Advertisement

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

11:34 PM Apr 29, 2024 | Team Udayavani |

ಬಂಟ್ವಾಳ: ಹೂ ಬೆಳೆಯುವ ಘಟ್ಟ ಪ್ರದೇಶಗಳಲ್ಲಿ ಈ ಬಾರಿ ನೀರಿನ ಕೊರತೆಯ ಕಾರಣಕ್ಕೆ ಹೂವಿನ ಫಸಲು ಗಣನೀಯ ಇಳಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ಎಲ್ಲೆಡೆ ಮಾರುಕಟ್ಟೆಯಲ್ಲಿ ಹೂವಿನ ಧಾರಣೆ ಗಗನಕ್ಕೇರಿದೆ. ಧಾರಣೆ ಏರಿಕೆಯ ಪರಿಣಾಮ ಜನ ಹೂವು ಖರೀದಿ ಪ್ರಮಾಣವನ್ನೂ ಕಡಿಮೆ ಮಾಡಿದ್ದು, ಹೀಗಾಗಿ ಬೇಡಿಕೆಯೂ ಕುಸಿತ ಕಂಡಿದೆ.

Advertisement

ಸಾಮಾನ್ಯವಾಗಿ ಪ್ರತೀ ಯುಗಾದಿಯ ಸಂದರ್ಭದಲ್ಲಿ ಹೂವಿನ ಬೆಳೆಗಾರರು ಹಬ್ಬದ ಸಂದರ್ಭ ಹೂವುಗಳನ್ನು ಕೊಯ್ಯದೇ ಇರುವುದರಿಂದ ಮಾರುಕಟ್ಟೆಗೆ ಹೂವುಗಳು ಬಾರದೆ ಹಬ್ಬದ ಒಂದೆರಡು ದಿನಗಳ ಮೊದಲು ಹಾಗೂ ಅನಂತರ ಧಾರಣೆ ಹೆಚ್ಚಿದ್ದು, ಬಳಿಕ ಸಹಜ ಸ್ಥಿತಿ ಬರುತ್ತಿತ್ತು. ಆದರೆ ಈ ಬಾರಿ ಹಬ್ಬ ಮುಗಿದು 15 ದಿನ ಕಳೆದರೂ ಧಾರಣೆ ಏರುತ್ತಲೇ ಇದೆ.

ಹೂವಿನ ವ್ಯಾಪಾರಿಗಳ ಮಾಹಿತಿಯ ಪ್ರಕಾರ ಕರಾವಳಿ ಭಾಗಕ್ಕೆ ಸೇವಂತಿಗೆಯು ಕುಣಿಗಲ್‌, ಚಿಕ್ಕಬಳ್ಳಾಪುರ, ಹೊಸಕೋಟೆ ಮೊದಲಾದ ಭಾಗಗಳಿಂದ ಆಗಮಿಸುತ್ತಿದ್ದು, ಗೊಂಡೆ ಹೂಗಳು ಕೋಲಾರದಿಂದ ಮೈಸೂರಿಗೆ ಬಂದು ಅಲ್ಲಿಂದ ಕರಾವಳಿಗೆ ಆಗಮಿಸುತ್ತದೆ. ಈ ಭಾಗಗಳಲ್ಲಿ ನೀರಿನ ಕೊರತೆಯ ಕಾರಣಕ್ಕೆ ಸಾಕಷ್ಟು ಬೆಳೆಗಾರರು ಹೂವು ಬೆಳೆಯುವುದನ್ನೇ ಕಡಿಮೆ ಮಾಡಿದ್ದು, ಒಂದಷ್ಟು ಮಂದಿ ಟ್ಯಾಂಕರ್‌ ನೀರು ಹಾಕಿ ಹೂವನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಧಾರಣೆ ಗಣನೀಯ ಏರಿಕೆ ಕಂಡಿದೆ.

ಧಾರಣೆ ಹೀಗಿದೆ
ಮಂಗಳೂರು ಮಾರುಕಟ್ಟೆಯಲ್ಲಿ ಹೂವಿನ ಧಾರಣೆ ನೋಡುವುದಾದರೆ ಸೇವಂತಿಗೆ ಕುಚ್ಚು (15 ಮಾರು) ಈ ಹಿಂದೆ 1,200-1,300 ರೂ. ಇದ್ದು, ಪ್ರಸ್ತುತ ಅದು 1,800-2 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಗೊಂಡೆ ಹೂವಿನ ಕುಚ್ಚಿಗೆ (5 ಕೆಜಿ) 350-400 ರೂ.ಗಳಿಂದ ಸುಮಾರು 900 ರೂ.ಗಳಿಗೆ ಏರಿಕೆಯಾಗಿದೆ. ಕಾಕಡ ಹೂವು ಕೆಜಿಗೆ 550-600 ರೂ.ಗಳಿದ್ದ ಧಾರಣೆ 900 ರೂ.ಗಳಿಗೆ ಏರಿಕೆಯಾಗಿದೆ.

ಧಾರಣೆ ಹೆಚ್ಚಿರುವುದರಿಂದ ಜನರು ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಇತರ ಸಮಾರಂಭಗಳಿಗೆ ಹೂವಿನ ಬಳಕೆಯನ್ನು ಕಡಿಮೆ ಮಾಡಿದ್ದು, ಹೀಗಾಗಿ ಬೇಡಿಕೆಯೂ ಕೊಂಚ ಇಳಕೆಯಾಗಿದೆ. ಮಳೆ ವಿಳಂಬವಾಗಿ ನೀರಿನ ಕೊರತೆ ಇನ್ನಷ್ಟು ಕಾಡಿದರೆ ಧಾರಣೆ ಇನ್ನಷ್ಟು ಏರುವ ಸಾಧ್ಯತೆ ಇದ್ದು, ಆದರೆ ಸಮಾರಂಭಗಳು ಕಡಿಮೆಯಾದರೆ ಹೂವಿಗೆ ಬೇಡಿಕೆ ಕಡಿಮೆಯಾಗಿ ಧಾರಣೆ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆಯೂ ಇದೆ.

Advertisement

ಮಲ್ಲಿಗೆ ಧಾರಣೆ ಇಳಿಕೆ
ಬೇಸಗೆಯ ದಿನಗಳಲ್ಲಿ ಮಲ್ಲಿಗೆ ಫಸಲು ಉತ್ತಮವಾಗಿದ್ದು, ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಹೂಗಳು ಮಾರುಕಟ್ಟೆಗೆ ಬರುತ್ತಿವೆ. ಈ ಕಾರಣಕ್ಕೆ ಪ್ರಸ್ತುತ ಮಲ್ಲಿಗೆ ಧಾರಣೆ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಒಂದೆರಡು ಮಳೆ ಬಿದ್ದರೆ ಮಲ್ಲಿಗೆ ಫಸಲು ಇಳಿಕೆಯಾಗಿ ಧಾರಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ಹೂವಿನ ವ್ಯಾಪಾರಿಗಳ ಅಭಿಪ್ರಾಯ.

ಘಟ್ಟ ಪ್ರದೇಶಗಳಲ್ಲಿ ನೀರಿನ ಕೊರತೆಯ ಕಾರಣಕ್ಕೆ ಹೂವಿನ ಫಸಲು ಕಡಿಮೆಯಾಗಿದ್ದು, ಹೀಗಾಗಿ ಧಾರಣೆ ಅಧಿಕಗೊಂಡಿದೆ. ಧಾರಣೆ ಹೆಚ್ಚಿರುವ ಕಾರಣಕ್ಕೆ ಸಮಾರಂಭಗಳಿಗೆ ಹೆಚ್ಚು ಹೂಗಳನ್ನು ಬಳಸುತ್ತಿದ್ದವರು ಕಡಿಮೆ ಮಾಡಿದ್ದಾರೆ. ಬೇಸಗೆಯಲ್ಲಿ ಮಲ್ಲಿಗೆ ಹೆಚ್ಚಾಗುತ್ತಿದ್ದು, ಅದರ ಧಾರಣೆ ಕಡಿಮೆ ಇದೆ.
– ಸಂತೋಷ್‌ ಪೈ, ಹೂವಿನ ವ್ಯಾಪಾರಿ, ರಥಬೀದಿ, ಮಂಗಳೂರು

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next