭಾಗಕ್ಕೆ ನೀರು ಬಿಡಬೇಕೆಂದು ಆಗ್ರಹಿಸಿದ್ದರ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ರಾಮಕೃಷ್ಣ ತಮ್ಮ ಕಚೇರಿಯಲ್ಲಿ ಶನಿವಾರ ಸಭೆ ಕರೆದು ರೈತರ ಮನವಿ ಸ್ವೀಕರಿಸಿದರು.

ಚೆನ್ನಯ್ಯನ ನಾಲೆಗೂ ನೀರು ಬಿಡಿ: ರೈತ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿ, ಈಗಾಗಲೇ ವಿಸಿ ನಾಲೆಗೆ ನೀರು ಬಿಡಲಾಗಿದ್ದು, ಕೊನೆಯ ಭಾಗಕ್ಕೂ ನೀರು ತಲುಪಿಸುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಹೆಬ್ಟಾಳ ಚೆನ್ನಯ್ಯ ನಾಲೆಗೆ ಬೀರು ಬೀಡದಿರುವುದರಿಂದ ಮದ್ದೂರು ಮಳವಳ್ಳಿ ವ್ಯಾಪ್ತಿಯಲ್ಲಿ ನಾಲ್ಕು ಸಾವಿರ ಎಕರೆಯಲ್ಲಿ ಬೆಳೆದಿರುವ ಕಬ್ಬು ಸೇರಿ ಇತರೆ ಬೆಳೆಗಳು ಒಣಗುತ್ತಿವೆ.

ಅವುಗಳನ್ನು ಉಳಿಸಬಹುದಾಗಿದೆ. ವಿಸಿ ನಾಲೆಯ ಜೊತೆಗೆ ಅಲ್ಲಿಯೇ ಹೆಬ್ಟಾಳ ಚೆನ್ನಯ್ಯ ನಾಲೆಗೂ ನೀರು ಬಿಡಬೇಕೆಂದು ಮನವಿ ಮಾಡಿದರು. ಕಳೆದ ನಾಲ್ಕು ವರ್ಷದಿಂದ ಬರದಿಂದ ತತ್ತರಿಸಿದ ರೈತರು, ಪ್ರಸಕ್ತ ಸಾಲಿನಲ್ಲಿ ಒಂದು ಬೆಳೆ ಬೆಳೆದಿದ್ದಾರೆ. ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಇನ್ನೂ ಹೆಚ್ಚಿನ ನೀರು ಇದೆ. ಈಗಾಗಲೇ ಬಿತ್ತನೆ ಮತ್ತು ನಾಟಿ ಮಾಡಿರುವ ಬೆಳೆಗಳಿಗೆ ನೀರು ಹರಿಸಿ ಅನ್ನದಾತರನ್ನು ಉಳಿಸಬೇಕು ಎಂದು ಹೇಳಿದರು.

ರೈತರ ನೀರಿನ ಸಮಸ್ಯೆಗೆ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಸ್ಪಂದಿಸಬೇಕಿದೆ. ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಮತ್ತು ಕಾರ್ಖಾನೆ ಅಧಿಕಾರಿಗಳು ರೈತರು ಬೆಳೆದಿರುವ ಬೇಸಿಗೆ ಬೆಳೆ ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಆಗ್ರಹಿಸಿದರು.

Advertisement

ಕೊನೆ ಭಾಗಕ್ಕೂ ನೀರು ಹರಿಸಿ: ಕಸ ಹೂಳಿನಿಂದ ಮುಚ್ಚಿರುವ ನಾಲೆ ದುರಸ್ತಿ ಮಾಡಬೇಕು, ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪುವವರೆಗೂ ಅಧಿಕಾರಿಗಳು ನೀರು ಹರಿಸಬೇಕು ಎಂದ ರೈತ ಸಂಘದ ಕಾರ್ಯಕರ್ತರು, ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿರುವ ನೀರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.

ನೀರು ಹರಿಸುವ ಭರವಸೆ: ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ಮಾತನಾಡಿ, ಈಗಾಗಲೇ ಮೇಲ್ಭಾಗದಲ್ಲಿ ಹರಿದಿರುವ ಕಡೆಗಳಲ್ಲಿ ನೀರು ಕಡಿಮೆ ಮಾಡಿ, ಕೊನೆ ಭಾಗಕ್ಕೂ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದ ನೀರು ಫೆ.6ರವರೆಗೂ ಹರಿಯುವುದರಿಂದ ಹೆಬ್ಟಾಳ ಚೆನ್ನಯ್ಯ ನಾಲೆ ಹಾಗೂ ಕೊನೆ ಭಾಗಕ್ಕೆ ನೀರು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು.

ನಂತರ ಫೆ.15ರಿಂದ 2ನೇ ಕಟ್ಟು ಪದ್ಧತಿಯ ನೀರನ್ನು ಹರಿಸಲಾಗುವುದು ಎಂದು ಹೇಳಿದರು. ರೈತ ಮುಖಂಡರಾದ ದೇವರಾಜು, ಮಾದೇಗೌಡ, ಬೊಪ್ಪಸಮುದ್ರ ದೇವರಾಜು, ರವಿಕುಮಾರ್‌ ಜಯರಾಮು, ನಾಗರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next